ಕಾರವಾರ, ಮೇ 07: ಲೋಕಸಭೆ ಚುನಾವಣೆ ಟಿಕೆಟ್ ಕೈ ತಪ್ಪಿದಕ್ಕೆ ಸೈಲೆಂಟ್ ಆಗಿದ್ದ ಅನಂತ್ ಕುಮಾರ್ ಹೆಗಡೆ (Anantkumar Hegde) ಕೊನೆಗೂ ಮತದಾನ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕೆಹೆಚ್ಬಿ ಕಾಲೋನಿಯ ಸರ್ಕಾರಿ ಪ್ರಾರ್ಥಮಿಕ ಶಾಲೆಯ ಮತಗಟ್ಟೆಗೆ ಪತ್ನಿ ಜೊತೆಗೆ ಆಗಮಿಸಿ ಮತದಾನ (voting) ಮಾಡಿದ್ದಾರೆ. ಟಿಕೆಟ್ ಕೈ ತಪ್ಪಿದಕ್ಕೆ ಬಹಿರಂಗವಾಗಿ ಕಾಣಿಸಿಕೊಳ್ಳದೆ ಯಾವುದೇ ಪ್ರಚಾರ ಮಾಡಿರಲಿಲ್ಲ. ಹೀಗಾಗಿ ಒಲ್ಲದ ಮನಸ್ಸಿನಿಂದಲ್ಲೇ ಮತದಾನ ಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿದ್ದಾರೆ.
ಅನಂತ್ ಕುಮಾರ್ ಹೆಗಡೆ ಪ್ರತಿ ಬಾರಿ ಬೆಳಿಗ್ಗೆ 8 ಗಂಟೆಗೆ ಮತದಾನ ಮಾಡುತ್ತಿದ್ದರು. ಆದರೆ ಇದೆ ಮೊದಲ ಬಾರಿಗೆ ಸಂಜೆ 4:30 ಮತದಾನಕ್ಕೆ ಆಗಮಿಸಿದ್ದರು. ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಶಿರಸಿಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅನಂತ್ ಕುಮಾರ್ ಹೆಗಡೆ, ಮತದಾನ ಮಾಡುವುದು ದೇಶದ ಜನರ ಕರ್ತವ್ಯ. ಹಾಗಾಗಿ ನಾನು ಒಬ್ಬ ದೇಶದ ಪ್ರಜೆಯಾಗಿ ಮತ ಚಲಾವಣೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಮ್ಮ ಫೋಟೋ ಬಳಸಿ ಬಿಜೆಪಿಗೆ ವೋಟ್ ಹಾಕುವಂತೆ ಪೋಸ್ಟ್: ದೂರು ದಾಖಲಿಸಿದ ಅನಂತಕುಮಾರ್ ಹೆಗಡೆ
ಟಿಕೆಟ್ ಕೈ ತಪ್ಪಿದ ಬಳಿಕ ಸೈಲೆಂಟ್ ಆದ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಂದಾಗ ಯಾಕೆ ಕಾಣ್ಸಿಲ್ಲ ಎಂಬ ಪ್ರಶ್ನೆಗೆ ಮತ್ತು ಇತರೆ ಯಾವುದೇ ರಾಜಕೀಯ ಪ್ರಶ್ನೆಗೆ ಉತ್ತರಿಸದೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ: ಅನಂತಕುಮಾರ್ ಹೆಗಡೆ ಮನೆ ಸಮೀಪದ ಮೈದಾನದಲ್ಲೇ ಸಮಾವೇಶ!
ಅನಂತ್ ಕುಮಾರ್ ಹೆಗಡೆ ಆರು ಬಾರಿ ಬಿಜೆಪಿ ಸಂಸದನಾಗಿದ್ದರು. ಈ ಬಾರಿಯೂ ಟಿಕೆಟ್ ಸಿಗುತ್ತದೆ ಎಂಬ ನೀರಿಕ್ಷೆಯಲ್ಲಿದ್ದ ಅವರು, ಡಿಸೆಂಬರ್ನಿಂದ ಮಾರ್ಚ್ವರೆಗೆ ಕ್ಷೇತ್ರದಾದ್ಯಂತ ಸಂಚರಿಸಿ ಚುನಾವಣೆಗೆ ಪ್ರಚಾರ ಆರಂಭ ಮಾಡಿದ್ದರು. ಆದರೆ ಕೊನೆಯ ಹಂತದಲ್ಲಿ ಟಿಕೆಟ್ ಮಿಸ್ ಆಗಿತ್ತು. ಆ ಮೂಲಕ ಟಿಕೆಟ್ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲಾಗಿತ್ತು. ಹೀಗಾಗಿ ಮುನಿಸಿಕೊಂಡಿದ್ದ ಅನಂತ್ ಕುಮಾರ್, ಇದುವರೆಗೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಒಂದೇ ಒಂದು ಹೇಳಿಕೆಯನ್ನ ಕೊಡದೆ ಫುಲ್ ಸೈಲೆಂಟ್ ಆಗಿದ್ದರು. ಆದರೆ ಇಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ಹಿನ್ನಲೆ ಅವರು ಕೂಡ ಮತದಾನ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:47 pm, Tue, 7 May 24