
ಬೆಂಗಳೂರು, ಜೂನ್ 24: ಶಿವಮೊಗ್ಗದ ಅರ್ಗ್ಯಾನಿಕ್ ಫಾರ್ಮಿಂಗ್ ಸಹಾಯಕ ನಿರ್ದೇಶಕ ಪ್ರದೀಪ್, ಚಿಕ್ಕಮಗಳೂರು ನಗರಸಭೆ ಅಧಿಕಾರಿ ಲತಾಮಣಿ ಮನೆ ಮೇಲೆ ಸೇರಿದಂತೆ ಕರ್ನಾಟಕದ ವಿವಿಧ ಕಡೆಗಳಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳು ಮಂಗಳವಾರ ಮುಂಜಾನೆಯೇ ದಾಳಿ ನಡೆಸಿದ್ದಾರೆ. ಆನೇಕಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಜಿ.ಅಮರನಾಥ್, ಗದಗದ ಪಟ್ಟಣ ಪೊಲೀಸ್ ನಿರೀಕ್ಷಕ ಧ್ರುವರಾಜ್, ಧಾರವಾಡ ಮಲಪ್ರಭಾ ಯೋಜನೆ ಇಂಜಿನಿಯರ್ ಅಶೋಕ್ ವಾಲ್ಸಂದ್, ಕಲಬುರಗಿ ಪಿಆರ್ಇ ವಿಭಾಗದ ಇಇ ಮಲ್ಲಿಕಾರ್ಜುನ ಅಲಿಪುರ, ಸಣ್ಣೂರು ಗ್ರಾ.ಪಂ. ಪಿಡಿಒ ರಾಮಚಂದ್ರ ಮನೆ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಲೋಕಾಯಕ್ತ ದಾಳಿ ನಡೆದಿದೆ.
ಗದಗ ಶಹರ ಠಾಣೆ ಸಿಪಿಐ ಡಿಬಿ ಪಾಟೀಲ್ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇನ್ಸ್ಪೆಕ್ಟರ್ ಪಾಟೀಲ್ ಅವರ ಗದಗದ ಶಿವಾನಂದ ನಗರದ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. ಅಲ್ಲದೆ, ಅವರ ಬಾಗಲಕೋಟೆ, ಜಮಖಂಡಿಯಲ್ಲಿರುವ ಮನೆಗಳ ಮೇಲೂ ದಾಳಿ ನಡೆದಿದೆ. ಕೆರೂರಿನಲ್ಲಿರುವ ಮನೆ ಮೇಲೂ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗಿದೆ.
ಇದನ್ನೂ ಓದಿ: ನೆಲಮಂಗಲ: ಗಲಾಟೆ-ಹಲ್ಲೆ ಆರೋಪ, ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ, ಗನ್ಮ್ಯಾನ್, ಚಾಲಕನ ವಿರುದ್ಧ ಎಫ್ಐಆರ್
ಲೋಕಾಯುಕ್ತರು ಸಿಪಿಐ ವಾಹನವನ್ನೂ ಬಿಡದೆ ತಪಾಸಣೆ ಮಾಡಿದ್ದಾರೆ. ಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದೆ.
ಲೋಕಾಯುಕ್ತ ದಾಳಿ ವೇಳೆ ಡಿಬಿ ಪಾಟೀಲ್ ಮನೆಯ ಶೌಚಾಲಯದಲ್ಲಿ ಕುಳಿತುಕೊಂಡಿದ್ದರು. ಆದರೂ ಬಿಡದ ಲೋಕಾಯುಕ್ತ ಅಧಿಕಾರಿಗಳು, ಶೌಚಾಲಯದ ಬಳಿ ಬಂದು ಕಿವಿ ಕೊಟ್ಟು ಯಾರ ಬಳಿಯಾದರೂ ಫೋನ್ನಲ್ಲಿ ಮಾತನಾಡುತ್ತಿದ್ದಾರೆಯೇ ಎಂಬುದನ್ನು ಗಮನಿಸಿದ್ದಾರೆ.