ಬೆಂಗಳೂರು, ಜುಲೈ 11: ಲೋಕಾಯುಕ್ತ (Lokayukta Raid) ಇಂದು ಭರ್ಜರಿ ಬೇಟೆಯಾಡಿದೆ. 9 ಜಿಲ್ಲೆಗಳಲ್ಲಿ 56 ಕಡೆಗಳಲ್ಲಿ ಏಕಕಾಲಕ್ಕೆ ರೇಡ್ ಮಾಡಿದ್ದಾರೆ. 100ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ. ಒಟ್ಟು 11 ಅಧಿಕಾರಿಗಳ ವಿರುದ್ಧ ಎಫ್ಐಆರ್ (FIR)
ದಾಖಲಿಸಿ ದಾಳಿ ಮಾಡಲಾಗಿದೆ. ಲೋಕಾಯುಕ್ತ ದಾಳಿ ವೇಳೆ ಭರ್ಜರಿ ಕುಳಗಳೇ ಪತ್ತೆಯಾಗಿದ್ದು, ಚಿನ್ನಾಭರಣಗಳು ಸೇರಿದಂತೆ ಕೋಟ್ಯಾಂತರ ರೂ. ಆಸ್ತಿ-ಪಾಸ್ತಿ ಪತ್ತೆ ಆಗಿವೆ. ಅದರಲ್ಲೂ ಬಿಬಿಎಂಪಿ ಅಧಿಕಾರಿ ಮನೆಯಲ್ಲಿ ಎರಡು ಹುಲಿ ಉಗುರು ಪತ್ತೆ ಆಗಿದ್ದು, ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಹೆಚ್. ಉಮೇಶ್ ಮನೆ ಮತ್ತು ಕಚೇರಿಗಳ ಮೇಲೆ, ಬೆಸ್ಕಾಂ ಜಾಗೃತದಳದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಭಾಕರ್, ಪಂಚಾಯತ್ ರಾಜ್ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹದೇವ ಬನ್ನೂರ, ಬಿಬಿಎಂಪಿ ಕಂದಾಯ ಅಧಿಕಾರಿಯಾದ ಬಸವರಾಜ ಮಾಗಿ, ಹಾಸನದಲ್ಲಿ ಗ್ರೇಡ್-1 ಕಾರ್ಯದರ್ಶಿ ಎನ್.ಎಂ. ಜಗದೀಶ್ ಮನೆ, ಕಚೇರಿಗಳು, ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವರಾಜ್ ಮತ್ತು ಸಂಬಂಧಿಕರ ಮನೆ ಮೇಲೆ ರೇಡ್ ಆಗಿದೆ.
ನೀರಾವರಿ ಇಲಾಖೆಯ ಸೂಪರಿಂಟೆಂಡೆಂಟ್ ಆಗಿರುವ ಕೆ.ಮಹೇಶ್, ಹಾರೋಹಳ್ಳಿ ತಾಲೂಕಿನ ತಹಶೀಲ್ದಾರ್ ವಿಜಿಯಣ್ಣಷ ಚಿತ್ರದುರ್ಗದಲ್ಲಿರುವ ನಿವೃತ್ತ ಇಂಜಿನಿಯರ್ ರವೀಂದ್ರ ನಿವಾಸ, ಕಚೇರಿಗಳು, ಬೆಳಗಾವಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರಗೌಡ ಪಾಟೀಲ್ಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ಆಗಿದೆ.
ಬಿಬಿಎಂಪಿ ಕಂದಾಯ ಅಧಿಕಾರಿ ಬಸವರಾಜ ಮಾಗಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಬೆಂಗಳೂರು ಮತ್ತು ಕಲಬುರಗಿಯಲ್ಲಿ ಬಸವರಾಜ ಮಾಗಿಗೆ ಸೇರಿದ 9 ಕಡೆ ದಾಳಿ ಮಾಡಿದ್ದಾರೆ. ಬೆಂಗಳೂರಿನ 5 ಕಡೆ, ಕಲಬುರಗಿಯ 4 ಕಡೆಗಳಲ್ಲಿ ಲೋಕಾಯುಕ್ತ ಪರಿಶೀಲನೆ ನಡೆದಿದೆ. ದಾಳಿ ವೇಳೆ ಮಾಗಿ ಕರಾಳ ಮುಖ ಬಯಲಾಗಿದ್ದು, ಕಲಬುರಗಿಯಲ್ಲಿ ತಾಯಿ ಹೆಸರಲ್ಲಿ 50 ಎಕರೆ ಆಸ್ತಿ ಖರೀದಿ ಮಾಡಿರುವುದು ಬಯಲಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿ ಬಸವರಾಜ್ ಮಾಗಿ ನಿವಾಸದಲ್ಲಿ 2 ಹುಲಿ ಉಗುರು, 5 ತಲವಾರ್ ಪತ್ತೆ
ಪಾಳ ಗ್ರಾಮದ ಬಾಳೆ ತೋಟ ಸೇರಿದಂತೆ ವಿವಿಧೆಡೆ ಮಾಗಿ ಜಮೀನು ಖರೀದಿಸಿದ್ದಾರೆ. ಕಲಬುರಗಿಯಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ 4 ಅಂತಸ್ತಿನ ಮನೆ ಕಟ್ಟಿಕೊಂಡಿದ್ದಾರೆ. ಇನ್ನು, 12 ಲಕ್ಷ 30 ಸಾವಿರ ರೂ. ಮೌಲ್ಯದ ಕೆಸಿನೋ ಕಾಯಿನ್ಸ್ ಕೂಡ ಮಾಗಿ ಬಳಿ ಸಿಕ್ಕಿದೆ. ಸಹೋದರಿ ಹೇಮಾ ಹೆಸರಲ್ಲಿರುವ ನಿವಾಸದಲ್ಲಿ ಕೆಸಿನೋ ಕಾಯಿನ್ಸ್ ಪತ್ತೆಯಾಗಿವೆ. 10 ರಿಂದ ನೂರು ರೂ ಮತ್ತು 500 ರಿಂದ 1000 ರೂ. ಮೌಲ್ಯದ ಕೆಸಿನೋ ಕಾಯಿನ್ಸ್ ಇದಾಗಿದೆ.
