ಬಿಜೆಪಿಗೆ ಶಾಕ್ ಕೊಟ್ಟ ಮಿತ್ರಪಕ್ಷ ಜೆಡಿಎಸ್: ಚಿಗುರೊಡೆಯುತ್ತಿದ್ದ ಕಮಲವನ್ನ ಚಿವುಟಿ ಹಾಕಿದ ದಳಪತಿ

ಬಿಜೆಪಿ ಹಾಗೂ ಜೆಡಿಎಸ್ ನ ದೋಸ್ತಿಗೆ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಫಲಿತಾಂಶವೇನೋ ಸಿಕ್ಕಿದೆ. ಆದರೆ ಎಲೆಕ್ಷನ್ ಮುಗಿತಾ ಇದ್ದಂತೆ ಎರಡು ಪಕ್ಷಗಳ ಸಂಘಟನೆ ಹೆಸರಲ್ಲಿ ಬೇರೇ ಬೇರೆ ದಾರಿ ತುಳಿದಿರೋದು ಸಹಜವಾಗಿಯೇ ಕಾರ್ಯಕರ್ತರು ಹಾಗೂ ನಾಯಕರಿಗೆ ಬೇಸರ ತರಿಸಿದೆ. ಹೀಗಾಗಿ ಈಗ ಶಾಸಕರೇ ಸಮನ್ವಯ ಸಮಿತಿ ರಚನೆ ಬಗ್ಗೆ ಮಾತನಾಡುತ್ತಿದ್ದಾರೆ. ಪರಿಣಾಮ ಖುದ್ದು ಬಿ.ಎಸ್. ಯಡಿಯೂರಪ್ಪರಂತಹ ವರಿಷ್ಠ ನಾಯಕರೇ ಈಗ ಬಿಜೆಪಿ ಬೇರೆ ಅಲ್ಲ ಜೆಡಿಎಸ್ ಬೇರೆ ಅಲ್ಲ ಎಂಬ ಸಂದೇಶ ರವಾನಿಸುವಂತಾಗಿದೆ. ಈ ಎಲ್ಲಾ ಬೆಳವಣಿಗೆಳ ಮಧ್ಯೆಯೇ ಮಿತ್ರ ಜೆಡಿಎಸ್​​, ಬಿಜೆಪಿಗೆ ಬಿಗ್ ಶಾಕ್​ ಕೊಟ್ಟಿದೆ.

ಬಿಜೆಪಿಗೆ ಶಾಕ್ ಕೊಟ್ಟ ಮಿತ್ರಪಕ್ಷ ಜೆಡಿಎಸ್: ಚಿಗುರೊಡೆಯುತ್ತಿದ್ದ ಕಮಲವನ್ನ ಚಿವುಟಿ ಹಾಕಿದ ದಳಪತಿ
Bjp And Jds

Updated on: Jun 22, 2025 | 1:33 PM

ಬೆಂಗಳೂರು, (ಜೂನ್ 22): ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬೆಂಗಳೂರು ಭೇಟಿ ಬಳಿಕ ಕರ್ನಾಟಕ ಬಿಜೆಪಿಯಲ್ಲಿ (Karnataka BJP) ರಾಜಕೀಯ ಚಟುವಟಿಕೆಗಳಲ್ಲಿ ಬದಲಾವಣೆ ಕಾಣಿಸಿಕೊಂಡಿದೆ.  ಶಾ  ಬೆಂಗಳೂರಿಗೆ ಬಂದು ಹೋದಾಗಲೆಲ್ಲಾ ರಾಜ್ಯ ಬಿಜೆಪಿಗೊಂದು ಇಂಜೆಕ್ಷನ್ ಕೊಟ್ಟು ಹೋಗುತ್ತಾರೆ ಎಂಬುದು ಪಕ್ಷದ ಪಡಸಾಲೆಯಲ್ಲಿ ಹಿಂದಿನಿಂದಲೂ ಇರುವ ಮಾತು. ಮತ್ತೊಮ್ಮೆ ಅದಕ್ಕೆ ಪೂರಕವಾದ ಬೆಳವಣಿಗೆಗಳು ನಡೆದಿವೆ. ಇದರ ಮಧ್ಯೆ ಮಿತ್ರ ಪಕ್ಷ ಜೆಡಿಎಸ್ (JDS)​​, ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದೆ. ಹೌದು…2023ರ ಚುನಾವಣೆಯಲ್ಲಿ ಮೈಸೂರು ಜಿಲ್ಲೆ ಹೆಚ್​.ಡಿ.ಕೋಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ಕೃಷ್ಣ ನಾಯಕ್ (HD Kote BJP Leader Krishna Nayak) ಬಿಜೆಪಿಗೆ (BJP) ಗುಡ್ ಬೈ ಹೇಳಿ ಇಂದು (ಜೂನ್ 22) ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮೈಸೂರು ಭಾಗದಲ್ಲಿ ಚಿಗುರೊಡೆಯುತ್ತಿದ್ದ ಕಮಲವನ್ನು ಜೆಡಿಎಸ್ ಚಿವುಟಿ ಹಾಕಿದಂತಾಗಿದೆ.

