ಕೊವಿಡ್ ಸೋಂಕಿತರ ನೆರವಿಗೆ ನಿಂತ ಮಂಡ್ಯದ ಪುರಸಭೆ ಸದಸ್ಯೆ; ಸಹಾಯ ಹಸ್ತಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
ಕಳೆದ ವರ್ಷ ಲಾಕ್ಡೌನ್ ಆಗಿದ್ದ ಸಂದರ್ಭದಲ್ಲಿ, ಪ್ರಿಯಾಂಕ ಪ್ರತೀ ಭಾನುವಾರದಂದು 250 ಕೆಜಿ ಕೋಳಿ ತಂದು ಚಿಕನ್ ಚಾಪ್ಸ್, ಸಾಂಬಾರ್, ಮುದ್ದೆ ಸೇರಿದಂತೆ ವಿವಿಧ ರೀತಿಯ ಅಡುಗೆ ತಯಾರಿಸಿ ನೀಡಿದ್ದರು. ಇದೀಗ ಮತ್ತೊಮ್ಮೆ ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ.
ಮಂಡ್ಯ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವು- ನೋವಿನ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ತರಲು ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಆದರೆ ಲಾಕ್ಡೌನ್ ನಿಂದಾಗಿ ಸಾಕಷ್ಟು ಜನರು ತೊಂದರೆಗೆ ಸಿಲುಕಿದ್ದಾರೆ. ಹೀಗಿರುವಾಗ ಕೆಲವು ಸಂಘ-ಸಂಸ್ಥೆಗಳು, ನಟ-ನಟಿಯರು ಸಹಾಯ ಹಸ್ತ ನೀಡಿದ್ದಾರೆ. ಅಂತವರ ಸಾಲಿಗೆ ಮಂಡ್ಯದ ದಂಪತಿಗಳಿಬ್ಬರೂ ಸೇರಿದ್ದು, ಕೊರೋನಾದಿಂದಾಗಿ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುತ್ತಿರುವುದರ ಜತೆಗೆ ಕೊವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ನೂರಾರು ಜನರಿಗೆ ಊಟ ನೀಡಿ ನೆರವು ನೀಡುತ್ತಿದ್ದಾರೆ.
ಮಂಡ್ಯದಲ್ಲೂ ಸಾಕಷ್ಟು ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅತೀ ಹೆಚ್ಚು ಕೊರೊನಾ ಸಕ್ರಿಯ ಪಟ್ಟಿಯಲ್ಲಿ ಮಂಡ್ಯದ ಹೆಸರೂ ಇದೆ. ಹೀಗಾಗಿಯೇ ಇಲ್ಲಿ ನೊಂದ ಜನರು ಹೆಚ್ಚಾಗಿ ಇದ್ದಾರೆ. ಇವರ ನೆರವಿಗೆ ಸದ್ಯ ಮಂಡ್ಯ ಜಿಲ್ಲೆ ಮದ್ದೂರು ಪುರಸಭೆ ಸದಸ್ಯೆ ಪ್ರಿಯಾಂಕ ನಿಂತಿದ್ದಾರೆ. ಮದ್ದೂರು ಪಟ್ಟಣದ ಕೆ. ಹೆಚ್ ನಗರದ ನಿವಾಸಿಯಾಗಿರುವ ಪ್ರಿಯಾಂಕ ಮದ್ದೂರು ಪುರಸಭೆಯ 4 ನೇ ವಾರ್ಡ್ನ ಸದಸ್ಯೆ ಆಗಿದ್ದು, ಜನರು ಕಷ್ಟಪಡುತ್ತಿದ್ದನ್ನ ಗಮನಿಸಿ ತಾವು ಏನಾದರೂ ಮಾಡಬೇಕು ಎಂದು ನಿರ್ಧರಿಸಿಕೊಂಡು ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.