ಮಾಗಿ ಮನೆಯಲ್ಲಿ ಕೆಸಿನೋ ಕಾಯಿನ್ಸ್ ಮಾತ್ರವಲ್ಲ, ಐದು ತಲವಾರ್‌ಗಳು, ಮೂರು ಚಾಕುಗಳು ಕೂಡ ಪತ್ತೆಯಾಗಿವೆ. ಅಲ್ದೆ ಎರಡು ಹುಲಿ ಉಗುರು ಪತ್ತೆಯಾಗಿವೆ. ಅದನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಾಗಿ ಶೋಕಿಲಾಲ ಅನ್ನೋದಕ್ಕೆ ಹಲವು ವಸ್ತುಗಳು ಸಿಕ್ಕಿವೆ. ಲಕ್ಷ ಲಕ್ಷ ಮೌಲ್ಯದ 7 ಲೈಟರ್‌ಗಳು ಕೂಡ ಪತ್ತೆಯಾಗಿದೆ. ಈ ಹಿಂದೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಬಸವರಾಜ ಅಮಾನತು ಕೂಡ ಆಗಿದ್ರು. ಜೈಲಿಗೆ ಕೂಡಾ ಹೋಗಿ ಬಂದಿದ್ದಾರೆ. ಬೇಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಡಿ.ಹೆಚ್.ಉಮೇಶ್ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ದಾವಣಗೆರೆ ನಗರದ ಶಿವಕುಮಾರಸ್ವಾಮಿ ಬಡಾವಣೆ ನಿವಾಸದಲ್ಲಿ 750 ಗ್ರಾಂ ಚಿನ್ನಾಭರಣ, 21 ಲಕ್ಷ ರೂ. ನಗದು ಪತ್ತೆಯಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಬಳಿ ಕೃಷಿ ಜಮೀನು ಕೂಡ ಪತ್ತೆಯಾಗಿದೆ.
ಇದನ್ನೂ ಓದಿ: Lokayukta Raid: ಕರ್ನಾಟಕದಾದ್ಯಂತ ಬೆಳ್ಳಂಬೆಳಗ್ಗೆಯೇ 56 ಕಡೆ ಲೋಕಾಯುಕ್ತ ದಾಳಿ
ಬೆಳಗಾವಿಯ ಯಳ್ಳೂರಿನಲ್ಲಿರುವ ಪಂಚಾಯತ್ ರಾಜ್ ಇಲಾಖೆ ಎಇಇ ಮಹದೇವ ಬನ್ನೂರ ನಿವಾಸದಲ್ಲೂ ರೇಡ್ ಮಾಡಿದ್ದಾರೆ. 4 ತಿಂಗಳ ಹಿಂದಷ್ಟೆ ಗುತ್ತಿಗೆದಾರನಿಂದ ಹಣ ಪಡೆಯುವಾಗ ಮಹದೇವ ಬನ್ನೂರ ಲೋಕಾಯುಕ್ತ ಬಲೆಗೆ ಬಿದ್ದಿದ್ರು. ಮನೆಯಲ್ಲಿ ತಪಾಸಣೆ ನಡೆಸಿದಾಗ 27 ಲಕ್ಷ ರೂ. ನಗದು ಕೂಡ ಸಿಕ್ಕಿತ್ತು. ಈಗ ಮತ್ತೆ ಲೋಕಾಯುಕ್ತ ರೇಡ್ ಆಗಿದೆ.
ಪಿಡಬ್ಲ್ಯೂಡಿನ ನಿವೃತ್ತ ಮುಖ್ಯ ಅಭಿಯಂತರ ಎಂ. ರವೀಂದ್ರ ಅವರಿಗೆ ಸೇರಿದ್ದ ನಾಲ್ಕು ಕಡೆಗಳಲ್ಲಿ ದಾಳಿ ಮಾಡಲಾಗಿದ್ದು, ನಾಲ್ಕು ನಿವೇಶನ, ಆರು ವಾಸದ ಮನೆ, ಕೃಷಿ ಜಮೀನು ಸೇರಿ 3 ಕೋಟಿ ರೂ. ಮೌಲ್ಯದ ಜಮೀನು ಪತ್ತೆ ಆಗಿದೆ. 83 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಒಂದು ಕೋಟಿ ರೂ. ಬೆಲೆಬಾಳುವ ವಾಹನಗಳು, 50 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 5.75 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಆಗಿದೆ.
ವರದಿ: ಬ್ಯೂರೋ ರಿಪೋರ್ಟ್, ಟಿವಿ9