ಕೊವಿಡ್ ವರದಿ ಕೇಳಿದ ಪೊಲೀಸ್ ಸಿಬ್ಬಂದಿ ಮೇಲೆ ಲಾರಿ ಹರಿಸಲು ಯತ್ನಿಸಿದ ಚಾಲಕ

ಜಿಲ್ಲೆಯನ್ನು ಪ್ರವೇಶಿಸುವ ವಾಹನಗಳ ಚಾಲಕರಿಗೆ ಕೊವಿಡ್​ ತಪಾಸಣೆ ವರದಿ ತೋರಿಸಲು ಕೇಳಿದ ಪೊಲೀಸ್ ಸಿಬ್ಬಂದಿಯ ಮೇಲೆ ಲಾರಿ ಹರಿಸಲು ಚಾಲಕ ಯತ್ನಿಸಿರುವ ಘಟನೆ ಯರಗೋಳ್ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ

ಕೊವಿಡ್ ವರದಿ ಕೇಳಿದ ಪೊಲೀಸ್ ಸಿಬ್ಬಂದಿ ಮೇಲೆ ಲಾರಿ ಹರಿಸಲು ಯತ್ನಿಸಿದ ಚಾಲಕ
ಯಾದಗಿರಿ ಜಿಲ್ಲೆಯ ಗಡಿಯ ಚೆಕ್​ಪೋಸ್ಟ್​ಗಳಲ್ಲಿ ಒಮಿಕ್ರಾನ್ ಭೀತಿಯಿಂದ ಕೊವಿಡ್ ತಪಾಸಣೆ ಚುರುಕುಗೊಳಿಸಲಾಗಿದೆ.
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 28, 2021 | 5:08 PM

ಯಾದಗಿರಿ: ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಆತಂಕ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಜಿಲ್ಲೆಯನ್ನು ಪ್ರವೇಶಿಸುವ ವಾಹನಗಳ ಚಾಲಕರಿಗೆ ಕೊವಿಡ್​ ತಪಾಸಣೆ ವರದಿ ತೋರಿಸಲು ಕೇಳಿದ ಪೊಲೀಸ್ ಸಿಬ್ಬಂದಿಯ ಮೇಲೆ ಲಾರಿ ಹರಿಸಲು ಚಾಲಕ ಯತ್ನಿಸಿರುವ ಘಟನೆ ಯರಗೋಳ್ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ. ಬ್ಯಾರಿಕೇಡ್‌ಗೆ ಲಾರಿ ಗುದ್ದಿದ ನಂತರ ಕಾನ್​ಸ್ಟೆಬಲ್ ಮೇಲೆ ಲಾರಿ ಹರಿಸಲು ಯತ್ನಿಸಿದ ಚಾಲಕ ಇದೇ ವಿಚಾರವಾಗಿ ಜಗಳಕ್ಕಿಳಿದ. ಚಾಲಕನನ್ನು ಲಾರಿಯಿಂದ ಕೆಳಗಿಳಿಸಿದ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಎಚ್ಚರಿಕೆ ಕೊಟ್ಟರು. ಕೊವಿಡ್ ಟೆಸ್ಟ್ ಮಾಡಿಸಿದ ಬಳಿಕವೇ ಚಾಲಕನಿಗೆ ತಹಶೀಲ್ದಾರ್ ಜಿಲ್ಲೆಯೊಳಗೆ ಪ್ರವೇಶ ನೀಡಿದರು.

ಒಮಿಕ್ರಾನ್ ಆತಂಕ: ದಾವಣಗೆರೆಯಲ್ಲಿ ಬಿಗಿ ತಪಾಸಣೆ ಆರಂಭ
ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬರುವವರ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ಇರಿಸಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ. ನಗರದಲ್ಲಿ ನಡೆಯುವ ವಿಐಪಿ ಮದುವೆಗಳ ಮೇಲೆ ನಿಗಾ ಇರಿಸಲಾಗುವುದು. ಜಿಲ್ಲೆಯಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಹೊಸ ವೇಗ ನೀಡಲಾಗಿದೆ. ಕೇರಳ, ಮಹಾರಾಷ್ಟ್ರದಿಂದ ಬರುವವರ ತೀವ್ರ ಮೇಲೆ ನಿಗಾ ಇರಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಆತಂಕ ಪಡುವ ಪರಿಸ್ಥಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಎಲ್ಲರಿಗೂ ಎರಡು ಡೋಸ್ ಕೊರೊನಾ ಲಸಿಕೆ ನೀಡಲು ಸಮರೋಪಾದಿಯಲ್ಲಿ ಕೆಲಸ ಆರಂಭಿಸಲಾಗಿದೆ. ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಭಾನುವಾರ ಸಹ ರಜೆ ಪಡೆಯದೆ ನಿರಂತರ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಆತಂಕ ಪಡುವಂತಹ ಪರಿಸ್ಥಿತಿ ಇಲ್ಲ ಎಂದು ಅವರು ತಿಳಿಸಿದರು.

ಪೊಲೀಸರಿಂದ ಬೈಕ್ ಕಳ್ಳನ ಬಂಧನ
ಬೈಕ್​ಗಳನ್ನು ಕದಿಯುತ್ತಿದ್ದ ಕಳ್ಳನನ್ನು ಯಾದಗಿರಿ ಜಿಲ್ಲೆ ಸುರಪುರ ಪೊಲೀಸರು ಬಂಧಿಸಿದ ಘಟನೆ ಭಾನುವಾರ ನಡೆದಿದೆ. ಬೀದರ್ ಜಿಲ್ಲೆ ಬಸವಕಲ್ಯಾಣ ಮೂಲದ ರಂಜಿತ್ ಬಂಧಿತ ಯುವಕ. ಬಂಧಿತನಿಂದ 2 ಬೈಕ್​ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Omicron: ಮಜವಾದ ಮೀಮ್​ಗಳಿಗೆ ಆಹಾರವಾದ ಭೀಕರ ವೈರಸ್ ಒಮಿಕ್ರಾನ್; ನೆಟ್ಟಿಗರು ಹೇಳೋದೇನು?
ಇದನ್ನೂ ಓದಿ: ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ; ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್​ನಲ್ಲಿ ಹೈ ಅಲರ್ಟ್