
ಬೆಂಗಳೂರು, ಅಕ್ಟೋಬರ್ 2: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಪೇಸ್‌ಮೇಕರ್ ಅಳವಡಿಕೆ ಯಶಸ್ವಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ದೂರವಾಣಿ ಮೂಲಕ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ಖರ್ಗೆ ಆರೋಗ್ಯ ಸಂಬಂಧ ಎಕ್ಸ್ ತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ, ಅವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಉತ್ತಮವಾಗಿದೆ ಎಂದು ಅವರ ಪುತ್ರ, ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ ಕೂಡ ಮಾಹಿತಿ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡಿದೆ. ಅವರ ಆರೋಗ್ಯದ ಬಗ್ಗೆ ವಿಚಾರಿಸಿದೆ ಮತ್ತು ಬೇಗನೆ ಗುಣಮುಖರಾಗುವಂತೆ ಹಾರೈಸಿದೆ. ಅವರು ಬೇಗ ಗುಣಮುಖರಾಗಲಿ ಮತ್ತು ದೀರ್ಘಾಯುಷ್ಯ ಅವರದ್ದಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂಬುದಾಗಿ ಪ್ರಧಾನಿ ಮೋದಿ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
Spoke to Kharge Ji. Enquired about his health and wished him a speedy recovery.
Praying for his continued well-being and long life.@kharge
— Narendra Modi (@narendramodi) October 2, 2025
ಉಸಿರಾಟದ ಸಮಸ್ಯೆಯಿಂದ ಬಳಲಿದ್ದ ಮಲ್ಲಿಕಾರ್ಜುನ ಖರ್ಗೆ ಬುಧವಾರ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಆ ಬಗ್ಗೆ ಮಾಹಿತಿ ನೀಡಿದ ಪ್ರಿಯಾಂಕ್ ಖರ್ಗೆ, ಪೇಸ್‌ಮೇಕರ್ ಅಳವಡಿಸುವುದಕ್ಕಾಗಿ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್‌ಮೇಕರ್ ಅಳವಡಿಕೆ ಯಶಸ್ವಿಯಾಗಿದೆ. ಇದೊಂದು ಸಣ್ಣ ಪ್ರಕ್ರಿಯೆಯಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ. ಎರಡ್ಮೂರು ದಿನಗಳ ವಿಶ್ರಾಂತಿಯ ನಂತರ ಅವರು ಕೆಲಸ ಕಾರ್ಯಗಳಿಗೆ ಹಾಜರಾಗಲಿದ್ದಾರೆ. ನಿಮ್ಮೆಲ್ಲರ ಕಾಳಜಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ಪ್ರಿಯಾಂಕ್ ಖರ್ಗೆ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
Medical Update :
The pacemaker implantation procedure for Sri. Kharge was successfully completed earlier today. It was a short and minor procedure and he has been stable after the procedure.
He is expected to resume his work from October 3 and attend all his scheduled…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 1, 2025
ವಯೋಸಹಜ ಸಮಸ್ಯೆಗಳು ಮತ್ತು ಉಸಿರಾಟದ ತೊಂದರೆಯಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್‌ಮೇಕರ್ ಅಳವಡಿಸಲು ವೈದ್ಯರು ಸಲಹೆ ನೀಡಿದ್ದರು. ಹೃದಯ ಬಡಿತದ ಸ್ಥಿರೀಕರಣಕ್ಕೆ ಇದು ಅಗತ್ಯವಿದೆ ಎಂದು ಹೇಳಿದ್ದರು. ಅದನ್ನು ಹೊರತುಪಡಿಸಿ, ಯಾವುದೇ ಸಮಸ್ಯೆ ಇಲ್ಲ. ಆರೋಗ್ಯವಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು
ಮಂಗಳವಾರ ಎಂದಿನಂತೆಯೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಂತರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಪೇಸ್‌ಮೇಕರ್ ಅಳವಡಿಕೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.