ಮದುವೆಯಾಗಿ ಮನೆಬಿಟ್ಟು ಹೋದ ಲವರ್ಸ್.. ರೊಚ್ಚಿಗೆದ್ದ ಯುವತಿ ಕುಟುಂಬಸ್ಥರಿಂದ ಯುವಕನ ಮನೆಗೆ ಬೆಂಕಿ
ತಮ್ಮ ವಿರೋಧವಿದ್ದರೂ ತಮಗೆ ಬೆಲೆ ಕೊಡದೆ ವಿವಾಹವಾಗಿದ್ದಾಳೆ ಎಂದ ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಯವಕನ ಮನೆಗೆ ಬೆಂಕಿ ಹಚ್ಚಿದ್ದಾರೆ.
ಆನೇಕಲ್: ವಿರೋಧದ ಮಧ್ಯೆ ಯುವತಿ ಪ್ರೀತಿಸಿ ವಿವಾಹವಾದ ಹಿನ್ನೆಲೆಯಲ್ಲಿ ಯುವತಿ ಕುಟುಂಬಸ್ಥರು ಯುವಕನ ಮನೆಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕು ವ್ಯಾಪ್ತಿಯ ಸರ್ಜಾಪುರ ಬಳಿಯ ಗೋಣಿಘಟ್ಟಪುರ ಗ್ರಾಮದಲ್ಲಿ ನಡೆದಿದೆ. ತಮ್ಮ ವಿರೋಧವಿದ್ದರೂ ತಮಗೆ ಬೆಲೆ ಕೊಡದೆ ವಿವಾಹವಾಗಿದ್ದಾಳೆ ಎಂದು ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಯವಕನ ಮನೆಗೆ ಬೆಂಕಿ ಹಚ್ಚಿದ್ದಾರೆ.
ಈ ಪರಿಣಾಮ ಬೈಕ್ ಸಹಿತ ಯುವಕನ ಮನೆ ಸುಟ್ಟು ಕರಕಲಾಗಿದೆ. 2 ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ರಾಹುಲ್ ಮತ್ತು ರೇಖಾ ಎಂಬ ಜೋಡಿ ಕಳೆದ 4 ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ರಾಹುಲ್, ರೇಖಾ ಸಂಬಂಧಿಯಾದರೂ ಇವರಿಬ್ಬರ ಮದುವೆಗೆ ಕುಟುಂಬದಲ್ಲಿ ವಿರೋಧವಿತ್ತು. ಯುವತಿ ಕುಟುಂಬದವರು ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ರಾಹುಲ್ ಮತ್ತು ರೇಖಾ ಇಬ್ಬರೂ 4 ದಿನಗಳ ಹಿಂದೆಯೇ ಮದುವೆಯಾಗಿ ಊರು ಬಿಟ್ಟು ಓಡಿ ಹೋಗಿದ್ದಾರೆ.
ಇದನ್ನು ಸಹಿಸಲಾಗದ ಯುವತಿಯ ಕುಟುಂಬಸ್ಥರು ಯುವಕನ ಮನೆಗೆ ಬೆಂಕಿ ಹಚ್ಚಿದ್ದಾರೆ. ವಿರೋಧದ ಮಧ್ಯೆಯೂ ವಿವಾಹವಾಗಿದ್ದಾರೆ ಎಂದು ಇಂತಹ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ. ಯುವತಿ ಕುಟುಂಬಸ್ಥರ ಕೋಪಕ್ಕೆ ಒಂದು ಅಂತಸ್ತಿನ ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಬೈಕ್ ಸುಟ್ಟು ಕರಕಲಾಗಿದೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರೀತಿಸಿ ಓಡಿ ಹೋದ ಜೋಡಿ.. ಯುವಕನ ತಾಯಿಗೆ ಯುವತಿಯ ಪೋಷಕರು ಹೀಗಾ ಮಾಡೋದು? ಛೇ