ಡಿಕೆಶಿ ಬೆಂಬಲಿಗರು ಸಿಎಂ ಬದಲಾವಣೆ ಎನ್ನುತ್ತಾರೆ, ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಮಾಡಿಸುತ್ತಾರೆ: ಪ್ರಲ್ಹಾದ್ ಜೋಶಿ
ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಉಲ್ಲೇಖಿಸಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕರ್ನಾಟಕ ಜಾತಿ ಗಣತಿ ವಿಚಾರವಾಗಿ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ. ಅನಾವಶ್ಯಕ ವೈಯಕ್ತಿಕ ಪ್ರಶ್ನೆಗಳು ಮತ್ತು ಹಿಂದೂ ಸಮಾಜವನ್ನು ಒಡೆಯುವ ರಾಜಕೀಯ ಹುನ್ನಾರ ಇದರ ಹಿಂದಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡ, ಅಕ್ಟೋಬರ್ 2: ಸಿದ್ದರಾಮಯ್ಯ (Siddaramaiah) 5 ವರ್ಷ ನಾನು ಸಿಎಂ ಎಂದು ಹೇಳಿಕೊಂಡಿದ್ದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಬಣದವರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಿಎಂ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ ಲೆಕ್ಕಾಚಾರದಿಂದ ಜಾತಿ ಗಣತಿ ಸಾಹಸಕ್ಕೆ ಸಿದ್ದರಾಮಯ್ಯ ಕೈಹಾಕಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟೀಕಿಸಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವಿಚಾರವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಈಗಾಗಲೇ ಜನಗಣತಿ ನಡೆಸುವ ನಿರ್ಧಾರ ಕೈಗೊಂಡಿದೆ. ಹೀಗಾಗಿ ನಮಗೆ ಗಣತಿ ಬಗ್ಗೆ ಯಾವುದೇ ವಿರೋಧವಿಲ್ಲ. ಆದರೆ, ಈಗ ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಅನಾವಶ್ಯಕ ಮತ್ತು ವೈಯಕ್ತಿಕ ಪ್ರಶ್ನೆಗಳನ್ನೂ ಸೇರಿಸಲಾಗಿದೆ. ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಬ್ರಾಹ್ಮಣ ಅಂದರೆ ಏನರ್ಥ? ಇದು ಹಿಂದೂಗಳನ್ನು ಮತಾಂತರ ಮಾಡಲು ಪ್ರೋತ್ಸಾಹಿಸುವ ಗಣತಿ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಸಮಾಜವನ್ನು ಒಡೆಯುವ ರಾಜಕೀಯ ಹುನ್ನಾರವೇ ಜಾತಿ ಗಣತಿ: ಜೋಶಿ
ಅಷ್ಟೇ ಅಲ್ಲದೆ, ಸಮೀಕ್ಷೆಯಲ್ಲಿ ‘ಯಾವುದಾದರೂ ಸಾಮಾಜಿಕ ಸಂಘಟನೆಗೆ ಸೇರಿದ್ದೀರಾ?’ ಎಂಬ ಪ್ರಶ್ನೆಗಳನ್ನೂ ಸೇರಿಸಲಾಗಿದೆ. ಇದು ಹಿಂದೂ ಸಮಾಜವನ್ನು ವಿಭಜಿಸುವ ಪ್ರಯತ್ನ ಎಂದು ಜೋಶಿ ಆರೋಪಿಸಿದರು.
ವೀರಶೈವ ಲಿಂಗಾಯತ ಸಮುದಾಯದ ಶ್ರೀಗಳೂ ಸಮಾವೇಶ ನಡೆಸಿದ್ದಾರೆ. ಯಾವುದೇ ಜಾತಿಯವರಿದ್ದರೂ ಎಲ್ಲರೂ ಹಿಂದೂಗಳೇ ಎಂಬುದು ಅವರ ಅಭಿಪ್ರಾಯ. ಆದರೆ ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜವನ್ನು ಒಡೆಯಲು ರಾಜಕೀಯವಾಗಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಯಾರೂ ಕೂಡ ಅಧಿಕಾರ ಹಂಚಿಕೆ ಬಗ್ಗೆ ಮಾತಾಡಕೂಡದು, ಅದರಿಂದ ಪಕ್ಷಕ್ಕೆ ಹಾನಿ: ಡಿಕೆ ಶಿವಕುಮಾರ್ ಖಡಕ್ ಸೂಚನೆ
ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿಗಣತಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಂಶಗಳ ಸಮೀಕ್ಷೆಯನ್ನು ಒಳಗೊಂಡಿದೆ. ಸಮೀಕ್ಷೆಯ ಮೂಲಕ ಪ್ರತಿಯೊಂದು ಕುಟುಂಬದ ಮಾಹಿತಿ ಸಂಗ್ರಹಿಸುವುದು ಉದ್ದೇಶ ಎಂದು ಸರ್ಕಾರ ಹೇಳಿಕೊಂಡಿದೆ. ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಈ ಸಮೀಕ್ಷೆಯಿಂದ ಹಿಂದುಳಿದ ಸಮುದಾಯಗಳ, ಅಲ್ಪಸಂಖ್ಯಾತರು ಹಾಗೂ ವಿವಿಧ ಸಮುದಾಯಗಳ ಸ್ಥಿತಿ ತಿಳಿದುಬರಲಿದೆ. ಆದರೆ ಹೊಸ ಜಾತಿಗಳನ್ನು ಸೃಷ್ಟಿಸಿದ್ದು, ಮತ್ತು ಕೆಲವು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿರುವ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಜಾತಿಗಣತಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪ್ರತಿಪಕ್ಷಗಳ ತೀವ್ರ ವಿರೋಧದ ಹೊರತಾಗಿಯೂ ಸರ್ಕಾರ ಜಾತಿಗಣತಿ ಆರಂಭಿಸಿದೆ. ಆದಾಗ್ಯೂ, ಬೆಂಗಳೂರಿನಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ.




