ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ದಶಕಗಳ ಗಡಿ ವಿವಾದವು (Karnataka Maharashtra border issue) ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Maharashtra Deputy Chief Minister Devendra Fadnavis) ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka chief minister Basavaraj Bommai) ಪರಸ್ಪರ ವಾಗ್ದಾಳಿಯೊಂದಿಗೆ ಮತ್ತೆ ಭುಗಿಲೆದ್ದಿದೆ. ಮಹಾರಾಷ್ಟ್ರದ ಯಾವುದೇ ಗ್ರಾಮವು ಎಲ್ಲಿಯೂ ಹೋಗುವುದಿಲ್ಲ ಎಂದು ಫಡ್ನವೀಸ್ ಬುಧವಾರ ಭರವಸೆ ನೀಡಿದ್ದು, ಇದಕ್ಕೆ ಉತ್ತರಿಸಿದ ಬೊಮ್ಮಾಯಿ ಅವರು ಫಡ್ನವೀಸ್ ಹೇಳಿಕೆಯನ್ನು ಪ್ರಚೋದನಕಾರಿ ಎಂದು ಹೇಳಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ಎಂದಿಗೂ ನನಸಾಗುವುದಿಲ್ಲ, ದೇಶದ ನೆಲ, ಜಲ, ಗಡಿ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಈ ತಿಂಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿರುವುದರಿಂದ ಮತ್ತೆ ಕೇಂದ್ರಬಿಂದುವಾಗಿದೆ. ವಿಚಾರಣೆಗೆ ಮುಂಚಿತವಾಗಿ, ಉಭಯ ಸರ್ಕಾರಗಳು ಪ್ರಕರಣದ ವಿರುದ್ಧ ಹೋರಾಡಲು ತಮ್ಮ ಕಾನೂನು ತಂಡಗಳನ್ನು ಸಿದ್ಧಪಡಿಸುತ್ತಿವೆ. ಇದೇ ವೇಳೆ ನೀರಿನ ಸಮಸ್ಯೆ ಎದುರಿಸುತ್ತಿರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಕರ್ನಾಟಕದೊಂದಿಗೆ ವಿಲೀನಗೊಳಿಸುವ ನಿರ್ಣಯ ಅಂಗೀಕರಿಸಿರುವುದಾಗಿ ಬೊಮ್ಮಾಯಿ ಹೇಳಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಯಾವುದೇ ನಿರ್ಣಯವನ್ನು ಮಾಡಲಾಗಿಲ್ಲ ಮತ್ತು ಬೊಮ್ಮಾಯಿ ಅವರು ಉಲ್ಲೇಖಿಸಿದ ನಿರ್ಣಯವು 2012 ರಲ್ಲಿತ್ತು ಎಂದು ಫಡ್ನವೀಸ್ ಬುಧವಾರ ಸ್ಪಷ್ಟಪಡಿಸಿದ್ದಾರೆ. “ಮಹಾರಾಷ್ಟ್ರದ ಒಂದು ಹಳ್ಳಿಯೂ ಎಲ್ಲಿಯೂ ಹೋಗುವುದಿಲ್ಲ ಎಂದೂ ಫಡ್ನವೀಸ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವೆಬ್ಸೈಟ್ ವರದಿ ಮಾಡಿದೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದವೇನು?
ಗಡಿ ವಿವಾದವು ರಾಜ್ಯಗಳ ರಚನೆಯಾದ ಕಾಲದಿಂದಲೂ ಇದೆ. ಗಡಿಯಲ್ಲಿರುವ 865 ಹಳ್ಳಿಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕಿತ್ತು ಎಂದು ಮಹಾರಾಷ್ಟ್ರ ಹೇಳಿಕೊಂಡರೆ, ಕನ್ನಡ ಮಾತನಾಡುವ 260 ಹಳ್ಳಿಗಳು ಕರ್ನಾಟಕಕ್ಕೆ ಎಂದು ಕರ್ನಾಟಕ ಹೇಳುತ್ತಿದೆ.