ಸಿಡಿ ಬಗ್ಗೆ ಮೊದ್ಲೇ ಗೊತ್ತಿತ್ತು, 5 ಕೋಟಿ ರೂ ವ್ಯವಹಾರ ಆಗಿದೆ ಎಂದಿದ್ದ ಹೆಚ್ಡಿಕೆ- ರಮೇಶ್ ಜಾರಕಿಹೊಳಿ ವಿರುದ್ಧ ಎಸಿಬಿಗೆ ದೂರು
ರಮೇಶ್ ಜಾರಕಿಹೊಳಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ಮಾಡಬೇಕು ಮತ್ತು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರಕ್ಕೆ ಸಹಕರಿಸಿದ ಕಾರಣಕ್ಕೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಲಾಗಿದೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಕೀಲ ಮಂಜುನಾಥ್ ಎನ್ನುವವರು ಎಸಿಬಿಗೆ ದೂರು ನೀಡಿದ್ದಾರೆ. ಸಿಡಿ ವಿಷಯದಲ್ಲಿ ಭಾರೀ ಹಣ ವರ್ಗಾವಣೆಯಾಗಿದೆ ಎಂಬ ಆರೋಪ ಮೊದಲಿಂದಲೂ ಕೇಳಿ ಬಂದಿದ್ದು, ನಂತರ ರಮೇಶ್ ಜಾರಕಿಹೊಳಿ ಸಹ ಎಸ್ಐಟಿ ಮುಂದೆ ಐದು ಕೋಟಿ ರೂಪಾಯಿ ನೀಡಿರುವುದಾಗಿ ಹೇಳಿದ್ದರು. ಅಲ್ಲದೇ ಇದಕ್ಕೆ ಪೂರಕವಾಗಿ ಹೆಚ್. ಡಿ.ಕುಮಾರಸ್ವಾಮಿ ಅವರೂ ಹೇಳಿಕೆ ನೀಡಿದ್ದರು. ಈಗ ಇವೆರೆಡೂ ಅಂಶಗಳನ್ನು ಇಟ್ಟುಕೊಂಡು ಎಸಿಬಿಗೆ ದೂರು ನೀಡಲಾಗಿದೆ. ಆ ಮೂಲಕ ಸಿಡಿ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಕಡೆಗಳಲ್ಲಿ ದಾಖಲಾಗುತ್ತಿರುವ ದೂರುಗಳ ಸರಮಾಲೆ ಮುಂದುವರೆದಿದೆ.
ರಮೇಶ್ ಜಾರಕಿಹೊಳಿ ಹಣ ನೀಡಿರುವುದಾದರೆ ಆ ಹಣದ ಮೂಲ ಯಾವುದು? ಹಣವನ್ನು ಮಾಜಿ ಸಚಿವರು ಯಾವ ರೀತಿ ನೀಡಿದ್ದಾರೆ? ಎಂದು ತನಿಖೆ ನಡೆಸುವಂತೆ ಜಾರಕಿಹೊಳಿ ವಿರುದ್ಧ ದೂರು ದಾಖಲಾಗಿದ್ದರೆ, ಇತ್ತ ಸುದ್ದಿಗೋಷ್ಠಿ ನಡೆಸಿ ಸಿಡಿ ವಿಷಯದಲ್ಲಿ ಐದು ಕೋಟಿ ಡೀಲ್ ಆಗಿದೆ ಎಂದು ನಾನು ಮೊದಲೇ ಹೇಳಿದ್ದೆ ಎಂದ ಹೆಚ್.ಡಿ.ಕುಮಾರಸ್ವಾಮಿ ವಿಚಾರ ಗೊತ್ತಿದ್ದರೂ ಸದನದಲ್ಲಿ ಪ್ರಸ್ತಾಪಿಸದೆ, ತನಿಖಾ ಸಂಸ್ಥೆಗೂ ಹೇಳದೇ ಭ್ರಷ್ಟಾಚಾರಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಿ ದೂರು ಕೊಡಲಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ರಮೇಶ್ ಜಾರಕಿಹೊಳಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ಮಾಡಬೇಕು ಮತ್ತು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರಕ್ಕೆ ಸಹಕರಿಸಿದ ಕಾರಣಕ್ಕೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ: ಅಶ್ಲೀಲ ಸಿಡಿಯಲ್ಲಿ ಅವಾಚ್ಯ ಶಬ್ದಗಳ ಬಳಕೆ; ಕನ್ನಡಿಗರನ್ನು ನಿಂದಿಸಿದ್ದಕ್ಕಾಗಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು
ಹೆಚ್.ಡಿ.ಕುಮಾರಸ್ವಾಮಿಯೇ ಸಿಡಿ ‘ಮಹಾನಾಯಕ’ ಇರಬಹುದು, ಎಸ್ಐಟಿ ಪೊಲೀಸರು ಅವರ ತನಿಖೆ ಮಾಡಲಿ: ಕೆ.ಎನ್.ರಾಜಣ್ಣ
Published On - 3:45 pm, Fri, 19 March 21