ತಾಲೂಕಿನಲ್ಲಿ ಈಗಾಗಲೇ 20 ಕ್ಕೂ ಹೆಚ್ಚು ಜನರ ಅಂತ್ಯಸಂಸ್ಕಾರ ನೆರವೇರಿಸಿರುವ ಪ್ರಿಯಾಂಕ, ಯಾವುದೇ ಜನಾಂಗದವರು ಮರಣ ಹೊಂದಿದರೂ ಕೊವಿಡ್ ನಿಯಮಗಳಿಗೆ ಅನುಸಾರವಾಗಿ, ಆಯಾ ಜನಾಂಗದ ನಂಬಿಕೆಗೆ ಅನುಗುಣವಾಗಿ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲ ಕೊವಿಡ್ ಸೋಂಕಿಗೆ ತುತ್ತಾಗಿ ವಿವಿಧ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಅಡುಗೆ ತಯಾರಿಸಿ ಊಟವನ್ನ ನೀಡುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿನ ಬಹುತೇಕ ಜನರು ನಾನ್ ವೆಜ್ ಪ್ರಿಯರಾಗಿದ್ದು, ಇಂತಹ ಸಮಯದಲ್ಲಿ ಅವರಿಗೆ ನಾನ್ ವೆಜ್ ಆಹಾರದ ಅಗತ್ಯವಿದೆ ಎಂಬುದನ್ನ ಅರಿತು ವಾರಕ್ಕೊಂದು ದಿನ ನೂರಾರು ಜನರಿಗೆ ಚಿಕನ್ ಬಿರಿಯಾನಿ ತಯಾರಿಸಿ ತಾವೇ ಕುದ್ದು ಹೋಗಿ ಆಹಾರ ನೀಡಿ ಬರುತ್ತಿದ್ದಾರೆ.
ಕಳೆದ ವರ್ಷ ಲಾಕ್ಡೌನ್ ಆಗಿದ್ದ ಸಂದರ್ಭದಲ್ಲಿ, ಪ್ರಿಯಾಂಕ ಪ್ರತೀ ಭಾನುವಾರದಂದು 250 ಕೆಜಿ ಕೋಳಿ ತಂದು ಚಿಕನ್ ಚಾಪ್ಸ್, ಸಾಂಬಾರ್, ಮುದ್ದೆ ಸೇರಿದಂತೆ ವಿವಿಧ ರೀತಿಯ ಅಡುಗೆ ತಯಾರಿಸಿ ನೀಡಿದ್ದರು. ಇದೀಗ ಮತ್ತೊಮ್ಮೆ ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ. ಅಷ್ಟೇ ಅಲ್ಲದೆ ಮದ್ದೂರು ಪಟ್ಟಣದ ತಮ್ಮ ವಾರ್ಡ್ ಸೇರಿದಂತೆ ಬೇರೆ ಬೇರೆ ವಾರ್ಡ್ಗಳಲ್ಲಿ ಸ್ಯಾನಿಟೈಸ್ ಮಾಡುವುದು, ಜನರಿಗೆ ಮಾಸ್ಕ್ಗಳನ್ನ ನೀಡಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವನ್ನೂ ಮಾಡಿದ್ದಾರೆ. ಇವರಿಗೆ ಪತಿ ಅಪ್ಪುಗೌಡ ಸಹ ಸಾಥ್ ನೀಡಿದ್ದು, ಪತ್ನಿಯ ಎಲ್ಲಾ ಕೆಲಸದಲ್ಲೂ ಜತೆ ನಿಂತು ಕೊವಿಡ್ ಸಂದರ್ಭದಲ್ಲಿ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದೀವಿ ಎಂದು ತಿಳಿಸಿದ್ದಾರೆ.
ಕೊರೊನಾ ವಿರುದ್ಧ ಸಾಕಷ್ಟು ಜನರು ತಮ್ಮದೇ ಆದ ರೀತಿಯಲ್ಲಿ ಹೋರಾಟ ಮಾಡುತ್ತಿದ್ದು, ಮದ್ದೂರು ಪುರಸಭೆ ಸದಸ್ಯೆ ಆಗಿರುವ ಪ್ರಿಯಾಂಕ ಅವರು ತಮ್ಮ ವಾರ್ಡ್ನಲ್ಲಿ ಜನರಿಗೆ ಅರಿವು ಮೂಡಿಸುವುದರ ಜತೆಗೆ ಸೋಂಕಿತರು ಮೃತಪಟ್ಟರೆ ಅಂತ್ಯಸಂಸ್ಕಾರ ನೆರವೇರಿಸುವ ಕಾಯಕ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಇದನ್ನೂ ಓದಿ:
ಕೊರೊನಾ ವೇಳೆ ಮಕ್ಕಳಿಗೆ ಶಿಕ್ಷಣ ನೀಡಬೇಕು; ರಾಜ್ಯ ಸರ್ಕಾರಕ್ಕೆ ಬೇಡಿಕೆಯಿಟ್ಟ ರುಪ್ಸಾ
ಕೊರೊನಾದಿಂದ ಸತ್ತ ತನ್ನ ಹೆತ್ತವರ ಶವ ಕೊಳೆಯುತ್ತಿರುವುದನ್ನು ಅಸಹಾಯಕನಾಗಿ ನಿಂತು ನೋಡಿದ್ದಾರೆ ಈ ಪುತ್ರ…