ಬಳ್ಳಾರಿ: ಮೈಸೂರು, ಬೆಂಗಳೂರು ನಂತರ ಇದೀಗ ಬಳ್ಳಾರಿ ಜಿಲ್ಲೆಯಲ್ಲೂ ಚಿರತೆ ಆತಂಕ ಹೆಚ್ಚಾಗಿದೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ನಂದಿಹಳ್ಳಿಯ ಶ್ರೀಕೃಷ್ಣ ದೇವರಾಯ ವಿವಿಯ ಪಿಜಿ ಸೆಂಟರ್ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಕಂಡು ಪಿಜಿ ಸೆಂಟರ್ನ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಚಿರತೆ ಭಯದಿಂದ ರಾತ್ರಿ ಹೊತ್ತು ವಿದ್ಯಾರ್ಥಿಗಳು ಹೊರಬರುತ್ತಿಲ್ಲ. ಕಳೆದ ಒಂದು ವಾರದಿಂದ ಪಿಜಿ ಸೆಂಟರ್ ಸುತ್ತಮುತ್ತ ಚಿರತೆ ಓಡಾಡುತ್ತಿದೆಯಂತೆ. ಚಿರತೆ ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಬೋನ್ ಇರಿಸಿದ್ದಾರೆ.
ಮಾಲೂರಿನಲ್ಲೂ ನಿದ್ದೆ ಕೆಡಿಸಿದ ಚಿರತೆ
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಓಬಟ್ಟಿ ಗ್ರಾಮದಲ್ಲೂ ಚಿರತೆ ಆತಂಕ ಮನೆ ಮಾಡಿದೆ. ಚಿರತೆ ಕಾಟದಿಂದಾಗಿ ಕಳೆದ 15 ದಿನಗಳಿಂದ ಗ್ರಾಮಸ್ಥರ ನಿದ್ದೆಗೆಟ್ಟಿದೆ. ಓಬಟ್ಟಿ ಗ್ರಾಮದಲ್ಲಿ ಈ ಚಿರತೆ ಕುರಿ, ಕೋಳಿಗಳ ಬಲಿ ಪಡೆದಿದೆ. ಹೀಗಾಗಿ ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮನೆ ಮುಂದೆ ಕಟ್ಟಿದ್ದ ನಾಯಿಯ ಮೇಲೆ ಚಿರತೆ ಆಕ್ರಮಣ, ನಾಯಿ ಬೊಗಳತೊಡಗಿದಾಗ ಪಲಾಯನ
ಇನ್ನೂ ಸಿಗದ ಚಿರತೆ, ಜನರಲ್ಲಿ ಆತಂಕ
ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿ ಬಳಿಯ ಐಟಿಸಿ ಪ್ಯಾಕ್ಟರಿ ಬಳಿ ಚಿರತೆ ಪ್ರತ್ಯಕ್ಷವಾಗಿ ಒಂದು ವಾರ ಕಳೆದ್ರು ಚಿರತೆಯ ಸುಳಿವು ಸಿಕ್ಕಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗೆ ಚಿರತೆ ಸಿಗದ ಕಾರಣ ಆತಂಕ ಶುರುವಾಗಿದೆ. ಐಟಿಸಿ ಪ್ಯಾಕ್ಟರಿ ಸೇರಿದಂತೆ ಹಲವೆಡೆ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ವೇಳೆ ಕೂಂಬಿಂಗ್ ಮಾಡುತ್ತಿದ್ದಾರೆ. ತರಬನಹಳ್ಳಿ, ಮೀನುಕುಂಟೆ ಹೊಸೂರು, ಸಾದಹಳ್ಳಿ ಸೇರಿದಂತೆ ಹಲವಡೆ ಕೂಂಬಿಂಗ್ ಮಾಡಲಾಗುತ್ತಿದೆ. ಎಲ್ಲೂ ಸಹ ಚಿರತೆಯ ಸುಳಿವು ಸಿಕ್ಕಿಲ್ಲ. ಆದ್ರೆ ತರಬನಹಳ್ಳಿಯ ರೈತ ಸತೀಶ್ ತೋಟದಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ.
ಕಳೆದ ರಾತ್ರಿ ತೋಟದಲ್ಲಿ ಓಡಾಡಿರುವ ಚಿರತೆಯ ಹೆಜ್ಜೆ ಗುರುತುಗಳು ಸಿಕ್ಕಿವೆ. ನೆನ್ನೆಯಷ್ಟೆ ರಸ್ತೆ ಮಾಡಲು ಮಣ್ಣು ಹಾಕಿ ಸತೀಶ್ ಸಮತಟ್ಟು ಮಾಡಿದ್ದರು. ಇದೀಗ ಅದೇ ಮಣ್ಣಿನ ಮೇಲೆ ಹೊಸ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಆದರೆ ಅರಣ್ಯಾಧಿಕಾರಿಗಳು ITC ಪ್ಯಾಕ್ಟರಿ ಒಳಗೆ ಬೋನ್ ಇಟ್ಟಿದ್ದಾರೆ. ಗ್ರಾಮದ ತೋಟಗಳ ಬಳಿಯಿಟ್ಟಿಲ್ಲ ಅಂತ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಬೋನ್ ಒಳಗಿದ್ದ ನಾಯಿಗೆ ಪ್ರದಕ್ಷಿಣೆ ಹಾಕಿ ಹೋದ ಚಿರತೆ!
ಇನ್ನೂ ದೊಡ್ಡಬಳ್ಳಾಪುರದ ಚನ್ನಾಪುರದಲ್ಲೂ ಚಿರತೆ ಹಾವಳಿ ಹೆಚ್ಚಾಗಿದೆ. ಚಿರತೆ ಭೀತಿಯಿಂದ ಕೃಷಿ ಕೆಲಸಗಳಿಗೆ ಕಾರ್ಮಿಕರು ಬರ್ತಿಲ್ಲ. ಹೀಗಾಗಿ ರೈತರು ಪರದಾಡ್ತಿದ್ದಾರೆ. ತೋಟದ ಮನೆಗಳಿರೋ ಪ್ರದೇಶದಲ್ಲಿ ಚಿರತೆ ಹೆಜ್ಜೆಗುರುತು ಪತ್ತೆಯಾಗಿದ್ದು, ಬೋನ್ ಒಳಗೆ ನಾಯಿ ಇದ್ರೂ, ಪಕ್ಕದಲ್ಲೇ ಚಿರತೆ ಓಡಾಡಿ ಪ್ರದಕ್ಷಿಣೆ ಹಾಕಿದೆ. ಆದ್ರೂ, ಬೋನ್‌ನಲ್ಲಿ ಲಾಕ್ ಲಾಕ್ ಆಗದೇ ಆಟವಾಡಿಸಿದೆ.
ಟಿ.ನರಸೀಪುರ ತಾಲೂಕಿನ ಕೇತುಪುರ ಗ್ರಾ.ಪಂ. ವತಿಯಿಂದ ಜಾಗೃತಿ
ಮೈಸೂರು: ಟಿ.ನರಸೀಪುರ ತಾಲೂಕಿನ ಹಲವೆಡೆ ಚಿರತೆ ಹಾವಳಿ ಹಿನ್ನೆಲೆ ಟಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮ ಪಂಚಾಯಿತಿ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಸಂಜೆ 5 ಗಂಟೆ ನಂತರ ಮನೆಯಿಂದ ಹೊರ ಬರದಂತೆ ಮೈಕ್ ಮೂಲಕ, ಕರಪತ್ರ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಈ ಹಿಂದೆ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