ಬೆಂಗಳೂರು.ಮೈಸೂರು, (ಮೇ 23): ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಈಗ ವಿಧಾನ ಪರಿಷತ್ ಪ್ರವೇಶಕ್ಕೆ(legislative council election) ಫೈಟ್ ಜೋರಾಗಿದೆ. ಕಾಂಗ್ರೆಸ್-ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ತಂತ್ರಗಾರಿಕೆ ನಡೀತಿದೆ. ಜೂನ್ 13ರಂದು ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಲೆಕ್ಕಾಚಾರ ಜೋರಾಗಿದೆ. 136 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಏಳು ಸ್ಥಾನಗಳನ್ನು, 66 ಶಾಸಕರನ್ನು ಹೊಂದಿರುವ ಬಿಜೆಪಿ ಮೂರು ಮತ್ತು 19 ಶಾಸಕರನ್ನು ಹೊಂದಿರುವುದರಿಂದ ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲಬಹುದು. ಇನ್ನು ಕಾಂಗ್ರೆಸ್ ಪಾಳಯದಲ್ಲಿ 7 ಸ್ಥಾನಕ್ಕೆ 40ಕ್ಕೂ ಹೆಚ್ಚು ಮಂದಿ ಟವೆಲ್ ಹಾಕಿದ್ದಾರೆ. ಅದರಲ್ಲೂ ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯಗೆ(yathindra siddaramaiah) ಪರಿಷತ್ ಟಿಕೆಟ್ ನೀಡುವಂತೆ ಒತ್ತಾಯಗಳು ಕೇಳಿಬಂದಿದ್ದು, ಅವರ ಹೆಸರು ಮುಂಚೂಣಿಯಲ್ಲಿದೆ.
ಡಾ.ಯತೀಂದ್ರ ಸಿದ್ದರಾಮಯ್ಯಗೆ ಪರಿಷತ್ ಟಿಕೆಟ್ ನೀಡುವಂತೆ ಮೈಸೂರು ಜಿಲ್ಲೆ ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. ಡಾ.ಯತೀಂದ್ರ ಸಿದ್ದರಾಮಯ್ಯ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಾರೆ. ವರುಣಾ ಕ್ಷೇತ್ರದಲ್ಲಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯರ ಗೆಲುವಿನಲ್ಲಿ ಡಾ.ಯತೀಂದ್ರ ಪಾತ್ರ ಬಹುದೊಡ್ಡದು. ಮೈಸೂರು ಕ್ಷೇತ್ರದ ಎಲ್ಲಾ ಕಡೆ ಸಂಚರಿಸಿ ಸಂಘಟನೆ ಮಾಡಿದ್ದಾರೆ. ಯತೀಂದ್ರ ಅವರಂತಹ ಸಜ್ಜನ ವ್ಯಕ್ತಿ ರಾಜಕಾರಣದಲ್ಲಿ ಇರಬೇಕು. ಹೀಗಾಗಿ ಯತೀಂದ್ರಗೆ ಪರಿಷತ್ ಟಿಕೆಟ್ ನೀಡುವಂತೆ ‘ಕೈ’ಮುಖಂಡರ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Karnataka MLC Election 2024: ಕರ್ನಾಟಕ ವಿಧಾನ ಪರಿಷತ್ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ
ಸಿಎಂ ಪುತ್ರ ಯತೀಂದ್ರ ತಂದೆಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಹೀಗಾಗಿ ಯತೀಂದ್ರಗೂ ಮೇಲ್ಮನೆ ಸ್ಥಾನ ಕಲ್ಪಿಸಬೇಕಾಗಿದ್ದು, ಲಿಸ್ಟ್‌ನಲ್ಲಿ ಮೊದಲ ಪ್ರಾಶಸ್ತ್ಯ ಸಿಗುವ ಸಾಧ್ಯತೆ ಇದೆ. ಇನ್ನೂ ಸಚಿವರಾಗಿರೋ ಬೋಸರಾಜು ಎಂಎಲ್‌ಸಿ ಟಿಕೆಟ್ ಸಿಗೋ ಸಾಧ್ಯತೆ ಇದೆ. ಹಾಗೆಯೇ ಬಿ.ಎಲ್ ಶಂಕರ್, ಪುಷ್ಪ ಅಮರನಾಥ್, ಐವಾನ್ ಡಿಸೋಜಾ, ಡಾ.ಕೆ.ಗೋವಿಂದರಾಜ್ ರೇಸ್‌ನಲ್ಲಿದ್ದಾರೆ. ವಿಜಯ್ ಕುಮಾರ್, ಎಂ.ಸಿ.ವೇಣುಗೋಪಾಲ್, ಪ್ರಸನ್ನ ಕುಮಾರ್ ಟಿಕೆಟ್‌ಗಾಗಿ ಪೈಪೋಟಿ ನಡೆಸ್ತಿದ್ದಾರೆ. ರಾಣಿ ಸತೀಶ್, ಸಂಪತ್ ರಾಜ್, ವಿನಯ್ ಕಾರ್ತಿಕ್ ಕೂಡಾ ಟವೆಲ್ ಹಾಕಿದ್ದಾರೆ.
