KRS​​ನಿಂದ ನದಿಗೆ ಹರಿದ ನೀರು: ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರ ತಾತ್ಕಾಲಿಕ ಬಂದ್​

| Updated By: ವಿವೇಕ ಬಿರಾದಾರ

Updated on: Jul 20, 2024 | 10:10 AM

ಕಾವೇರಿ ನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಆರ್​ಎಸ್​ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಜಲಾಶಯ ಸಂಪೂರ್ಣ ಭರ್ತಿ ಅಂಚಿಗೆ ತಲುಪಿದ ಹಿನ್ನೆಲೆಯಲ್ಲಿ ನದಿಗೆ ನೀರು ಬಿಡಲಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ.

KRS​​ನಿಂದ ನದಿಗೆ ಹರಿದ ನೀರು: ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರ ತಾತ್ಕಾಲಿಕ ಬಂದ್​
ರಂಗನತಿಟ್ಟು ಪಕ್ಷಿಧಾಮ
Follow us on

ಮಂಡ್ಯ, ಜುಲೈ 20: ಕೆಆರ್​ಎಸ್​​ ಜಲಾಶಯದಿಂದ (KRS Dam) ಕಾವೇರಿ ನದಿಗೆ (Cauvery River) ಹೆಚ್ಚಾಗಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮದ (Ranganathittu Bird Sanctuary) ದೋಣಿ ವಿಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದಿನಿಂದ ಮುಂದಿನ ಆದೇಶದವರೆಗೆ ದೋಣಿ ವಿಹಾರ ಬಂದ್ ಇರಲಿದೆ. ಪ್ರವಾಸಿಗರಿಗೆ ರಂಗನತಿಟ್ಟು ವೀಕ್ಷಣೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಮೈಸೂರು ವನ್ಯಜೀವಿ ವಿಭಾಗ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಕೆಆರ್​ಎಸ್​ ಜಲಾಶಯ ಸಂಪೂರ್ಣ ಭರ್ತಿ ಅಂಚಿಗೆ ತಲುಪಿದ ಹಿನ್ನೆಲೆಯಲ್ಲಿ ಇಂದು (ಜು.20) ಕಾವೇರಿ ನದಿಗೆ ಸದ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಡ್ಯಾಂನ 10 ಕ್ರೆಸ್ಟ್ ಗೇಟ್ ಗಳ ಮೂಲಕ ಹಾಲ್ನೊರೆಯಂತೆ ನೀರು ರಭಸವಾಗಿ ಹೊರ ಬರುತ್ತಿದೆ. ಸಂಜೆ ವೇಳೆಗೆ ಡ್ಯಾಂ ಹೊರ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆ ಸಾಧ್ಯತೆ ಇದೆ. ಒಳಹರಿವು ಹೆಚ್ಚಳವಾದರೆ ಹೊರಹರಿವು ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ. ಸದ್ಯಕ್ಕೆ 10 ರಿಂದ 25 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಬಿಡಲು ತೀರ್ಮಾನ ಮಾಡಲಾಗಿದೆ‌.

ಇದನ್ನೂ ಓದಿ: ಆಲಮಟ್ಟಿ ಡ್ಯಾಂ ಬಹುತೇಕ ಭರ್ತಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ

ಹೀಗಾಗಿ ಕಾವೇರಿ ನದಿ ಪಾತ್ರದ 92 ಗ್ರಾಮಗಳಲ್ಲಿ ನೆರೆ ಭೀತಿ ಎದುರಾಗಿದೆ. ಪ್ರವಾಸಿ ತಾಣಗಳಲ್ಲೂ ಪ್ರವಾಹದ ಆತಂಕ ಎದುರಾಗಿದೆ. ಹೀಗಾಗಿ ಪ್ರವಾಹ ಪರಿಸ್ಥಿತಿ ಎದುರಿಸಲು ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಂಡ್ಯ ಜಿಲ್ಲಾಡಳಿತ ಈಗಾಗಲೇ ಕಂಟ್ರೋಲ್ ರೂಂ ಸ್ಥಾಪಿಸಿದೆ.

ಕೆಆರ್​ಎಸ್ ಜಲಾಶಯಕ್ಕೆ ಕಳೆದ ಐದು ದಿನಗಳಲ್ಲಿ 15 ಟಿಎಂಸಿ ನೀರು ಹರಿದು ಬಂದಿದೆ. ಕೆಆರ್​ಎಸ್​ ಡ್ಯಾಂನಲ್ಲಿ ಸದ್ಯ 120 ಅಡಿ ನೀರು ಸಂಗ್ರಹವಾಗಿದೆ. ಸಂಪೂರ್ಣ ಭರ್ತಿಗೆ ಕೇವಲ 4 ಅಡಿ ಮಾತ್ರ ಭಾಕಿ ಇದೆ. ಡ್ಯಾಂ ರವಿವಾರ ಸಂಜೆ ವೇಳೆಗೆ ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ಇದೆ. ಸದ್ಯ ಡ್ಯಾಂಗೆ 51,374 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