ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ನಾಗೇಂದ್ರ ರಾಜೀನಾಮೆಗೆ ಸೂಚಿಸಿಲ್ಲವೆಂದ ಸಿಎಂ ಸಿದ್ದರಾಮಯ್ಯ

ವಾಲ್ಮೀಕಿ ಅಭಿವೃದ್ಧಿ ನಿಮಗದ ಹಗರಣದಲ್ಲಿ ಹೆಸರು ಕೇಳಿಬಂದಿರುವುದರಿಂದ ಸಚಿವ ನಾಗೇಂದ್ರ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಶುಕ್ರವಾರ ವರದಿಯಾಗಿತ್ತು. ಆದರೆ, ಸಚಿವರ ರಾಜೀನಾಮೆಗೆ ಸೂಚಿಸಿಲ್ಲ ಎಂದು ಅವರು ಈಗ ಸ್ಪಷ್ಟನೆ ನೀಡಿದ್ದಾರೆ. ತನಿಖೆ ಆಗಿ ವರದಿ ಕೈಸೇರಿದ ನಂತರ ಮುಂದಿನ ಕ್ರಮ ಎಂದು ಅವರು ಹೇಳಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ನಾಗೇಂದ್ರ ರಾಜೀನಾಮೆಗೆ ಸೂಚಿಸಿಲ್ಲವೆಂದ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
Updated By: Ganapathi Sharma

Updated on: Jun 03, 2024 | 2:43 PM

ಬೆಂಗಳೂರು, ಜೂನ್ 3: ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ (B Nagendra) ರಾಜೀನಾಮೆಗೆ ಸೂಚನೆ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸೋಮವಾರ ಹೇಳಿದರು. ವಾಲ್ಮೀಕಿ ಅಭಿವೃದ್ಧಿ ನಿಮಗದ ಹಗರಣದಲ್ಲಿ ಹೆಸರು ಕೇಳಿಬಂದಿರುವುದರಿಂದ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಶುಕ್ರವಾರ ವರದಿಯಾಗಿತ್ತು. ಇದೀಗ ಸಿಎಂ ಅದನ್ನು ಅಲ್ಲಗಳೆದಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಸ್‌ಐಟಿ ರಚನೆಯಾಗಿ ಇನ್ನೂ ಎರಡು ದಿವಸ ಆಗಿದೆಯಷ್ಟೆ. ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ವರದಿ ನೀಡಿಲ್ಲ ಎಂದರು.

ಸಿಎಂಗೆ ನಾಗೇಂದ್ರ ಬೆದರಿಕೆಯೊಡ್ಡಿದ್ದಾರೆಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಬೆದರಿಕೆಯೂ ಇಲ್ಲವೆಂದರು. ಸಚಿವ ನಾಗೇಂದ್ರ ಬಳಿಯಿಂದ ನಾವು ಯಾವುದೇ ವಿವರಣೆ ಕೇಳಿಲ್ಲ. ರಾಜೀನಾಮೆಗೆ ಗಡುವು ಕೊಡಲು ಬಿಜೆಪಿಗರು ಯಾರು? ವಿಪಕ್ಷ ಇರುವುದು ಹೋರಾಟ ಮಾಡಲು ಎಂದು ಸಿದ್ದರಾಮಯ್ಯ ಹೇಳಿದರು.

ಜೂನ್ 13ರಂದು ವಿಧಾನಸಭೆಯಿಂದ ವಿಧಾನಪರಿಷತ್​ಗೆ ನಡೆಯಲಿರುವ ಚುನಾವಣೆಗೆ ನಮ್ಮ ಪಕ್ಷದಿಂದ 7 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್​ನ 7 ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. 9-20 ಮತಗಳು ಬೇಕು, ನಮ್ಮ ಸಂಖ್ಯಾಬಲದ ಮೇಲೆ ಗೆಲ್ಲುತ್ತೇವೆ. ಬಿಜೆಪಿಯ ಮೂವರು, ಜೆಡಿಎಸ್​​​ನ ಓರ್ವ ಅಭ್ಯರ್ಥಿ ಕಣದಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್​ ಪತನ: ನಾಗೇಂದ್ರ ರಾಜಿನಾಮೆಗೆ ಸಿಎಂ ಸೂಚನೆ

ನಾವು ಎಕ್ಸಿಟ್ ಪೋಲ್ ಒಪ್ಪುವುದಿಲ್ಲ: ಸಿದ್ದರಾಮಯ್ಯ

ಎಕ್ಸಿಟ್​ ಪೋಲ್​ನಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ದೊರೆತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಾವು ಎಕ್ಸಿಟ್ ಪೋಲ್ ಅನ್ನು ಒಪ್ಪುವುದಿಲ್ಲ. ಕರ್ನಾಟಕದಲ್ಲಿ ನಾವು 15-20 ಸ್ಥಾನ ಗೆಲ್ಲುತ್ತೇವೆ ಎಂದರು. ಡಿಸಿಎಂ ಡಿಕೆ ಶಿವಕುಮಾರ್ ಸಹ ಎಕ್ಸಿಟ್ ​​ಪೋಲ್ ದಿನವೇ ಈ ರೀತಿ ಪ್ರತಿಕ್ರಿಯಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:25 pm, Mon, 3 June 24