ಡಿಕೆ ಸಹೋದರರ ಕೋಟೆಯಿಂದಲೇ ಅಮಿತ್ ಶಾ ರಣಕಹಳೆ: ಸಾಲು ಸಾಲು ಸಭೆ, ಸಂಜೆ ರೋಡ್‌ ಶೋ

|

Updated on: Apr 02, 2024 | 9:36 AM

ಲೋಕಸಭೆ ಚುನಾವಣೆಗೆ ಕರ್ನಾಟಕದಿಂದ ಪ್ರಚಾರ ಅಭಿಯಾನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಆರಂಭಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಪರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಂಜೆ ರೋಡ್ ಶೋ ನಡೆಸಲಿರುವ ಅಮಿತ್ ಶಾ, ಬಿಜೆಪಿ ಜೆಡಿಎಸ್ ನಾಯಕರ ಜೊತೆ ಹಲವು ಸಭೆಗಳನ್ನೂ ನಡೆಸಲಿದ್ದಾರೆ.

ಡಿಕೆ ಸಹೋದರರ ಕೋಟೆಯಿಂದಲೇ ಅಮಿತ್ ಶಾ ರಣಕಹಳೆ: ಸಾಲು ಸಾಲು ಸಭೆ, ಸಂಜೆ ರೋಡ್‌ ಶೋ
ಡಿಕೆ ಸಹೋದರರ ಕೋಟೆಯಿಂದಲೇ ಅಮಿತ್ ಶಾ ರಣಕಹಳೆ: ಸಾಲು ಸಾಲು ಸಭೆ, ಸಂಜೆ ರೋಡ್‌ ಶೋ
Follow us on

ಬೆಂಗಳೂರು, ಏಪ್ರಿಲ್ 2: ರಾಜ್ಯದಲ್ಲಿ ಲೋಕಸಭೆ ಚುನಾವಣೆ (Lok Sabha Elections) ಕಣ ಭರ್ಜರಿ ರಂಗು ಪಡೆದುಕೊಂಡಿದೆ. ಘಟಾನುಘಟಿ ನಾಯಕರು ಪ್ರಚಾರದ ಅಖಾಡಕ್ಕೆ ಧುಮುಕುತ್ತಿದ್ದಾರೆ. ಕರುನಾಡಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಅಬ್ಬರ ಶುರುವಾಗುವುದಕ್ಕೂ ಮುನ್ನವೇ ಬಿಜೆಪಿಯ ಚಾಣಕ್ಯ ಅಮಿತ್ ಶಾ (Amit Shah) ಎಂಟ್ರಿ ಕೊಟ್ಟಿದ್ದಾರೆ. ಕಾಂಗ್ರೆಸ್​ನ ಪ್ರಮುಖ ನಾಯಕರಾದ ಡಿಕೆ ಸಹೋದರರ ಕೋಟೆಯಿಂದಲೇ ರಣಕಹಳೆ ಮೊಳಗಿಸಲಿದ್ದಾರೆ. ಹಳೆ ಮೈಸೂರು ಭಾಗವನ್ನೇ ಅಮಿತ್ ಶಾ ಗುರಿಯಾಗಿಸಿಕೊಂಡಿದ್ದಾರೆ. ಇಂದು ಸಂಜೆ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ನ ಮಂಜುನಾಥ್ ಪರ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಚನ್ನಪಟ್ಟಣದಿಂದಲೇ ಬೃಹತ್ ರೋಡ್‌ ಶೋ ನಡೆಸಲಿದ್ದಾರೆ.

ದೆಹಲಿಯಿಂದ ಸೋಮವಾರ ರಾತ್ರಿ 11 ಗಂಟೆಗೆ ಅಮಿತ್ ಶಾ ಬೆಂಗಳೂರಿಗೆ ಬರುತ್ತಾರೆ ಎನ್ನಲಾಗಿತ್ತು. ಆದರೆ ಬದಲಾದ ಸಮಯದಲ್ಲಿ ಮಧ್ಯರಾತ್ರಿ 2.30ಕ್ಕೆ ಹೆಚ್‌ಎಎಲ್‌ ಏರ್‌ಪೋರ್ಟ್‌ಗೆ ಬಂದಿಳಿದರು. ನಂತರ ನೇರವಾಗಿ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ಗೆ ತೆರಳಿ ವಾಸ್ತವ್ಯ ಹೂಡಿದರು.

ಬೆಳಗ್ಗೆ 9.30ಕ್ಕೆ ತಾಜ್‌ವೆಸ್ಟ್ಎಂಡ್ ಹೋಟೆಲ್‌ನಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಜತೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಿದ್ದಾರೆ. ಗೆಲುವಿನ ಸೂತ್ರ ಮುಂದಿಡಲಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಉಂಟಾಗಿರುವ ಬಿಜೆಪಿ ಟಿಕೆಟ್ ವಂಚಿತರ ಅಸಮಾಧಾನ ಶಮನ ಬಗ್ಗೆಯೂ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆಯಿದೆ.

