Chamarajanagar: ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ಧ್ವಂಸ: ಅಷ್ಟಕ್ಕೂ ಆಗಿದ್ದೇನು? ಕಾರಣ ಬಿಚ್ಚಿಟ್ಟ ಜಿಲ್ಲಾಧಿಕಾರಿ
ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕರಿಸಲಾಗಿದೆ. ಇದೇ ವೇಳೆ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯನ್ನೇ ಧ್ವಂಸ ಮಾಡಿರುವ ಘಟನೆ ನಡೆದಿದೆ. ಸದ್ಯ ಈ ಕುರಿತಾಗಿ ಚಾಮರಾಜನಗರ ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿದ್ದು, ಇಂಡಿಗನತ್ತ ಗ್ರಾಮದಲ್ಲಿ ಬಹುಶಃ ಮರು ಮತದಾನ ನಡೆಯುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗದ ಸೂಚನೆಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಚಾಮರಾಜನಗರ, ಏಪ್ರಿಲ್ 26: ಜಿಲ್ಲೆಯ (Chamarajanagar Lok Sabha constituency) ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಬಹುಶಃ ಮರು ಮತದಾನ (Voting) ನಡೆಯುವ ಸಾಧ್ಯತೆ ಇದೆ ಎಂದು ಚಾಮರಾಜನಗರ ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಶಿಲ್ಪಾನಾಗ್ ಹೇಳಿದ್ದಾರೆ. ಇವಿಎಂ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮರು ಮತದಾನಕ್ಕೆ ಅವಕಾಶ ನೀಡಿದರೆ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪ್ರಕರಣ ನಡೆದ ತಕ್ಷಣ ಮುಖ್ಯ ಚುನಾವಣಾಧಿಕಾರಿಗೆ ಮಾಹಿತಿ ನೀಡಿದ್ದೇವೆ. ಎಫ್ಐಆರ್ ಕಾಪಿ ಸಮೇತ ಈಗಾಗಲೇ ರಿಪೋರ್ಟ್ ಕಳಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಸೂಚನೆಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಗಲಾಟೆ: ಮತಯಂತ್ರ ಧ್ವಂಸ ಮಾಡಿದ ಗ್ರಾಮಸ್ಥರು, ಲಾಠಿ ಚಾರ್ಜ್
ಗ್ರಾಮಸ್ಥರು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದರು. ಇಂದು ಮತದಾನ ಮಾಡಲೇಬಾರದು ಎಂದು ನಿರ್ಧರಿಸಿ ಕೂತಿದ್ದರು. ಶೂನ್ಯ ಮತದಾನ ಹಿನ್ನೆಲೆ ಅಧಿಕಾರಿಗಳು ಮನವೊಲಿಸಲು ಹೋಗಿದ್ದಾರೆ. ಮಂದಾರೆ ಹಾಡಿಯ 20 ಜನರು ಮತದಾನ ಮಾಡಲು ಒಪ್ಪಿದ್ದಾರೆ. ಮತದಾನ ಮಾಡಲು ಮಂದಾರೆ ಹಾಡಿಯ ಜನರು ಬಂದಾಗ ವಾಗ್ವಾದ ಉಂಟಾಗಿದ್ದು, ಗಲಾಟೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಹೇಗಾಯ್ತು? ಕಾನೂನು ಸುವ್ಯವಸ್ಥೆ ಎಡಿಜಿಪಿ ಹೇಳಿದ್ದಿಷ್ಟು
ಪೊಲೀಸರು, ಚುನಾವಣಾಧಿಕಾರಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ. ಗಲಾಟೆ ನಡೆದಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ಸಿಬ್ಬಂದಿ, ಮತಗಟ್ಟೆ ಮೇಲೆ ಕಲ್ಲೆಸೆತ
ಗಲಾಟೆಯಲ್ಲಿ ತಹಶೀಲ್ದಾರ್ ಗುರುಪ್ರಸಾದ್ ಹಾಗೂ ಪೊಲೀಸರಿಗೂ ಗಾಯಗಳಾಗಿದ್ದು, ಮಲೆಮಹದೇಶ್ವರ ಬೆಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರ ಲಾಠಿ ಚಾರ್ಜ್ನಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರು, ಚುನಾವಣಾ ಸಿಬ್ಬಂದಿ, ಮತಗಟ್ಟೆ ಮೇಲೆ ಕಲ್ಲೆಸೆದಿದ್ದರು. ಮತಗಟ್ಟೆಗೆ ನುಗ್ಗಿ ಇವಿಎಂ, ಕುರ್ಚಿ, ಮೇಜು ಪುಡಿಗಟ್ಟಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:06 pm, Fri, 26 April 24