ಎಲ್ಲೂ ಸಲ್ಲದ ಹತ್ತು ರೂಪಾಯಿ ನಾಣ್ಯ ಅರ್ಚಕರ ತಟ್ಟೆಗೆ ಬಿತ್ತು: ಮಂಡ್ಯದ ದೇವಸ್ಥಾನದಲ್ಲಿ ಪೇಚಿಗೆ ಸಿಲುಕಿದ ಅರ್ಚಕರು
ದೇವಾಲಯದ ಅರ್ಚಕರ ಬಳಿಯಲ್ಲಿ ಈಗ 5 ಸಾವಿರಕ್ಕೂ ಹೆಚ್ಚಿನ ಹತ್ತು ರೂಪಾಯಿಯ ನಾಣ್ಯಗಳು ಸಂಗ್ರಹವಾಗಿವೆ. ಹೀಗೆ ಸಂಗ್ರಹವಾಗಿರುವ ನಾಣ್ಯಗಳನ್ನ ಬ್ಯಾಂಕ್ನವರಿಗೆ ಕೊಡಲು ಹೋದರೆ ನಮ್ಮಲ್ಲೇ ಸಾಕಷ್ಟು ಸಂಗ್ರಹ ಇದೆ. ನಮಗೆ ಬೇಡ ಎಂಬಂತಹ ಉತ್ತರ ಬರುತ್ತಿದೆ.

ಮಂಡ್ಯ: ದೇಶದಲ್ಲಿ ಹತ್ತು ರೂಪಾಯಿ ನಾಣ್ಯ ಚಲಾವಣೆಯಲ್ಲಿದ್ದರೂ ಕಳೆದ ಹಲವು ದಿನಗಳಿಂದ ಹತ್ತು ರೂಪಾಯಿ ನಾಣ್ಯ ಚಲಾವಣೆಯ ಬಗೆಗೆ ಜನರು ನಿರಾಸಕ್ತಿ ತೋರಿಸುತ್ತಿದ್ದಾರೆ. ನಾಣ್ಯಗಳನ್ನ ಕಂಡರೆ ಸಾಕು ಇದು ಬೇಡ ಬೇರೆ ಕೊಡಿ ಎಂಬುವವರೇ ಹೆಚ್ಚು. ಈ ಪರಿಸ್ಥಿತಿ ಮುಂದುವರೆದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನ ಕೆರೆ ಗ್ರಾಮ ದೇವತೆಯ ದೇವಾಲಯ ಒಂದರಲ್ಲಿ ಹತ್ತು ರೂಪಾಯಿ ನಾಣ್ಯ ಕಂಡರೆ ಸಾಕು ಅಲ್ಲಿನ ಅರ್ಚಕರು ಬೆಚ್ಚಿ ಬೀಳಲಾರಂಭಿಸಿದ್ದಾರೆ.
ದೇಶದಲ್ಲಿ ಹತ್ತು ರೂಪಾಯಿ ನಾಣ್ಯದ ಚಲಾವಣೆಯ ಬಗೆಗೆ ಆಗಾಗ ಗೊಂದಲದ ಪರಿಸ್ಥಿತಿಗಳು ನಿರ್ಮಾಣವಾಗುತ್ತಲೇ ಇವೆ. ಈ ಸಂಬಂಧ ಕೇಂದ್ರ ಸರ್ಕಾರ ಹತ್ತು ರೂಪಾಯಿ ನಾಣ್ಯಗಳ ಚಲಾವಣೆಯನ್ನ ಅಧಿಕೃತವಾಗಿ ನಿಷೇಧಿಸಿಲ್ಲವಾದರೂ ಜನರು ಮಾತ್ರ ನಾಣ್ಯಗಳನ್ನ ಚಲಾವಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡರಸಿನ ಕೆರೆ ಗ್ರಾಮದಲ್ಲಿನ ಏಳೂರಮ್ಮ ದೇವಾಲಯದಲ್ಲೂ ಇಂತಹ ಸಮಸ್ಯೆ ಎದುರಾಗಿದ್ದು, ಜನ ಇತ್ತೀಚಿನ ದಿನಗಳಲ್ಲಿ ದೇವಾಲಯಕ್ಕೆ ಬಂದು ಮಂಗಳಾರತಿಗೆ ಹಣ ಹಾಕುವಾಗ ಹತ್ತು ರೂಪಾಯಿ ನಾಣ್ಯಗಳನ್ನ ಮಾತ್ರ ಹಾಕುತ್ತಿದ್ದಾರಂತೆ.
ಇದರಿಂದಾಗಿ ದೇವಾಲಯದ ಅರ್ಚಕರ ಬಳಿಯಲ್ಲಿ ಈಗ 5 ಸಾವಿರಕ್ಕೂ ಹೆಚ್ಚಿನ ಪ್ರಮಾಣದ ಹತ್ತು ರೂಪಾಯಿ ನಾಣ್ಯಗಳು ಸಂಗ್ರಹವಾಗಿವೆ. ಹೀಗೆ ಸಂಗ್ರಹವಾಗಿರುವ ನಾಣ್ಯಗಳನ್ನ ಬ್ಯಾಂಕ್ನವರಿಗೆ ಕೊಡಲು ಹೋದರೆ ನಮ್ಮಲ್ಲೇ ಸಾಕಷ್ಟು ಸಂಗ್ರಹ ಇದೆ. ನಮಗೆ ಬೇಡ ಎಂಬಂತಹ ಉತ್ತರ ಬರುತ್ತಿದೆ. ಈ ಸಂಬಂಧ ಸರ್ಕಾರ ಏನಾದರೂ ನಿರ್ಧಾರ ಕೈಗೊಳ್ಳಬೇಕು ಎಂದು ಏಳೂರಮ್ಮ ದೇವಾಲಯದ ಅರ್ಚಕರಾದ ಪ್ರಸನ್ನ ಕುಮಾರ್ ಹೇಳಿದ್ದಾರೆ.

