ಸುಮಲತಾ ಬಳಸುತ್ತಿದ್ದ ಕಾರು ನಿರಾಕರಿಸಿದರೇ ಕುಮಾರಸ್ವಾಮಿ? ಚಲುವರಾಯಸ್ವಾಮಿ ಹೊಸ ಆರೋಪ
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಗೆ ರಾಜ್ಯ ಸರ್ಕಾರ ಕಾರು ನೀಡದ ವಿಚಾರಕ್ಕೆ ಇದೀಗ ಟ್ವಿಸ್ಟ್ ದೊರೆತಿದೆ. ಈ ವಿಚಾರವಾಗಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದು, ಸುಮಲತಾ ಉಪಯೋಗಿಸುತ್ತಿದ್ದ ಕಾರನ್ನು ಕುಮಾರಸ್ವಾಮಿ ನಿರಾಕರಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಇದು ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದೆ.
ಮಂಡ್ಯ, ಜನವರಿ 6: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕರ್ನಾಟಕ ಪ್ರವಾಸದ ವೇಳೆ ರಾಜ್ಯ ಸರ್ಕಾರ ಕಾರು ನೀಡದೆ ಶಿಷ್ಟಾಚಾರ ಉಲ್ಲಂಘಿಸಿದೆ ಎಂಬ ಆರೋಪಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಮಾಜಿ ಸಂಸದೆ ಸುಮಲತಾ ಉಪಯೋಗಿಸುತ್ತಿದ್ದ ಕಾರು ಬಳಸಲು ಕುಮಾರಸ್ವಾಮಿ ನಿರಾಕರಿಸಿದರೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.
ಚಲುವರಾಯಸ್ವಾಮಿ ಹೇಳಿದ್ದೇನು?
ಸರ್ಕಾರ ನನಗೆ ಕಾರು ನೀಡಿಲ್ಲ ಎಂಬ ಹೆಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಸಚಿವ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಮಾತನಾಡಿದ ಅವರು, ‘ಸರ್ಕಾರ ನನಗೆ ಕಾರು ನೀಡಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ, ಸುಮಲತಾ ಉಪಯೋಗಿಸುತ್ತಿದ್ದ ಕಾರು ಬಳಸುವುದಿಲ್ಲ ಎಂದು ಯಾಕೆ ಹೇಳಿದರು’ ಎಂದು ಪ್ರಶ್ನಿಸಿದ್ದಾರೆ.
ಹೊಸ ಸಂಸದರಿಗೆ ಮೊದಲು ಹಳೆಯ ಕಾರು ನೀಡುವುದು ವಾಡಿಕೆ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಹೊಸ ಕಾರು ಖರೀದಿಸಿ ಕೊಡುತ್ತೇವೆ. ಹಿಂದೆ ನಮಗೂ ಅಂಬರೀಶ್ ಬಳಸುತ್ತಿದ್ದ ಕಾರು ಕೊಟ್ಟಿದ್ದರು. ಸಚಿವನಾದಾಗಲೂ 6 ತಿಂಗಳು ಹಳೆಯ ಕಾರನ್ನೇ ಬಳಸಿದ್ದೆ. ಇಂತಹ ಸಣ್ಣ ಹೇಳಿಕೆ, ಆರೋಪ ಮಾಡುವುದು ಅವರ ಘನತೆಗೆ ತರವಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಏನು ಹೇಳಿದ್ದರು ಕುಮಾರಸ್ವಾಮಿ?
ಕಳೆದ ವಾರ ರಾಜ್ಯ ಪ್ರವಾಸದ ವೇಳೆ, ರಾಜ್ಯ ಸರ್ಕಾರ ಕಾರು ಒದಗಿಸಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಅಲ್ಲದೆ, ಕೇಂದ್ರ ಸರ್ಕಾರದ ವಾಹನದಲ್ಲೇ ಮಂಡ್ಯ, ಮೈಸೂರು ಜಿಲ್ಲೆ ಪ್ರವಾಸ ಮಾಡಿದ್ದರು. ರಾಜ್ಯ ಸರ್ಕಾರ ನನಗೆ ಈವರೆಗೂ ಕಾರು ಕೊಟ್ಟಿಲ್ಲ. ಹೀಗಾಗಿ, ನಮ್ಮ ಕೇಂದ್ರ ಸರ್ಕಾರದ ವಾಹನ ಬಳಕೆ ಮಾಡುತ್ತಿದ್ದೇನೆ. ಬೃಹತ್ ಕೈಗಾರಿಕಾ ಇಲಾಖೆಯ ವಾಹನ ತರಿಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದರು.
ಇದನ್ನೂ ಓದಿ: ಪ್ರೋಟೋಕಾಲ್ ಉಲ್ಲಂಘಿಸಿದ ಸರ್ಕಾರ: ಕುಮಾರಸ್ವಾಮಿ ಬೇಸರ, ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ದಿಶಾ ಸಭೆ
ಇದು ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ಕೇಂದ್ರ ಸಚಿವರಿಗೆ ಕಾರು ನೀಡದೇ ಇರುವ ಬಗ್ಗೆ ಟೀಕೆಗಳೂ ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