2023ರ ಚುನಾವಣೆಯಲ್ಲಿ ಮೈಸೂರು ಜಿಲ್ಲೆ ಹೆಚ್​.ಡಿ.ಕೋಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ಕೃಷ್ಣ ನಾಯಕ್ ಅವರು ಇಂದು ಬೆಂಗಳೂರಿನಲ್ಲಿ ಜೆಡಿಎಸ್​ ಸೇರ್ಪಡೆಯಾದರು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಕೃಷ್ಣ ನಾಯಕ್ ಅವರು ತಮ್ಮ ಅಪಾರ ಬೆಂಬಲಿಗರ ಜೊತೆ ಜೆಡಿಎಸ್ ಸೇರ್ಪಡೆಯಾಗಿದ್ದು, ಪ್ರಮುಖ ನಾಯಕನನ್ನು ಕಳೆದುಕೊಂಡ ಬಿಜೆಪಿಗೆ  ಮೈಸೂರು ಭಾಗದಲ್ಲಿ ಮತ್ತೆ ಹೊಡೆತಬಿದ್ದಂತಾಗಿದೆ.

ಹಿರಿಯ ಕಾಂಗ್ರೆಸ್ ಮುಖಂಡ ಕೃಷ್ಣನಾಯಕ್ ಅವರು 2021ರಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಬಳಿಕ ಜೆಡಿಎಸ್ ತೊರೆದಯ ಬಿಜೆಪಿಗೆ ಸೇರ್ಪಡೆಯಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಚ್​ ಡಿ ಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಕೃಷ್ಣ ನಾಯಕ್ ಅವರು ಬಿಜೆಪಿ ತೊರೆದು ವಾಪಸ್ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.   ಹಳೇ ಮೈಸೂರು ಭಾಗದಲ್ಲೇ ಬಿಜೆಪಿ ಸೊರಗಿದೆ. ಹೀಗಾಗಿ ಇಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕೆನ್ನುವ ಪ್ಲ್ಯಾನ್ ಇತ್ತು. ಅಲ್ಲದೇ ಈ ಹಿಂದೆಯೇ ಹೈಕಮಾಂಡ್​, ಹಳೇ ಮೈಸೂರು ಭಾಗದಲ್ಲಿ ಸಂಘಟನೆ  ಹೆಚ್ಚು ಹೊತ್ತು ನೀಡುವಂತೆ ರಾಜ್ಯ ನಾಯಕರಿಗೆ ಸಂದೇಶ ನೀಡಿತ್ತು. ಇದರ ಮಧ್ಯ ಮಿತ್ರ ಪಕ್ಷವೇ ಆಪರೇಷನ್ ಮಾಡಿದ್ದು, ಬಿಜೆಪಿಗೆ ಬಿಗ್ ಶಾಕ್ ಆಗಿದೆ.

