ಬಿಜೆಪಿ ಶಾಸಕ, ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ: ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ಕಾಂಗ್ರೆಸ್ ಅವಧಿಯ ಎಲ್ಲ ಕೇಸ್ ತನಿಕೆಯಾಗಲಿದೆ ಎಂದ ಸಿಎಂ
ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿರೋದೆ ಭ್ರಷ್ಟಾಚಾರ ತಡೆಯೋದಕ್ಕೆ. ಹಿಂದೆ ಲೋಕಾಯುಕ್ತ ಇಲ್ಲದೆ ಕಾಂಗ್ರೆಸ್ ಕಾಲದ ಕೇಸ್ಗಳು ಮುಚ್ಚಿಹೋಗಿದ್ದವು. ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ತನಿಖೆಯಾಗಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ‘ಭ್ರಷ್ಟಾಚಾರ ತಡೆಯುವುದಕ್ಕಾಗಿ ಲೋಕಾಯುಕ್ತ ಸ್ಥಾಪನೆ ಮಾಡಿದ್ದೇವೆ, ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ, ಲೋಕಾಯುಕ್ತ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿ. ಇನ್ನು ಕಾಂಗ್ರೆಸ್ ಶಾಸಕರ ಮೇಲು ಹಲವು ಆರೋಪಗಳಿತ್ತು, ಅವೆಲ್ಲವೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಚ್ಚಿ ಹೋಗಿದ್ದು, ಆ ಎಲ್ಲ ಕೇಸ್ಗಳ ತನಿಖೆ ಆಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದಿದ್ದಾರೆ.
ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ‘ಲೋಕಾಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದೇ ಭ್ರಷ್ಟಾಚಾರವನ್ನು ಮುಕ್ತವಾಗಿ ನಿಗ್ರಹಿಸಬೇಕು ಎಂದು. ಲೋಕಾಯುಕ್ತ ಇಲ್ಲದೆ ಇಂತಹ ಹಲವಾರು ಪ್ರಕರಣಗಳು ಕಾಂಗ್ರೆಸ್ ಆಡಳಿತದಲ್ಲಿ ನಡೆದು ಮುಚ್ಚಿಹೋಗಿದೆ. ನಿಷ್ಪಕ್ಷಪಾತವಾಗಿ ತನಿಖೆಯಾಗಲಿದೆ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿಗಳು, ಈ ವಿಚಾರದಲ್ಲಿಯೂ ಸಹ ಲೋಕಾಯುಕ್ತ ಸರ್ವ ಸ್ವತಂತ್ರವಾಗಿದ್ದು, ಮಾಹಿತಿ ಹಾಗೂ ಹಣ ದೊರೆತಿರುವುದರ ಮೇಲೆ ಲೋಕಾಯುಕ್ತ ಮುಕ್ತವಾಗಿ, ನಿಷ್ಪಕ್ಷಪಾತವಾದ ತನಿಖೆ ಮಾಡಲಿದೆ. ಹಣ ಯಾರಿಗೆ ಸೇರಿದ್ದು ಯಾರಿಗೋಸ್ಕರ ಆಗಿದ್ದು ಎನ್ನುವ ಸತ್ಯ ಹೊರಗಡೆ ಬರಲಿ ಎನ್ನುವುದು ನಮ್ಮ ಉದ್ದೇಶ. ಯಾರು ತಪ್ಪು ಮಾದಿದ್ದಾರೋ ಅವರು ಶಿಕ್ಷೆ ಅನುಭವಿಸುತ್ತಾರೆ ಎನ್ನುವುದು ನಮ್ಮ ಅಭಿಪ್ರಾಯ ಎಂದರು.
ಕಾಂಗ್ರೆಸ್ ಮಂತ್ರಿಗಳು ಹಾಗೂ ಶಾಸಕರ ಮೇಲೆ 59 ಆರೋಪವಿತ್ತು. ಎಸಿಬಿ ಇದ್ದಿದ್ದಕ್ಕೆ ಅವರು ಪ್ರಕರಣ ಮುಚ್ಚಿಹಾಕಿದರು. ಈಗ ಲೋಕಾಯುಕ್ತ ತನಿಖೆಯಾದಾಗ ಅವರದ್ದು ಸಹ ಹೊರಗಡೆ ಬರುತ್ತೆ. ಕಾಂಗ್ರೆಸ್ ಲೋಕಾಯುಕ್ತ ಮುಚ್ಚಿಹಾಕಿರೋದಕ್ಕೆ ಇದೇ ಸಾಕ್ಷಿ. ನಾವು ಏನನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಬಹಳ ಸ್ಪಷ್ಟವಾಗಿ ಮಾಜಿ ಮಂತ್ರಿ ಜಾರ್ಜ್ ಅವರು ಎಸಿಬಿನೇ ಮುಂದುವರಿಸಿ ಎಂದು ವಿಧಾನಸಭೆಯಲ್ಲಿ ಹೇಳ್ತಾರೆ. ಅವರು ಯಾರ ಪರವಾಗಿದ್ದಾರೆ ಎಂದು ಪ್ರಶ್ನಿಸಿದ ಸಿಎಂ, ಈಗ ಈ ಘಟನೆ ಇಟ್ಟುಕೊಂಡು ತಾವು ದೊಡ್ಡ ಸ್ವಚ್ಛ ಪಕ್ಷ ಅಂತ ಹೇಳಿಕೊಳ್ಳಲು ಸಾಧ್ಯವಿಲ್ಲ. ಅವರು ಬಹಳ ಹಿಂದೆಯೂ ಭ್ರಷ್ಟಾಚಾರ ಮಾಡಿದ್ದಾರೆ. ಹಲವಾರು ಜನರ ಮೇಲೆ ಪ್ರಕರಣ ಸಹ ದಾಖಲಾಗಿದೆ. ತನಿಖೆ ಸಹ ಆಗುತ್ತಿದೆ ಅವರು ಮುಚ್ಚಿ ಹಾಕಿದ್ದ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟು ತನಿಖೆ ಮಾಡಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಅಬಕಾರಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ, ಅಬಕಾರಿ ಹಾಗೂ ಕಾರ್ಮಿಕ ಇಲಾಖೆಯ ಹಗರಣ ಕೂಡ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:39 am, Fri, 3 March 23