ಬಿಎಸ್ವೈ, ವಿಜಯೇಂದ್ರ ವಿರುದ್ಧ ಹೈಕಮಾಂಡ್ಗೆ ಬಿಜೆಪಿ ಕಾರ್ಯಕರ್ತರ ಪತ್ರ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
ಬಿಜೆಪಿ ರಾಜ್ಯ ಘಟಕದಲ್ಲಿ ಆಂತರಿಕ ಕಲಹ ತಾರಕಕ್ಕೇರಿದ್ದು, ಕಾರ್ಯಕರ್ತರು ಬರೆದಿದ್ದೆನ್ನಲಾದ ಒಂದು ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪತ್ರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಹೊಂದಾಣಿಕೆ ರಾಜಕಾರಣದ ಆರೋಪ ಕೇಳಿಬಂದಿದೆ. ಡಿಕೆ ಶಿವಕುಮಾರ್ ಜತೆ ವಿಜಯೇಂದ್ರ ಉದ್ಯಮ ಹಿತಾಸಕ್ತಿ ಹೊಂದಿದ್ದಾರೆಂಬುದೂ ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿದೆ. ವಿವರ ಇಲ್ಲಿದೆ.
ಬೆಂಗಳೂರು, ಡಿಸೆಂಬರ್ 3: ಒಂದೆಡೆ ಪಕ್ಷ ಸಂಘಟನೆಗಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಬೆಂಗಳೂರಿ ಬಂದಿದ್ದರೆ, ಮತ್ತೊಂದೆಡೆ ಪಕ್ಷದ ಆಂತರಿಕ ಕಲಹ ತಾರಕಕ್ಕೇರುತ್ತಿದೆ. ಅತ್ತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇತೃತ್ವದ ತಂಡ ದೆಹಲಿಯಲ್ಲಿ ಬೀಡುಬಿಟ್ಟಿದೆ. ಏತನ್ಮಧ್ಯೆ, ಬಿಜೆಪಿಯ ಕೆಳ ಹಂತದ ಕಾರ್ಯಕರ್ತರು ಬರೆದಿದ್ದು ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಬರೆದಿದ್ದು ಎನ್ನಲಾದ ಪತ್ರದಲ್ಲಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿಳಾಸಕ್ಕೆ ಪತ್ರ ಬರೆಯಲಾಗಿದೆ. ಸದ್ಯ, ಪತ್ರದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಯಡಿಯೂರಪ್ಪ ಹಾಗೂ ವಿಜಯೇಂದ್ರ ಸಿಎಂ, ಡಿಸಿಎಂ ಜೊತೆ ಒಪ್ಪಂದದ ರಾಜಕೀಯ ಮಾಡಿಕೊಂಡಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸೋಲಲು ಕಾರಣವಾಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್, ವಿಜಯೇಂದ್ರ ವ್ಯಾಪಾರ ಹಿತಾಸಕ್ತಿ ಹೊಂದಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕರಾಗಿ ಆರ್ ಅಶೋಕ್ ವಿಫಲರಾಗಿದ್ದಾರೆ. ಕೂಡಲೇ ರಾಜ್ಯ ಬಿಜೆಪಿ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವೈರಲ್ ಆಗುತ್ತಿರುವ ಪತ್ರದಲ್ಲೇನಿದೆ?
‘‘ನಾವು, ಕಳಮಟ್ಟದ ಬಿಜೆಪಿ ಸದಸ್ಯರ ಗುಂಪೊಂದು, ಕರ್ನಾಟಕದ ಬಿಜೆಪಿ ನಾಯಕತ್ವದಲ್ಲಿ ನಡೆಯುತ್ತಿರುವ ದುಸ್ಥಿತಿಯನ್ನು ಹಂಚಿಕೊಳ್ಳಲು ಈ ಪತ್ರವನ್ನು ಬರೆಯುತ್ತೇವೆ. ಈ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲಾಗದಿದ್ದರೆ ಭವಿಷ್ಯದಲ್ಲಿ ಪಕ್ಷದ ಪತನಕ್ಕೆ ಇದು ಕಾರಣವಾಗಬಹುದು. ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರಗಳಲ್ಲೂ ಸೋತಿದ್ದು, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಅವರ ತಂದೆ ಬಿ ಎಸ್ ಯಡಿಯೂರಪ್ಪ ನಡೆಸುತ್ತಿರುವ “ಒಪ್ಪಂದ ರಾಜಕೀಯ”ದ ಮೇಲೆ ಬೆಳಕು ಚೆಲ್ಲಿದೆ. ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಕೈಜೋಡಿಸಿದ್ದಾರೆ’’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮುಂದುವರಿದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣದ ವಿಚಾರದಲ್ಲಿ ಸಿದ್ದರಾಮಯ್ಯನವರನ್ನು ತಡೆಯಲು ಸಾಕಷ್ಟು ಅವಕಾಶ ಇದ್ದರೂ, ಅವರು ಇನ್ನೂ ಅಧಿಕಾರದಲ್ಲಿದ್ದಾರೆ. ಇದು ವಿಜಯೇಂದ್ರ ಮತ್ತು ಯಡಿಯೂರಪ್ಪನವರ ರಕ್ಷಣೆಯ ಕಾರಣದಿಂದಷ್ಟೇ ಸಂಭವಿಸುತ್ತಿದೆ. ಕೆಲವು ತಿಂಗಳ ಹಿಂದೆ, ಸಿದ್ದರಾಮಯ್ಯ ಪೋಸ್ಕೋ ಪ್ರಕರಣದಲ್ಲಿ ಯಡಿಯೂರಪ್ಪನನ್ನು ರಕ್ಷಿಸಿದ್ದರು, ಅವರನ್ನು ಸಮಯಕ್ಕೆ ನ್ಯಾಯಾಲಯಕ್ಕೆ ಹೋಗಲು ಅವಕಾಶ ಮಾಡಿಕೊಡಲಾಯಿತು ಎಂದು ಉಲ್ಲೇಖಿಸಲಾಗಿದೆ.