ಪಕ್ಷ ಸಂಘಟನೆಯತ್ತ ಮುಖ ಮಾಡಿದ ಜೆಡಿಎಸ್

ಇನ್ನು ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಜೆಡಿಎಸ್‌ಗೆ ಲಾಭ ಆದರೂ ಸಂಘಟನೆಯ ದೃಷ್ಟಿಯಿಂದ ಅನಾನುಕೂಲ ಆಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಮಂಡ್ಯದಲ್ಲಿ ಎಚ್‌ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದರೆ, ಕೋಲಾರದಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಚುನಾವಣಾ ದೃಷ್ಟಿಯಿಂದ ಇದು ಜೆಡಿಎಸ್‌ ಗೆ ಅನುಕೂಲ. ಆದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ನೆಲೆ ವಿಸ್ತರಣೆಗೆ ಪ್ರಯತ್ನ ನಡೆಸುತ್ತಿದೆ. ಹೀಗಾದರೆ ಇದರಿಂದ ಜೆಡಿಎಸ್‌ಗೆ ಸಂಘಟನೆಯ ದೃಷ್ಟಿಯಿಂದ ಹಿನ್ನಡೆಯಾಗುವ ಆತಂಕ ಶುರುವಾಗಿದೆ. ಹೀಗಾಗಿ ಪಕ್ಷ ಸಂಘಟನೆಯತ್ತ ಮುಖ ಮಾಡಿದೆ.

ಬಿಜೆಪಿ- ಜೆಡಿಎಸ್ ಮೈತ್ರಿ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಮೈತ್ರಿಯಲ್ಲಿ ನಿಧಾನವಾಗಿ ಒಡಕು ಮೂಡುತ್ತಿದೆ. ಇದು ಬಹಿರಂಗವಾಗಿ ದೊಡ್ಡ ಮಟ್ಟದಲ್ಲಿ ಸ್ಫೋಟಗೊಳ್ಳದೆ ಇದ್ದರೂ, ಆಂತರಿಕವಾಗಿ ಅಸಮಾಧಾನಗಳು ಭುಗಿಲೇಳುತ್ತಿವೆ.

ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್​​ಗೆ ತಯಾರಿ

ಇನ್ನೇನು ಸ್ಥಳೀಯ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುತ್ತಿದ್ದು, ಇದಕ್ಕೆ ಪಕ್ಷವನ್ನು ಬಲಪಡಿಸಲು ಜೆಡಿಎಸ್​ ಸಜ್ಜಾಗಿದೆ. ಈ ನಡುವೆ ಮೈತ್ರಿಯಲ್ಲಿ ಲಾಭ ನಷ್ಟದ ಲೆಕ್ಕಾಚಾರಗಳು ಶುರುವಾಗಿದ್ದು, ದೀರ್ಘ ಕಾಲದ ಮೈತ್ರಿಯಿಂದ ಜೆಡಿಎಸ್‌ಗೆ ಹಳೆ ಮೈಸೂರು ಭಾಗದಲ್ಲಿ ಹಿನ್ನಡೆ ಆಗುವ ಆತಂಕವೂ ಕಾಡುತ್ತಿದೆ. ಹೀಗಾಗಿ ಜೆಡಿಎಸ್​, ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ.

ಲೋಕಸಭೆ ಚುನಾವಣೆಯಲ್ಲಿ ನಡೆದ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಜೆಡಿಎಸ್ 2 ಸ್ಥಾನಗಳನ್ನು ಗಳಿಸಿಕೊಂಡಿದೆ. ಮಂಡ್ಯದಲ್ಲಿ ಎಚ್‌ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರೆ, ಕೋಲಾರದಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಚುನಾವಣಾ ದೃಷ್ಟಿಯಿಂದ ಇದು ಜೆಡಿಎಸ್‌ ಗೆ ಅನುಕೂಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 18 ಸ್ಥಾನ ಗಳಿಸಿಕೊಂಡಿದ್ದ ಜೆಡಿಎಸ್‌ಗೆ ಲೋಕಸಭೆ ಫಲಿತಾಂಶ ಕೊಂಚ ನೆಮ್ಮದಿ ತಂದುಕೊಟ್ಟಿತ್ತು.

