ಕೊರೊನಾ ನಿಯಮ ಉಲ್ಲಂಘನೆ.. ಬೆಂಗಳೂರಿನ JW ಮ್ಯಾರಿಯೆಟ್ ಸೇರಿ 3 ಹೋಟೆಲ್ಗಳ ವಿರುದ್ಧ FIR
ಹೋಟೆಲ್ಗಳಲ್ಲಿ ಕೊರೊನಾ ನಿಯಮ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ JW ಮ್ಯಾರಿಯೆಟ್, ಇಂಡಿಗೋ ಎಕ್ಸ್ಪಿ ಹೆಚ್ಎಸ್ಆರ್, ಕೋನ್ರಾಡ್ ಸೇರಿ 3 ಪ್ರತಿಷ್ಠಿತ ಹೋಟೆಲ್ಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಅಬ್ಬರ ಹೆಚ್ಚಾಗುವ ಸಾಧ್ಯತೆ ಕಂಡು ಬಂದಿದೆ. ಬೆಂಗಳೂರಿಗೆ ಕೊರೊನಾ 2ನೇ ಅಲೆಯ ಭೀತಿ ಹೆಚ್ಚಾಗಿದ್ದು ಈಗಾಗಲೇ ಹೋಟೆಲ್, ಪಬ್ ಅಂಡ್ ಬಾರ್, ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ಕೊವಿಡ್ ನಿಯಮ ಪಾಲಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ.ಕೆ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಇದರ ನಡುವೆ ನಗರದ 3 ಪ್ರತಿಷ್ಠಿತ ಹೋಟೆಲ್ಗಳು ಈ ನಿಯಮವನ್ನು ಉಲ್ಲಂಘಿಸಿದ್ದು ಹೋಟೆಲ್ಗಳ ವಿರುದ್ಧ FIR ದಾಖಲಾಗಿದೆ.
ಹೋಟೆಲ್ಗಳಲ್ಲಿ ಕೊರೊನಾ ನಿಯಮ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ JW ಮ್ಯಾರಿಯೆಟ್, ಇಂಡಿಗೋ ಎಕ್ಸ್ಪಿ ಹೆಚ್ಎಸ್ಆರ್, ಕೋನ್ರಾಡ್ ಸೇರಿ 3 ಪ್ರತಿಷ್ಠಿತ ಹೋಟೆಲ್ಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಕೊವಿಡ್ ಹಿನ್ನೆಲೆಯಲ್ಲಿ ಡಿಜೆ ಪಾರ್ಟಿಗೆ ಸೀಮಿತ ಜನರಿಗೆ ಮಾತ್ರ ಅವಕಾಶ ನೀಡುವಂತೆ ಸೂಚನೆ ಇದೆ. ಆದರೆ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚು ಜನರಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಹೋಟೆಲ್ಗಳ ಮೇಲೆ ಪ್ರಕರಣ ದಾಖಲಾಗಿದೆ. ಹಾಗೂ ರಾತ್ರಿ 3 ಗಂಟೆವರೆಗೂ ಡಿಜೆ ಪಾರ್ಟಿ ಆಯೋಜನೆ ಆರೋಪ ಕೇಳಿ ಬಂದಿದೆ.
ಅವಧಿ ಮೀರಿ ತಡರಾತ್ರಿವರೆಗೆ ಡಿಜೆ ಮ್ಯೂಸಿಕ್ ಶೋ ಮಾಡುತ್ತಿದ್ದ ದೂರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ ಗಸ್ತಿನಲ್ಲಿದ್ದ ಇನ್ಸ್ಪೆಕ್ಟರ್ ಬಿ ಮಾರುತಿ ಅವರು ಭೇಟಿ ನೀಡಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಾರುತಿ ಮತ್ತು ಸಿಬ್ಬಂದಿ ನೆಲ ಮಹಡಿ ಪ್ರವೇಶಿಸಿ ನೋಡಿದಾಗ ಅಲ್ಲಿ ಪಾರ್ಟಿ ನಡೆಯುತ್ತಿರುವುದು ಕಾಣಿಸಿದೆ. ಕೂಡಲೇ ಡಿಜೆ ಆಯೋಜಕ ಎಸ್.ಫರ್ನಾಂಡಿಸ್, ಎಂಡಿ ಮನೋಜ್ನನ್ನು ಪೊಲೀಸರು ವಶಕ್ಕೆ ಪಡೆದು ಪರವಾನಗಿ ರದ್ದು ಮಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ ಕೊರೊನಾ 2ನೇ ಅಲೆಯ ಭೀತಿ.. ರಾತ್ರಿ 11 ಗಂಟೆ ನಂತರ ಹೆಚ್ಚು ಜನ ಸೇರೋಹಾಗಿಲ್ಲ: ಸಚಿವ ಸುಧಾಕರ್