ಮೈಸೂರು: ಹೂವಿನ ಗಿಡಗಳ ಜೊತೆ ಗಾಂಜಾ ಗಿಡ ಬೆಳೆದ ಆರೋಪಿ ಅರೆಸ್ಟ್
ಹೂವಿನ ಗಿಡಗಳ ನಡುವೆ ಗಾಂಜಾ ಗಿಡಗಳನ್ನು ಬೆಳೆದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದರೆ, ಇತ್ತ ಬೆಂಗಳೂರು ಮತ್ತು ಚಿಕ್ಕಮಗಳೂರು ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರು, ಆಗಸ್ಟ್ 22: ಮನೆಯ ಆವರಣದಲ್ಲೇ ಗಾಂಜಾ (Gaanja/Cannabis) ಗಿಡ ಬೆಳೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮೈಸೂರು (Mysuru) ಜಿಲ್ಲೆಯ ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ. ವಿಶ್ವನಾಥ್ ಬಂಧಿತ ಆರೋಪಿಯಾಗಿದ್ದಾನೆ. ಮನೆ ಆವರಣದಲ್ಲಿದ್ದ ಹೂವಿನ ಗಿಡಗಳ ನಡುವೆ ಎರಡು ಗಾಂಜಾ ಗಿಡಗಳನ್ನು ಬೆಳೆಸಿದ್ದನು.
ಆರೋಪಿ ವಿಶ್ವನಾಥ್ ತನ್ನ ಮನೆಯ ಆವರಣದಲ್ಲಿ ಹೂವಿನ ಗಿಡಗಳನ್ನು ನೆಟ್ಟಿದ್ದಲ್ಲದೆ, ಇದರ ನಡುವೆ ಎರಡು ಗಾಂಜಾ ಗಿಡಗಳನ್ನು ಕೂಡ ಬೆಳೆಸಿದ್ದನು. ಈ ಗಿಡಗಳು ಸುಮಾರು 5 ರಿಂದ 6 ಅಡಿ ಎತ್ತರ ಬೆಳೆದಿದ್ದವು. ಮಾಹಿತಿ ತಿಳಿದ ಹುಣಸೂರು ಗ್ರಾಮಾಂತರ ಠಾಣಾ ಪೊಲೀಸರು, ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 6 ಕೆಜಿಯಷ್ಟಿದ್ದ ಎರಡು ಗಾಂಜಾ ಹಸಿ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಮೂವರ ಬಂಧನ
ಬೆಂಗಳೂರು: ಗಾಂಜಾ ಮಾರುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ನಗರದ ಮಹದೇವಪುರದ ಹೂಡಿ ಹೊಟೇಲ್ ಬಳಿ ನಡೆದಿದೆ. ಆರೋಪಿಗಳಾದ ಅರ್ಜುನ್ ಯಾದವ್, ಲಲಿತ ಮಹತೋ, ಮೊಹಮ್ಮದ್ ಎಂಬವರು ಹೊಟೇಲ್ ಬಳಿ ಗಾಂಜಾ ಮಾರಾಟಕ್ಕೆ ಮುಂದಾಗಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಗಾಂಜಾ ಮತ್ತಲ್ಲಿ ಯುವಕನ ದಾಂಧಲೆ: ಸಿನಿಮಿಯ ರೀತಿಯಲ್ಲಿ ಲಾಕ್ ಮಾಡಿದ ಮಂಗಳೂರು ಪೊಲೀಸ್; ವಿಡಿಯೋ ವೈರಲ್
ಅದರಂತೆ, ಮಾರಾಟ ಮಾಡಲು ಗಾಂಜಾ ಸಾಗಾಟ ಮಾಡುತ್ತಿದ್ದಾಗ ಮೂವರು ಆರೋಪಿಗಳನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಆರೋಪಿಗಳಿಂದ 15 ಕೆಜಿ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸ್ಕೂಟಿಯಲ್ಲಿ ಗಾಂಜಾ ಸಾಗಾಟ
ಚಿಕ್ಕಮಗಳೂರು: ತಾಲೂಕಿನ ಬಾಳೆಹಳ್ಳಿ ಬಳಿ ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೋಜ್ ಬಂಧಿತ ಆರೋಪಿಯಾಗಿದ್ದು, ಈತನಿಂದ 1 ಕೆಜಿ 175 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಸ್ಕೂಟಿಯನ್ನು ಜಪ್ತಿ ಮಾಡಲಾಗಿದೆ. ಬಾಳೆಹಳ್ಳಿಯಿಂದ ಚಿಕ್ಕಮಗಳೂರಿಗೆ ಗಾಂಜಾ ಸಾಗಿಸುತ್ತಿದ್ದ ಮನೋಜ್ ಅರೆಸ್ಟ್ ಆಗಿದ್ದು, ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