ಹೈಕಮಾಂಡ್​ ಜೊತೆ ಕುಮಾರಸ್ವಾಮಿ ಉತ್ತಮ ಸಂಬಂಧ

ಇನ್ನು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಆದ ಮೈತ್ರಿಯ ಪರಿಣಾಮ ಕೇಂದ್ರದಲ್ಲಿ ಜೆಡಿಎಸ್‌ಗೆ ಸೂಕ್ತ ಸ್ಥಾನಮಾನ ಸಿಕ್ಕಿದೆ. ಎಚ್‌ಡಿ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವ ಸ್ಥಾನ ಹಾಗೂ ಪ್ರಭಾವಿ ಖಾತೆಯನ್ನು ಹೊಂದಿದ್ದಾರೆ. ಇದು ಜೆಡಿಎಸ್‌ಗೆ ರಾಜ್ಯದಲ್ಲೂ ಅನುಕೂಲ ಮಾಡಿಕೊಟ್ಟಿದೆ. ಪಕ್ಷ ಸಂಘಟನೆಗೆ ಅಧಿಕಾರವೂ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಕೇಂದ್ರ ಬಿಜೆಪಿ ನಾಯಕರ ಜೊತೆಗೂ ಉತ್ತಮ ಬಾಂಧವ್ಯದಲ್ಲಿ ಇದ್ದಾರೆ. ಹೀಗಾಗಿ ಕುಮಾರಸ್ವಾಮಿ, ರಾಜ್ಯ ಬಿಜೆಪಿ ನಾಯಕರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದಕ್ಕೆ ಪೂರಕವೆಂಬಂತೆ ಮೊನ್ನೆ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಆಡಿದ ಮಾತುಗಳು. ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಿ. ಕ್ಷೇತ್ರವನ್ನು ಹಿಡಿತದಲ್ಲಿ ಹಿಡಿದಿಟ್ಟುಕೊಳ್ಳಿ. ಮೈತ್ರಿ ಇದ್ದರೂ ಮೇಲಿಂದ ಟಿಕೆಟ್ ತರುವುದು ನನ್ನ ಜವಾಬ್ದಾರಿ ಎಂದು ಕುಮಾರಸ್ವಾಮಿ ಬಹಿರಂಗವಾಗಿಯೇ ಜೆಡಿಎಸ್ ನಾಯಕರಿಗೆ ಹೇಳಿದ್ದರು. ಈ ಮುಲಕ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಯೋಚನೆ ಬೇಡ. ಹೈಕಮಾಂಡ್​ ತಮ್ಮ ಜೊತೆ ಉತ್ತಮವಾಗಿದೆ ಎನ್ನುವ ಸಂದೇಶವನ್ನು ನೀಡಿದ್ದರು.

ಸಮನ್ವಯ ಸಮಿತಿ ರಚಿನೆ ಕೂಗು

ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ದೋಸ್ತಿ ರಾಜ್ಯದಲ್ಲಿ ಜೋರಾಗಯೇ ನಡೆಯುತ್ತಾ ಇದೆ. ಆದರೆ ಆಗಾಗ ಎರಡು ಪಕ್ಷಗಳ ನಡುವಿನ ಗೊಂದಲ ಆಗಾಗ ಜೋರಾಗಿಯೇ ಕಂಡು ಬರುತ್ತೆ. ಸದನದ ಒಳಗಾಗಲಿ ಅಥವಾ ಸದನದ ಹೊರಗಾಗಲಿ ಕೆಲವೊಮ್ಮೆ ನಿಮ್ಮ ದಾರಿ ನಿಮಗೆ ನಮ್ ದಾರಿ ನಮಗೆ ಅನ್ನೋ ಪಾಲಿಸಿಗೆ ಎರಡು ಪಕ್ಷಗಳು ಮೊರೆ ಹೋಗಿದ್ವು. ಇದರಿಂದಾಗಿ ಜೋಡೆತ್ತುಗಳು ಮೈತ್ರಿ ಬಂಡಿ ಆಗಾಗ ಜರ್ಕ್ ಹೊಡೆದಿದ್ದು ಇದೆ. ಈಗ ಇಂತಹ ಸಮಸ್ಯೆಗೆ ಬ್ರೇಕ್ ಹಾಕಲು ಜೆಡಿಎಸ್ ಹಾಗೂ ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆಯಾಗಬೇಕೆಂಬ ಕೂಗುಗಳು ಕೇಳಿಬರುತ್ತಿವೆ.