‘ನಿಖಿಲ್ ಸೋಲಿಗೆ ಬಿಎಸ್ವೈ, ವಿಜಯೇಂದ್ರ ಕಾರಣ’
ಇತ್ತೀಚಿನ ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಸಕ್ರೀಯವಾಗಿರಲಿಲ್ಲ. ಚೆನ್ನಪಟ್ಟಣ ಕ್ಷೇತ್ರದಲ್ಲಿ ವಿಜಯೇಂದ್ರ ಮತ್ತು ಯಡಿಯೂರಪ್ಪ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲ್ಲಲು ಸಹಾಯ ಮಾಡಿದರು. ಆದರೆ ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಸೋಲಿಸಲು ವಿಫಲವಾಯಿತು, ಇದು ಬಸವರಾಜ ಬೊಮ್ಮಾಯಿಗೆ ತೀವ್ರ ಆಘಾತ ನೀಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿಜಯೇಂದ್ರ, ಡಿಕೆ ಶಿವಕುಮಾರ್ ಮಧ್ಯೆ ವ್ಯಾಪಾರ ಹಿತಾಸಕ್ತಿ ಆರೋಪ
ವಿಜಯೇಂದ್ರ ಮತ್ತು ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಮತ್ತು ಇತರ ಕಡೆಗಳಲ್ಲಿ ವ್ಯಾಪಾರ ಹಿತಾಸಕ್ತಿಗಳನ್ನು ಹೊಂದಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕೂಡ ಈ ಸಂಬಂಧದಲ್ಲಿ ವಿಭಿನ್ನರಲ್ಲ. ಕಾಂಗ್ರೆಸ್ ಸರ್ಕಾರ ಈ ಬಿಜೆಪಿ ನಾಯಕರ ವ್ಯವಹಾರ ಬೆಳವಣಿಗೆಗೆ ಸಹಾಯ ಮಾಡುತ್ತಿದ್ದು, ಬಿಜೆಪಿ ನಾಯಕರು ಚುನಾವಣೆ ಮತ್ತು ಹಗರಣಗಳಲ್ಲಿ ಕಾಂಗ್ರೆಸ್ ನಾಯಕರಿಗೆ ಬೆಂಬಲ ನೀಡುತ್ತಾರೆ. ಆರ್. ಅಶೋಕ, ವಿರೋಧ ಪಕ್ಷದ ನಾಯಕರಾಗಿ ಅತ್ಯಂತ ವಿಫಲರಾಗಿದ್ದಾರೆ ಎಂದು ಪತ್ರದಲ್ಲಿ ಟೀಕಿಸಲಾಗಿದೆ.
ವಿಧಾನಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಸುನಿಲ್ ಕುಮಾರ್ ಅವರಂತಹ ಕೆಲವು ಬಿಜೆಪಿ ನಾಯಕರನ್ನು ಹೊರತುಪಡಿಸಿ, ಉನ್ನತ ನಾಯಕರು ಕಾಂಗ್ರೆಸ್ ಸರ್ಕಾರದ ಅನ್ಯಾಯಗಳ ವಿರುದ್ಧ ಪ್ರತೀಕಾರ ತೋರಿಸುವಂತೆ ಕಾಣುತ್ತಿಲ್ಲ. ಈ ನಮಸ್ಯೆಗಳು ಬೆಳಕಿಗೆ ತರುತ್ತಿದ್ದರೂ, ಪಕ್ಷವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಳಹಂತದ ಕಾರ್ಯಕರ್ತರು ದೂರಿದ್ದಾರೆ.
ನಾಯಕತ್ವ ಬದಲಾವಣೆಗೆ ಆಗ್ರಹ
ರಾಜ್ಯ ಮಟ್ಟದಲ್ಲಿ ನಾಯಕತ್ವದಲ್ಲಿ ಬದಲಾವಣೆ ನಡೆಯದಿರುವುದರಿಂದ ಈ ತಾರತಮ್ಯ ರಾಜಕೀಯ ಮುಂದುವರಿಯುತ್ತಲೇ ಇರುತ್ತದೆ, ನಮ್ಮಂತಹ ಕೆಳಮಟ್ಟದ ಕಾರ್ಯಕರ್ತರು ಇದರಿಂದ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಹೈಕಮಾಂಡ್ ವಿಜಯೇಂದ್ರ ಪರವೂ ಇಲ್ಲ..ಯತ್ನಾಳ್ ವಿರುದ್ಧವೂ ಇಲ್ಲ: ನೊಟೀಸ್ಗೆ ಸೀಮಿತವಾಗುತ್ತಾ ಕ್ರಮ?
ಬಿಜೆಪಿ “ಪಾರ್ಟಿ ವಿತ್ ಎ ಡಿಫರೆನ್ಸ್” ಎಂದು ಕರೆಯಲ್ಪಡುವುದರಿಂದ ಕಾರ್ಯಕರ್ತರ ಹಿತವನ್ನು ರಕ್ಷಿಸಲು ಆತ್ಮಾವಲೋಕನ ಮಾಡುವ ಮತ್ತು ಬದಲಾವಣೆಗಳನ್ನು ತರುವ ಅಗತ್ಯವಿದೆ. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಆಶೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Tue, 3 December 24