ಅರ್ಚಕರಾದ ಪ್ರಸನ್ನ ಕುಮಾರ್

ದೊಡ್ಡರಸಿನ ಕೆರೆ ಗ್ರಾಮದಲ್ಲಿನ ಏಳೂರಮ್ಮ ದೇವಾಲಯ
ದೊಡ್ಡರಸಿನ ಕೆರೆ ಗ್ರಾಮದಲ್ಲಿರುವ ಏಳೂರಮ್ಮನ ದೇವಾಲಯ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ದೊಡ್ಡರಸಿನ ಕೆರೆ ಗ್ರಾಮ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹೀಗೆ ಬರುವ ಭಕ್ತರು ಇತ್ತೀಚಿನ ದಿನಗಳಲ್ಲಿ ಮಂಗಳಾರತಿಗೆ ಹಣ ಹಾಕುವ ಸಂದರ್ಭದಲ್ಲಿ 10 ರೂಪಾಯಿ ನಾಣ್ಯವನ್ನೇ ಹಾಕಲಾರಂಭಿಸಿದ್ದಾರೆ. ಇದು ಅರ್ಚಕರಿಗೆ ಕಿರಿಕಿರಿ ಉಂಟು ಮಾಡಿದ್ದರೂ ಭಕ್ತರಿಗೆ ಹತ್ತು ರೂಪಾಯಿ ನಾಣ್ಯವನ್ನ ಹಾಕಬೇಡಿ ಎಂದು ಹೇಳಲಾಗುತ್ತಿಲ್ಲ.

ದೊಡ್ಡರಸಿನ ಕೆರೆ ಗ್ರಾಮದ ದೇವಾಲಯದ ಚಿತ್ರಣ
ಇತ್ತೀಚಿನ ದಿನಗಳಲ್ಲಿ ಜನ ಹತ್ತು ರೂಪಾಯಿ ನಾಣ್ಯವನ್ನ ಕೊಡುತ್ತಾರೆ. ನಾಣ್ಯಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಏನೂ ಮಾಡಲಾಗದಂತಹ ಸ್ಥಿತಿಯಲ್ಲಿದ್ದಾರೆ. ನಾವು ಕೊಡಲು ಹೋದರೆ ಬೇಡ ಎನ್ನುತ್ತಾರೆ. ಇದು ಇವರೊಬ್ಬರ ಸಮಸ್ಯೆ ಅಲ್ಲ ಎಲ್ಲರ ಸಮಸ್ಯೆಯಾಗಿದೆ ಎಂದು ಬೆಂಗಳೂರಿನಿಂದ ಬಂದಿದ್ದ ಭಕ್ತರಾದ ಜಯರಾಮು ಹೇಳಿದ್ದಾರೆ.

ಮಂಗಳಾರತಿ ತಟ್ಟೆಯಲ್ಲಿ 10 ರೂಪಾಯಿ ನಾಣ್ಯಗಳು
ಒಟ್ಟಾರೆ ಹತ್ತು ರೂಪಾಯಿ ನಾಣ್ಯಗಳ ಚಲಾವಣೆಯ ಬಗೆಗೆ ಜನರಲ್ಲಿರುವ ಆತಂಕವೋ ಅಥವಾ ತಪ್ಪು ತಿಳುವಳಿಕೆಯೋ ಆದರೆ ತಮ್ಮಲ್ಲಿರುವ ನಾಣ್ಯಗಳನ್ನ ಬೇರೆಡೆಗೆ ವರ್ಗಾಯಿಸಲು ಮುಂದಾಗುತ್ತಿದ್ದಾರೆಯೇ ಹೊರತು ತಾವು ಮಾತ್ರ ನಾಣ್ಯಗಳನ್ನ ಪಡೆದುಕೊಳ್ಳಲು ಮುಂದೆಬರುತ್ತಿಲ್ಲ ಎನ್ನುವುದು ಸದ್ಯದ ನಿಜಾಂಶವಾಗಿದೆ.
ಇದನ್ನೂ ಓದಿ: ಕೇವಲ 10 ರೂಪಾಯಿಯಲ್ಲಿ ಬಡವರಿಗೆ ಚಿಕಿತ್ಸೆ ನೀಡುವ ಡಾಕ್ಟರ್ ನೂರಿ ಪರ್ವೀನಾ
Published On - 1:00 pm, Fri, 12 March 21