ಸಿಎಂ ಸಿದ್ದರಾಮಯ್ಯ ವಿರುದ್ದ ಮುಡಾ ಪಾದಯಾತ್ರೆ ವಿಷಯದಲ್ಲಿ ಬಿಜೆಪಿ ಮುಂದಡಿ ಇಟ್ಟಿತ್ತಾದ್ರೂ, ದೋಸ್ತಿ ಪಕ್ಷ ಜೆಡಿಎಸ್ ಗೆ ಆಕ್ಷಪಣೆ ತೆಗೆದಿತ್ತು. ಬಿಜೆಪಿ ಹೈಕಮಾಂಡ್ ಎಂಟ್ರಿ ಬಳಿಕ ಪಾದಯಾತ್ರೆ ಶುರುವಾಯ್ತು. ಆದರೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕೈ ಕೈ ಹಿಡಿದು ನಡೆದಿದ್ದು ಅಷ್ಟಕ್ಕಷ್ಟೇ ಎಂಬಂತೆ ಇತ್ತು.

ಇನ್ನೂ ಗ್ರೇಟರ್ ಬೆಂಗಳೂರು ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಸದನದ ಒಳಗೂ ಹೊರಗೂ ಹೋರಾಟ ಮಾಡಿದ್ದ ಬಿಜೆಪಿ ದೋಸ್ತಿ ಪಕ್ಷ ಜೆಡಿಎಸ್ ಅನ್ನ ಜತೆಗೆ ಇಟ್ಟುಕೊಳ್ಳದೇ ಮುಂದುವರಿದಿತ್ತು. ಇದು ಸಹಜವಾಗಿಯೇ ಜೆಡಿಎಸ್ ಪಕ್ಷಕ್ಕೆ ಬೇಸರ ತರಿಸಿತ್ತು.

ಸರ್ಕಾರದ ಬೆಲೆ ಏರಿಕೆ, ಅಲ್ಪಸಂಖ್ಯಾತರ ಮೀಸಲಾತಿ ವಿರೋಧಿಸಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯದಿಂದ ಜನಾಕ್ರೋಶ ಯಾತ್ರೆ ಆರಂಭಿಸಿದ್ದ ಬಿಜೆಪಿ, ಜೆಡಿಎಸ್ ನಾಯಕರನ್ನೇ ಆಹ್ವಾನಿಸರಿಲ್ಲ. ಇನ್ನು ಆರ್ ಸಿ ಬಿ ಕಾಲ್ತುಳಿತ ಹೋರಾಟದಲ್ಲೂ ಬಿಜೆಪಿ ಜೆಡಿಎಸ್ ನಾಯಕರು ಆಸ್ಪತ್ರೆಗೆ ತೆರಳಿ ಸಂತ್ರಸ್ತರ ಸಮಸ್ಯೆ ಆಲಿಸಿದ್ರೂ ಕೂಡ ಪ್ರತ್ಯೇಕವಾಗಿ ತಮ್ಮ ಹೋರಾಟವನ್ನ ಸೀಮಿತಿಗೊಳಿಸಿದ್ದರು.

ಹೀಗೆ ಈ ಕಾರಣಕ್ಕಾಗಿಯೇ ಈಗ ಜೆಡಿಎಸ್ ಬಿಜೆಪಿ ನಾಯಕರೇ ಸಮನ್ವಯ ಸಮಿತಿಯ ಅಗತ್ಯತೆ ಇದೆ ಎಂದು ನೇರವಾಗಿಯೇ ಮಾತನಾಡಲು ಮುಂದಾಗಿದ್ದಾರೆ.