ಇನ್ನೂ ಬಿಜೆಪಿಗೂ ಮೂರು ಸ್ಥಾನ ಗೆಲ್ಲೋ ಅವಕಾಶವಿದೆ. ಆದ್ರೆ, ಮೂರು ಸ್ಥಾನಕ್ಕೆ ಹಲವು ಆಕಾಂಕ್ಷಿಗಳು ಟವೆಲ್ ಹಾಕಿದ್ದಾರೆ. ಮಾಜಿ ಸಚಿವ ಸಿ.ಟಿ.ರವಿ ಹೆಸರು ಮುಂಚೂಣಿಯಲ್ಲಿದ್ರೆ, ಅದೇ ರೀತಿ ಮಾಜಿ ಮಂತ್ರಿ ಮಾಧುಸ್ವಾಮಿ ಸಹ ರೇಸ್ ನಲ್ಲಿದ್ದಾರೆ. ಇನ್ನು, ಎ.ಎಸ್. ಪಾಟೀಲ್ ನಡಳ್ಳಿ, ಮಾಜಿ ಉಪ ಮೇಯರ್ ಮತ್ತು ನೇಕಾರ ಸಮುದಾಯದ ಎಸ್.ಹರೀಶ್, ಕೊಡವ ಸಮುದಾಯದ ರೀನಾ ಪ್ರಕಾಶ್, ಮೊಗವೀರ ಸಮುದಾಯದ ಪ್ರಮೋದ್ ಮಧ್ವರಾಜ್, ಕೋಲಿ ಸಮುದಾಯದ ಎನ್.ರವಿಕುಮಾರ್ ಹಾಗೂ ಕುರುಬ ಸಮುದಾಯದ ರಘುನಾಥ್ ರಾವ್ ಮಲ್ಕಾಪುರೆ ಹೆಸರು ಟಾಪ್ ಲಿಸ್ಟ್ ನಲ್ಲಿದೆ ಎನ್ನಲಾಗಿದೆ.
ಇನ್ನೂ ಜೆಡಿಎಸ್ ಗೆ ಕೇವಲ 1 ಸ್ಥಾನ ದೊರಕುವ ಸಾಧ್ಯತೆ ಇದ್ದು, ಹೆಚ್.ಡಿ.ಕುಮಾರಸ್ವಾಮಿ ಲೋಕಸಭಾ ಚುನಾವಣೆ ಗೆದ್ದರೆ ಒಂದು ಮತ ಕಡಿಮೆಯಾಗಲಿದೆ. ಹೀಗಾಗಿ ಹೆಚ್ಚುವರಿ ಮತ ಸೇರಿದಂತೆ ಎರಡು ಮತದ ಅವಶ್ಯಕತೆ ಜೆಡಿಎಸ್‌ಗೆ ಇದೆ. ಈಗಾಗಲೇ ಬಿಜೆಪಿ ನಾಯಕರ ಜತೆ ಮಾತುಕತೆ ಸಹ ನಡೆದಿದ್ದು, ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ, ಫಾರೂಕ್ ಹಾಗೂ ಜವರಾಯಿಗೌಡ ಹೆಸರು ಜೋರಾಗಿಯೇ ಕೇಳಿ ಬಂದಿದೆ. ಒಟ್ಟಿನಲ್ಲಿ ಪರಿಷತ್ ಎಂಬ ರಾಜಕೀಯದ ಹಾವು ಏಣಿ ಆಟದಲ್ಲಿ ಕ್ಷಣಕ್ಷಣಕ್ಕೂ ಏರಿಳಿತಗಳು ಜೋರಾಗುತ್ತಲೇ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