ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್: ಕಾಂಗ್ರೆಸ್ ವಿರುದ್ಧ ಜೆಡಿಎಸ್ಗೆ ಸಿಕ್ತು ಹೊಸ ಅಸ್ತ್ರ
ಮಂಡ್ಯದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವ ಸಂಬಂಧ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ರೈತರಿಗೆ ಜೆಡಿಎಸ್ ನಾಯಕ, ಕೇಂದ್ರ ಸಚಿವ ಕುಮಾರಸ್ವಾಮಿ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ವಿರುದ್ಧ ರಣತಂತ್ರ ರೂಪಿಸುವ ಲೆಕ್ಕಾಚಾರದಲ್ಲಿ ದಳಪತಿಗಳಿದ್ದರೆ, ಅತ್ತ ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿರುವ ಕಾಂಗ್ರೆಸ್ ಅಧಿಕಾರಿಗಳ ಸಭೆ ಕರೆದಿದೆ. ಟ್ರಯಲ್ ಬ್ಲಾಸ್ಟ್ ಮುಂದೂಡುವ ಯೋಚನೆ ಮಾಡುತ್ತಿದೆ.
ಮಂಡ್ಯ, ಜುಲೈ 6: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡುತ್ತಿರುವುದು ಕಾಂಗ್ರೆಸ್ ವಿರುದ್ದ ಜೆಡಿಎಸ್ಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಈ ವಿಚಾರವನ್ನೇ ಮುಂದಿಟ್ಟು ಕೊಂಡು ರಾಜ್ಯ ಸರ್ಕಾರ ವಿರುದ್ಧ ಟೀಕೆಗೆ ದಳಪತಿಗಳು ರಣತಂತ್ರ ಹೂಡಿದ್ದಾರೆ. ಸರ್ಕಾರದ ವಿರುದ್ದ ಸಿಡಿದೆದ್ದಿರುವ ಅನ್ನದಾತರ ಹೋರಾಟಕ್ಕೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ. ಹೋರಾಟಗಾರರನ್ನು ಭೇಟಿ ಮಾಡಿ ಬೆಂಬಲ ನೀಡಿದ್ದಾರೆ.
ಟ್ರಯಲ್ ಬ್ಲಾಸ್ಟ್ಗೆ ನನ್ನ ವಿರೋಧವಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ ರೈತರ ವಿಶ್ವಾಸ ಗಿಟ್ಟಿಸಿಕೊಳ್ಳುವ ಜೊತೆಗೆ ‘ಕೈ’ ಸರ್ಕಾರ ವಿರುದ್ದ ಹೋರಾಟಕ್ಕೆ ತಂತ್ರ ಹೂಡಿದ್ದಾರೆ.
ಕೆಆರ್‌ಎಸ್ ಡ್ಯಾಮ್ ಜೊತೆ ಮಂಡ್ಯದ ಜನ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇದನ್ನು ಬಳಸಿಕೊಂಡು ಜನರ ಪರವಾಗಿ ನಿಲ್ಲುವ ಮೂಲಕ ಕಾಂಗ್ರೆಸ್ಗೆ ಸೆಡ್ಡು ಹೊಡೆಯುವ ತಂತ್ರ ಕುಮಾರಸ್ವಾಮಿಯವರದ್ದು ಎನ್ನಲಾಗಿದೆ.
ಮತ್ತೊಂದೆಡೆ, ರೈತರಿಗೆ ದಳಪತಿ ಬೆಂಬಲ ಸಿಗುತ್ತಿದ್ದಂತೆಯೇ ಕಾಂಗ್ರೆಸ್ ಕೂಡ ಎಚ್ಚೆತ್ತುಕೊಂಡಿದೆ. ಇಂದು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ಕರೆಯಲಾಗಿದೆ. ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗಿದ್ದು, ತಾತ್ಕಾಲಿಕವಾಗಿ ಟ್ರಯಲ್ ಬ್ಲಾಸ್ಟ್ ಮುಂದೂಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಚಲುವರಾಯಸ್ವಾಮಿ ಸಭೆಯಲ್ಲಿ ಜಿಲ್ಲೆಯ ಶಾಸಕರು, ಡಿಸಿ, ಎಸ್ಪಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಭಾಗಿಯಾಗುತ್ತಿದ್ದಾರೆ. ಹೀಗಾಗಿ ಈ ಹೈವೋಲ್ಟೇಜ್ ಸಭೆ ಮೇಲೆ ರೈತರು ಚಿತ್ತ ನೆಟ್ಟಿದ್ದಾರೆ.
ಕೆಆರ್‌ಎಸ್ ಜಲಾಶಯಕ್ಕೆ ಅಪಾಯ ಎದುರಾಗುತ್ತದೆ ಎಂದು ಬೇಬಿ ಬೆಟ್ಟದಲ್ಲಿ ಗಣಿಗಾರಿಯನ್ನು ಈ ಹಿಂದೆ ಹೈಕೋರ್ಟ್ ಸೂಚನೆ ಮೇರೆಗೆ ಸ್ಥಗಿತ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ವಿವಾದಿತ ಸ್ಥಳದಲ್ಲಿ ಗಣಿಗಾರಿಕೆ ನಡೆಯುತ್ತಿಲ್ಲ. ಈ ಮಧ್ಯೆ ಕೆಲ ಗಣಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಟ್ರಯಲ್ ಬ್ಲಾಸ್ಟ್ ನಡೆಸಿ, ಜಲಾಶಯಕ್ಕೆ ಅಪಾಯ ಎದುರಾಗುತ್ತದೆಯೇ ಅಥವಾ ಇಲ್ಲವೇ, ಸಾಧಕ ಬಾಧಕಗಳ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ಮಂಡ್ಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಾಕಷ್ಟು ವಿರೋಧದ ನಡುವೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ.
ಇದನ್ನೂ ಓದಿ: ವಿರೋಧದ ನಡುವೆಯೂ ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ಗೆ ಮಂಡ್ಯ ಜಿಲ್ಲಾಡಳಿತ ಸಿದ್ಧ; ಏನೆಲ್ಲ ತೊಂದರೆಯಾಗಲಿದೆ ನೋಡಿ
ಸದ್ಯ ಈ ವಿದ್ಯಮಾನ ರಾಜಕೀಯ ಆಯಾಮಕ್ಕೆ ಹೊರಳಿದ್ದು, ಇದರ ಲಾಭ ಪಡೆಯಲು ಜೆಡಿಎಸ್ ಮುಂದಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಕೂಡ ಎಚ್ಚೆತ್ತುಕೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