ಕರ್ನಾಟಕಕ್ಕೆ ಕೊರೊನಾ 2ನೇ ಅಲೆಯ ಭೀತಿ.. ರಾತ್ರಿ 11 ಗಂಟೆ ನಂತರ ಹೆಚ್ಚು ಜನ ಸೇರೋಹಾಗಿಲ್ಲ: ಸಚಿವ ಸುಧಾಕರ್

ಕರ್ನಾಟಕಕ್ಕೆ ಕೊರೊನಾ 2ನೇ ಅಲೆಯ ಭೀತಿ ಹೆಚ್ಚಾಗಿದ್ದು ಹೋಟೆಲ್, ಪಬ್ ಅಂಡ್ ಬಾರ್, ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯ ಕೊವಿಡ್ ನಿಯಮ ಪಾಲಿಸಲು ಆರೋಗ್ಯ & ಕುಟುಂಬ ಕಲ್ಯಾಣ ಖಾತೆ ಸಚಿವ ಸುಧಾಕರ್ ಸೂಚಿಸಿದ್ದಾರೆ.

ಕರ್ನಾಟಕಕ್ಕೆ ಕೊರೊನಾ 2ನೇ ಅಲೆಯ ಭೀತಿ.. ರಾತ್ರಿ 11 ಗಂಟೆ ನಂತರ ಹೆಚ್ಚು ಜನ ಸೇರೋಹಾಗಿಲ್ಲ: ಸಚಿವ ಸುಧಾಕರ್
ಡಾ. ಕೆ.ಸುಧಾಕರ್​
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Mar 12, 2021 | 11:34 AM

ಬೆಂಗಳೂರು: ಕೊರೊನಾ ರಣಕೇಕೆಯಿಂದ ಒಂದು ವರ್ಷ ಜನಜೀವನವೇ ಅಲ್ಲೋಲ ಕಲ್ಲೋಲವಾಯ್ತು. ಬ್ರಿಟನ್ ವೈರಸ್.. ರೂಪಾಂತರಿ.. ಎರಡನೇ ಅಲೆ ಅನ್ನೋ ಆತಂಕ, ಈಗಲೂ ಜನರ ಬೆನ್ನ ಹಿಂದೆಯೇ ಇದೆ. ಇದೀಗ ಕೊರೊನಾ ಆರ್ಭಟಿಸುತ್ತಿರುವ 10 ಜಿಲ್ಲೆಗಳ ಪೈಕಿ ಬೆಂಗಳೂರು 5ನೇ ಸ್ಥಾನದಲ್ಲಿದೆ ಅನ್ನೋದು ಮತ್ತಷ್ಟು ಭಯ ಹುಟ್ಟಿಸಿದೆ. ಕರ್ನಾಟಕಕ್ಕೆ ಕೊರೊನಾ 2ನೇ ಅಲೆಯ ಭೀತಿ ಹೆಚ್ಚಾಗಿದ್ದು ಹೋಟೆಲ್, ಪಬ್ ಅಂಡ್ ಬಾರ್, ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯ ಕೊವಿಡ್ ನಿಯಮ ಪಾಲಿಸಲು ಆರೋಗ್ಯ & ಕುಟುಂಬ ಕಲ್ಯಾಣ ಖಾತೆ ಸಚಿವ ಸುಧಾಕರ್ ಸೂಚಿಸಿದ್ದಾರೆ. ರಾತ್ರಿ 11 ಗಂಟೆಯ ನಂತರ ಹೆಚ್ಚು ಜನರು ಸೇರುವ ಹಾಗಿಲ್ಲ. ಲೇಟ್ ನೈಟ್ ಪಾರ್ಟಿಗಳನ್ನು ನಿಲ್ಲಿಸುವಂತೆ ಸೂಚಿಸಿದ್ದು ನಿಯಮ ಉಲ್ಲಂಘಿಸಿದ್ರೆ ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಅಟ್ಟಹಾಸದಲ್ಲಿ ಬೆಂಗಳೂರಿಗೆ 5ನೇ ಸ್ಥಾನ ಡೆಡ್ಲಿ ವೈರಸ್ ಕೊರೊನಾ ಮಹಾಮಾರಿ ಸಿಲಿಕಾನ್ ಸಿಟಿ ಬೆಂಗಳೂರನ್ನ ಬೆನ್ನುಬಿಡದೇ ಕಾಡುತ್ತಿದೆ. ಬೆಂಗಳೂರಲ್ಲಿ ಸದ್ಯ 5,526 ಕೊರೊನಾ ಸಕ್ರಿಯ ಕೇಸ್​ಗಳಿದ್ದು, ಕೊವಿಡ್ ಹೆಚ್ಚಿರುವ ದೇಶದ 10 ಜಿಲ್ಲೆಗಳ ಪೈಕಿ ಬೆಂಗಳೂರು ಸಿಟಿ 5ನೇ ಸ್ಥಾನದಲ್ಲಿದೆ. ಹೀಗಂತ ದೆಹಲಿಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಡಾ.ರಾಜೇಶ್ ಭೂಷಣ್ ತಿಳಿಸಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಟಾಪ್ 10 ಜಿಲ್ಲೆಗಳ ಪೈಕಿ 8 ಜಿಲ್ಲೆಗಳು ಮಹಾರಾಷ್ಟ್ರದಲ್ಲಿವೆ, ಉಳಿದಂತೆ ಕೇರಳದ ಎರ್ನಾಕುಲಂ ಟಾಪ್ 10 ಪಟ್ಟಿಯಲ್ಲಿದೆ. ಎರ್ನಾಕುಲಂ ಜಿಲ್ಲೆಯಲ್ಲಿ 5,430 ಕೊರೊನಾ ಸಕ್ರಿಯ ಕೇಸ್ ಇದ್ರೆ, ಮಹಾರಾಷ್ಟ್ರದಲ್ಲಿ ಸಕ್ರಿಯ ಕೊರೊನಾ ಕೇಸ್ 1 ಲಕ್ಷ ದಾಟಿದೆ.

