ಬೆಂಗಳೂರು, ಮೇ 13: ಲೋಕಸಭೆ ಚುನಾವಣೆ (Lok Sabha Polls) ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Karnataka Congress Government) ಪತನವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ (Eknath Shinde) ಸುಳಿವು ನೀಡಿದ್ದಾರೆ. ತೆರೆಯ ಮರೆಯಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಂದಲೇ ತಮಗೆ ಆಪರೇಷನ್ ಮಾಡಲು (Operation Kamala) ಆಹ್ವಾನವಿದೆ ಎಂದಿರುವ ಅವರು, ‘ನಾಥ್’ ಮಾದರಿ ಆಪರೇಷನ್ ಮಹಾರಾಷ್ಟ್ರದಲ್ಲಿ ಖ್ಯಾತಿ ಗಳಿಸಿದೆ. ಅದೇ ಮಾದರಿಯ ಆಪರೇಷನ್ಗೆ ಕರ್ನಾಟಕದಿಂದಲೂ ಆಹ್ವಾನವಿದೆ ಎಂದಿದ್ದಾರೆ.
ಮಹಾರಾಷ್ಟ್ರದ ಸತರಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಮೇ 9 ರಂದು ಏಕನಾಥ್ ಶಿಂಧೆ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆಗ ಮಾತನಾಡಿದ್ದ ಶಿಂಧೆ, ಲೋಕಸಭೆಯ ನಂತರ ಕರ್ನಾಟಕ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ದರು.
ಚುನಾವಣಾ ಪ್ರಚಾರದ ನಿಮಿತ್ತ ಬೆಳಗಾವಿಗೆ ಹೋಗಿದ್ದಾಗ ಅಲ್ಲಿನ ಬಿಜೆಪಿ ಪದಾಧಿಕಾರಿಗಳು ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ನನ್ನನ್ನು ಭೇಟಿಯಾಗಲು ಉತ್ಸುಕತೆಯಿಂದ ಬಂದಿದ್ದರು. ಈ ‘ನಾಥ’ ಯಾರೆಂದು ನೋಡಲು ಬಯಸಿದ್ದರು. ಆಗ, ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ‘ನಾಥ್’ ಮಾದರಿ ಆಪರೇಷನ್ಗೆ ಮನವಿ ಮಾಡಿದ್ದರು ಎಂದು ಶಿಂಧೆ ಹೇಳಿದ್ದಾರೆ.
ಆದರೆ, ಕರ್ನಾಟಕ ಸರ್ಕಾರ ಚುನಾವಣೆ ನಂತರ ಪತನವಾಗಲಿದೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಲು ಶಿಂಧೆ ನಿರಾಕರಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಆ ಬಗ್ಗೆ ಕೇಳಿದಾಗ ಸುಮ್ಮನೆ ನಕ್ಕು ಅಲ್ಲಿಂದ ತೆರಳಿದ್ದಾರೆ.
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ರನ್ನು ಸಿಎಂ ಹುದ್ದೆಯಿಂದ ವಜಾಗೊಳಿಸುವಂತೆ ಕೋರಿ ಸುಪ್ರೀಂಗೆ ಸಲ್ಲಿಸಲಾಗಿದ್ದ ಅರ್ಜಿ ತಿರಸ್ಕೃತ
ಶಿಂಧೆ ಹೇಳಿಕೆಗೆ ಕರ್ನಾಟಕದ ಬಿಜೆಪಿ ನಾಯಕರು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ನಂತರ ಆಪರೇಷನ್ ಕಮಲ ನಡೆಯಲಿದೆ ಎಂಬ ಬಗ್ಗೆ ಈ ಹಿಂದೆಯೂ ಹಲವು ಬಾರಿ ವದಂತಿಗಳು ಹರಿದಾಡಿವೆ. ಅದಕ್ಕೆ ಕಾಂಗ್ರೆಸ್ ನಾಯಕರೂ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Mon, 13 May 24