ಬೆಂಗಳೂರು, ಮಾರ್ಚ್ 31: ಲೋಕಸಭೆ ಚುನಾವಣೆಯಲ್ಲಿ (Lok Sabha Election) ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮತ್ತು ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಮೂರು ಪಕ್ಷಗಳು ಈಗಾಗಲೆ ಪ್ರಚಾರ ಕಾರ್ಯ ಆರಂಭಿಸಿವೆ. ಕಾಂಗ್ರೆಸ್ ತಾನು ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳನ್ನು ಜನರಲ್ಲಿ ಮನದಟ್ಟು ಮಾಡುತ್ತಾ ಮತದಾರರನ್ನು ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ (BJP) ಧನ್ಯವಾದ ಮೋದಿ ಅಭಿಯಾನ (Dhanyavad Modi Campaign) ಆರಂಭಿಸಿದೆ. ಬಿಜೆಪಿ 40 ದಿನಗಳ ಕಾಲ ಧನ್ಯವಾದ ಮೋದಿ ಅಭಿಯಾನ ನಡೆಸುತ್ತಿದೆ.
ಈ ಧನ್ಯವಾದ ಮೋದಿ ಅಭಿಯಾನದಲ್ಲಿ 10 ವರ್ಷಗಳ ಪ್ರಧಾನಿ ಮೋದಿ ಆಡಳಿತದಲ್ಲಿ ಕರ್ನಾಟಕಕ್ಕೆ ನೀಡಿದ ಕೊಡುಗೆಗಳು ಮತ್ತು ಜಾರಿಗೆ ತಂದ ಹೊಸ ಹೊಸ ಯೋಜನೆಗಳನ್ನು ಪ್ರತಿದಿನ ವೀಡಿಯೋ ಮೂಲಕ ತೋರಿಸಲಾಗುತ್ತದೆ.
ವೀಡಿಯೋದಲ್ಲಿ ಪ್ರತಿ ಯೋಜನೆಯಿಂದ ಕರ್ನಾಟಕಕ್ಕೆ ಆದ ಲಾಭದ ಬಗ್ಗೆ ವಿವರಣೆ ನೀಡಲಾಗುತ್ತದೆ. ಉಜ್ವಲ ಯೋಜನೆ, ಸ್ಟಾರ್ಟ್ಅಪ್ ಇಂಡಿಯಾ, ಗರೀಬ್ ಕಲ್ಯಾಣ್, ಕಿಸಾನ್ ಸಮ್ಮಾನ್ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿಡಿಯೋ ಮೂಲಕ ತೋರಿಸಲಾಗುತ್ತದೆ. ಯುವಕರು, ಮಹಿಳೆಯರು, ರೈತರು ಮತ್ತು ಬಡವರಿಗಾಗಿ ಮೋದಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿಡಿಯೋ ಮೂಲಕ ಪರಿಚಯಿಸಲಾಗುತ್ತದೆ. ಈ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಮತ್ತೊಮ್ಮೆ ತಲುಪುವ ಪ್ರಚಾರ ತಂತ್ರವಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ನಂತರವೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆ: ದೇವೇಗೌಡ ಅಧಿಕೃತ ಘೋಷಣೆ
ಪ್ರತಿಯೊಂದು ಕಾರ್ಯಕ್ರಮದ ಹೆಸರು, ಅದರಿಂದ ರಾಜ್ಯಕ್ಕೆ ಆದ ಲಾಭವನ್ನು 30 ನಿಮಿಷದ ವಿಡಿಯೋ ರೂಪದಲ್ಲಿ ಕಟ್ಟಿಕೊಟ್ಟು, ಕೊನೆಯಲ್ಲಿ ಜನತೆಯ ಪರವಾಗಿ ಇಂಥ ಯೋಜನೆ ರೂಪಿಸಿದ ನಿಮಗೆ ಕೃತಜ್ಞತೆ ಎಂದು ಹೇಳುವುದು “ಧನ್ಯವಾದ ಮೋದಿ” ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಪ್ರತಿ ದಿನ ಒಬ್ಬೊಬ್ಬ ನಾಯಕರು ಒಂದೊಂದು ಯೋಜನೆಗೆ ಸಂಬಂಧಪಟ್ಟ ವಿಡಿಯೋವನ್ನು ಬಿಜೆಪಿ ಕಚೇರಿಯಲ್ಲಿ ಸಾಂಕೇತಿಕವಾಗಿ ಬಿಡುಗಡೆಗೊಳಿಸಿ, ನಂತರ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು, ಶಾಸಕರು ಹಾಗೂ ಪ್ರಮುಖ ನಾಯಕರು ತಮ್ಮ ವಾಟ್ಸಾಫ್ ಡಿಪಿಯಲ್ಲಿ ಇದನ್ನು ಹಾಕಿಕೊಳ್ಳುತ್ತಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಹಾಗೂ ವೈಯಕ್ತಿಕ ಯೂಟ್ಯೂಬ್ ಚಾನಲ್‌ಗಳಿದ್ದರೆ ಅಲ್ಲಿ ಈ ವಿಡಿಯೋ ಹಂಚಿಕೊಳ್ಳುತ್ತಾರೆ. ಈ ಮೂಲಕ ಪ್ರತಿ ದಿನ ಕೋಟ್ಯಂತರ ಜನರಿಗೆ ಮೋದಿ ಯೋಜನೆಯನ್ನು ತಲುಪಿಸುವುದಕ್ಕೆ ಬಿಜೆಪಿ ಯೋಜನೆ ರೂಪಿಸಿದ್ದು ಇದಕ್ಕಾಗಿ ಒಟ್ಟು 40 ವಿಡಿಯೋಗಳನ್ನು ಸಿದ್ಧಪಡಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