ಕರ್ನಾಟಕಕ್ಕೆ ಎಚ್ಚರಿಕೆಯ ಗಂಟೆ ಎಂದ ಹೆಲ್ತ್ ಮಿನಿಸ್ಟರ್ ದಕ್ಷಿಣ ಆಫ್ರಿಕಾ ವೈರಸ್ ಆತಂಕಕಾರಿಯಲ್ಲದಿದ್ರೂ ರಾಜ್ಯದಲ್ಲಿ ಭಯ ಆವರಿಸಿದೆ. ಯಾಕಂದ್ರೆ, ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಮಹಾಮಾರಿಯ ರಣಕೇಕೆ ಹೆಚ್ಚಾಗಿದೆ. ಪ್ರತಿದಿನ 13 ಸಾವಿರ ಪಾಸಿಟಿವ್ ಕೇಸ್ ಬರ್ತಿದೆ. ಹೀಗಾಗಿ ನಾಗ್ಬುರದಲ್ಲಿ ಮಾರ್ಚ್ 15ರಿಂದ 21ರವರೆಗೆ ಲಾಕ್‌ಡೌನ್‌ ಘೋಷಿಸಲಾಗಿದೆ. ಇನ್ನೂ ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಹೆಚ್ಚಾಗ್ತಿರೋದಕ್ಕೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಹೆಚ್ಚಾಗ್ತಿರೋ ಸೋಂಕು ನನ್ನನ್ನ ಚಿಂತೆಗೀಡುಮಾಡಿದೆ. ಇದು ಎಚ್ಚರಿಕೆ ಗಂಟೆ. ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸ್ಬೇಕು ಎಂದು ಟ್ವೀಟ್ ಮೂಲಕ ಕೆಲ ಸಲಹೆಗಳನ್ನ ನೀಡಿದ್ದಾರೆ .

ಇದು ಎಚ್ಚರಿಕೆ ಗಂಟೆ.. ಎಚ್ಚರವಾಗಿರಿ ಹಬ್ಬ-ಹರಿದಿನಗಳು, ಸಭೆ-ಸಮಾರಂಭಗಳು ಏನೇ ಇದ್ದರೂ ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ತಪ್ಪದೇ ಪಾಲಿಸಿ. ಸಾಧ್ಯವಾದಷ್ಟು ಜನಸಂದಣಿಯಿಂದ ದೂರವಿರಿ. 60 ವರ್ಷ ಮೇಲ್ಪಟ್ಟವರು, 45 ವರ್ಷಕ್ಕಿಂತ ಮೇಲ್ಪಟ್ಟವರು, ಅಸ್ವಸ್ಥತೆ ಹೊಂದಿರುವವರು ತಪ್ಪದೇ ಬೇಗ ಲಸಿಕೆ ಪಡೆಯಿರಿ. ಮನೆ, ಬಂಧು-ಬಳಗದಲ್ಲಿ, ಸ್ನೇಹಿತರಲ್ಲಿ, ನೆರೆಹೊರೆಯಲ್ಲಿ ಕೊರೊನಾ ಲಸಿಕೆಯನ್ನು ಪಡೆಯಲು ಅರ್ಹ ವ್ಯಕ್ತಿಗಳಿದ್ದರೆ, ಲಸಿಕೆ ಪಡೆಯಲು ಅರಿವು ಮೂಡಿಸಿ, ಸ್ಫೂರ್ತಿ ತುಂಬೋಣ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ಟೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಿಯಮ ಉಲ್ಲಂಘಿಸಿ ತರಗತಿ ಪುನರಾರಂಭಿಸಿರುವ ಶಾಲೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು: ಡಾ.ಕೆ.ಸುಧಾಕರ್ ಟ್ವೀಟ್