‘ಚನ್ನಪಟ್ಟಣದಿಂದಲೇ ಸಂದೇಶ ಕೊಡ್ತೀವಿ’ ಎಂದ ಕುಮಾರಸ್ವಾಮಿ

ಅಮಿತ್ ಶಾ ಜತೆ ಬ್ರೇಕ್‌ಫಾಸ್ಟ್ ಮೀಟಿಂಗ್ ಬಗ್ಗೆ ಮಾಹಿತಿ ನೀಡಿರುವ ಕುಮಾರಸ್ವಾಮಿ, ನಮ್ಮಲ್ಲಿರುವ ಮಾಹಿತಿಯನ್ನು ಅಮಿತ್ ಶಾ ಅವರೊಂದಿಗೆ ಹಂಚಿಕೊಳ್ಳುತ್ತೇವೆ. ಸಂಜೆ ಚನ್ನಪಟ್ಟಣದಲ್ಲಿ ರೋಡ್ ಶೋದಲ್ಲಿ ಇಬ್ಬರೂ ಭಾಗವಹಿಸುತ್ತೇವೆ. ಇಡಿ ರಾಜ್ಯಕ್ಕೆ ಚನ್ನಪಟ್ಟಣದಿಂದಲೇ ಒಂದು ಸ್ಪಷ್ಟ ಸಂದೇಶ ಕೊಡುತ್ತೇವೆ ಎಂದಿದ್ದಾರೆ.

ಇನ್ನು ಅಮಿತ್ ಶಾ ರೋಡ್ ಶೋ ಬಗ್ಗೆ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದು. ಮೊದಲು ಕಾರ್ಯಕರ್ತರನ್ನು ಒಂದು ಮಾಡಲಿ ಎಂದು ಸವಾಲು ಹಾಕಿದ್ದಾರೆ.

3 ಕ್ಷೇತ್ರಗಳ ಅತೃಪ್ತಿ ಶಮನಗೊಳಿಸಿದ ವಿಜಯೇಂದ್ರ

ಅಮಿತ್ ಶಾ ರಾಜ್ಯಕ್ಕೆ ಎಂಟ್ರಿಕೊಟ್ಟ ಹೊತ್ತಲ್ಲೇ ಟಿಕೆಟ್ ವಂಚಿತರ ಅಸಮಾಧಾನವನ್ನು ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಶಮನಗೊಳಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಸಂಬಂಧ ಯಲಹಂಕ ಶಾಸಕ ಎಸ್​​ಆರ್ ವಿಶ್ವನಾಥ್‌ರನ್ನು ಯಡಿಯೂರಪ್ಪ ಮನೆಗೆ ಕರೆಸಿಕೊಂಡು ಮನವೊಲಿಸಿದ್ದಾರೆ. ಇನ್ನು ಚಿತ್ರದುರ್ಗದಲ್ಲಿ ಚಂದ್ರಪ್ಪ, ರಘುಚಂದನ್ ಬಂಡಾಯಕ್ಕೂ ಯಡಿಯೂರಪ್ಪ ಮದ್ದೆರದಿದ್ದಾರೆ. ಉಳಿದಂತೆ ಹಾಸನದಲ್ಲಿ ಮುನಿಸಿಕೊಂಡಿದ್ದ ಪ್ರೀತಂ ಗೌಡರ ಜತೆ ವಿಜಯೇಂದ್ರ ಮಾತುಕತೆ ನಡೆಸಿ ಪ್ರಜ್ವಲ್ ರೇವಣ್ಣ ಪರ ಕೆಲ್ಸ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ‘ಅಸಮಾಧಾನ’ದ ಕಂಟಕ; ಅಖಾಡಕ್ಕಿಳಿದ ಚಾಣಕ್ಯ ಅಮಿತ್ ಶಾ

ಇನ್ನೊಂದೆಡೆ, ಬದಲಾದ ಸನ್ನಿವೇಶದಲ್ಲಿ ಅಮಿತ್ ಶಾ ಇಂದು ರಾತ್ರಿ ಬೆಂಗಳೂರಿನಲ್ಲಿ ಹೂಡಬೇಕಿದ್ದ ವಾಸ್ತವ್ಯ ರದ್ದು ಮಾಡಿದ್ದಾರೆ. ರೋಡ್ ಶೋ ಮುಗಿಸಿ ಇಂದು ರಾತ್ರಿ 8.35ಕ್ಕೆ ಹೆಚ್‌ಎಎಲ್ ಏರ್‌ಪೋರ್ಟ್‌ನಿಂದ ದೆಹಲಿಗೆ ತೆರಳಲಿದ್ದಾರೆ.

– ಬ್ಯುರೋ ರಿಪೋರ್ಟ್ ಟಿವಿ9

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:59 am, Tue, 2 April 24