ನಮ್ಮನ್ನು ಬಿಟ್ಟು ಯಾರೂ ಉಳಿಯಬಾರದು ಎನ್ನುವುದು ಜೆಡಿಎಸ್ ಧೋರಣೆ: ಡಿಕೆ ಶಿವಕುಮಾರ್ ಟೀಕೆ
DK Shivakumar: ಕಾವೇರಿ ಜಲಾನಯನ ಪ್ರದೇಶದ ರೈತರ ರಕ್ಷಣೆ ಮಾಡಬೇಕು. ಕಾವೇರಿ ನೀರನ್ನು ವ್ಯರ್ಥವಾಗಲು ಬಿಡಬಾರದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮಂಡ್ಯ: ಈ ಭಾಗದಲ್ಲಿ ಜೆಡಿಎಸ್ ಮಾತ್ರ ಇರಬೇಕು ಎನ್ನುವ ಧೋರಣೆಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ನಮ್ಮನ್ನು ಬಿಟ್ಟು ಯಾರೂ ಇರಬಾರದು. ಯಾವ ಪಕ್ಷವೂ ಉದ್ಧಾರವಾಗಬಾರದು ಎಂಬುದು ಇವರ ಉದ್ದೇಶ ಎಂದು ಮೇಕೆದಾಟು ಪಾದಯಾತ್ರೆ ಬಗ್ಗೆ ಜೆಡಿಎಸ್ ನಾಯಕರ ವ್ಯಂಗ್ಯದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಬೇಸರ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ಮೇಕೆದಾಟು ಯೋಜನೆಗೆ ವಿಸ್ತೃತ ಯೋಜನಾ ವರದಿ (Detailed Project Reprt – DPR) ಸಿದ್ಧಪಡಿಸಿದ್ದೆವು. ಇದನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ರೈತರ ರಕ್ಷಣೆ ಮಾಡಬೇಕು. ಕಾವೇರಿ ನೀರನ್ನು ವ್ಯರ್ಥವಾಗಲು ಬಿಡಬಾರದು. ಬೆಂಗಳೂರಿನ ಜನರಿಗೆ ಕುಡಿಯುವ ನೀರು ಸಿಗಬೇಕು. ಅದಕ್ಕಾಗಿ ಈ ಪಾದಯಾತ್ರೆ ಮೂಲಕ ಒತ್ತಾಯಿಸುತ್ತಿದ್ದೇವೆ. ಪಕ್ಷಭೇದ ಮರೆತು ಎಲ್ಲರೂ ಪಾದಯಾತ್ರೆಗೆ ಬರಲಿ ಎಂದು ಅವರು ಕರೆ ನೀಡಿದರು.
ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ನೂರಾರು ಜಲಾಶಯಗಳನ್ನು ನಿರ್ಮಿಸಲಾಗಿದೆ. ಸಿದ್ದರಾಮಯ್ಯ ಕಾಲದಲ್ಲಿಯೇ ಮೇಕೆದಾಟು ಯೋಜನೆಯ ಡಿಪಿಅರ್ ಸಿದ್ಧವಾಗಿತ್ತು. ಬಿಜೆಪಿಯವರು ತಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆ. ಕಾವೇರಿ ನೀರಿಗಾಗಿ ನಮ್ಮ ಹೋರಾಟ, ಪಾದಯಾತ್ರೆ ತಡೆಯಲು ಸರ್ಕಾರ, ಪೊಲೀಸರು ತಡೆದರು. ನಾವು ಹೋರಾಟ ಮಾಡಬಾರದು ಎಂಬುದು ಜೆಡಿಎಸ್ ಉದ್ದೇಶ. ಶಾಂತಿಯುತ ಹೋರಾಟ ನಮ್ಮದು, ನೀರಿಗಾಗಿ ನಮ್ಮ ನಡಿಗೆ ಅಷ್ಟೇ. ಪಕ್ಷ ಭೇದ ಮರೆತು ಪಾದಯಾತ್ರೆಗೆ ಎಲ್ಲರೂ ಬರಲಿ. ಪಾದಯಾತ್ರೆ ಎನ್ನುವುದು ಜೆಡಿಎಸ್ನವರಿಗೆ ಅವರದೇ ಸ್ವಂತ ಐಡಿಯಾ ಅನ್ನಿಸಿರಬಹುದು. ಅವರ ಐಡಿಯಾ ನಾವು ಹೈಜಾಕ್ ಮಾಡಿದ್ದೇವೆ ಎಂದು ಅವರು ವಿರೋಧಿಸುತ್ತಿರಬೇಕು. ನಾವು ಯಾರ ಐಡಿಯಾವನ್ನು ಹೈಜಾಕ್ ಮಾಡಿಲ್ಲ. ಅವರೂ ಬೇಕಾದರೆ ಪಾದಯಾತ್ರೆ ಮಾಡಲಿ ಎಂದರು.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಮಾಡಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ಕಳಂಕ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಲಿದೆ. ಅಂಥ ಊರಿನಲ್ಲಿ ಬಂಡವಾಳ ಹೂಡಲು ಯಾರೂ ಮುಂದೆ ಬರುವುದಿಲ್ಲ. ಶಾಂತಿ-ಸ್ಥಿರಲಿ ಇಲ್ಲದ ಕಡೆ ವ್ಯಾಪಾರ ಮಾಡಲು ಯಾರೂ ಹೋಗುವುದಿಲ್ಲ. ಸಚಿವ ಕೆ.ಎಸ್.ಈಶ್ವರಪ್ಪ ತಾನು ಮಾಡಿದ್ದೇ ಸರಿ ಎನ್ನುತ್ತಾರೆ. ಗಂಟೆಗೊಂದು ಗಳಿಗೆಗೊಂದು ಮಾತನಾಡುತ್ತಾರೆ ಎಂದು ವಿಷಾದಿಸಿದರು. ಯುವಕನ ಹತ್ಯೆ ನಡೆಯಬಾರದಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರಿಯಾದ ರಕ್ಷಣೆ ನೀಡಲು ಸರ್ಕಾರ, ಸಚಿವರು, ಪೊಲೀಸರು ವಿಫಲರಾಗಿದ್ದಾರೆ ಎಂದು ಹೇಳಿದರು.
ಹರ್ಷ ಕೊಲೆಗೆ ಹಳೇ ವೈಷಮ್ಯ ಕಾರಣ
ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಕೇಸ್‌ನಲ್ಲಿ ಹಳೇ ವೈಷಮ್ಯ ಇರುವುದು ಗೊತ್ತಾಗಿದೆ. ಈ ವಿಚಾರ ಗೊತ್ತಾದಾಗ ಪೊಲೀಸರು ಎಚ್ಚರಿಕೆ ವಹಿಸಬೇಕಾಗಿತ್ತು. ಪ್ರಚೋದನೆ ಹೇಳಿಕೆ ನೀಡುವವರನ್ನು ಅವರೇ ಇಟ್ಟುಕೊಳ್ಳಲಿ. ಅಂತಹ ಮುತ್ತುರತ್ನಗಳನ್ನು ಅವರ ಬಳಿಯೇ ಇಟ್ಟುಕೊಳ್ಳಲಿ. ಪ್ರತಿಯೊಬ್ಬ ನಾಗರಿಕನನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ ಸಚಿವ ಈಶ್ವರಪ್ಪ. ಇದರಿಂದ ಅವರಿಗೆ ಆರ್ಥಿಕವಾಗಿ ಪೆಟ್ಟು, ಮಲೆನಾಡಿಗೂ ಅವಮಾನವಾಗಲಿದೆ. ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ಸೆಕ್ಷನ್ 144 ಜಾರಿ ಮಾಡಿದ ಮೇಲೆ ಒಂದು ನಿಯಮವಿರುತ್ತದೆ. ಆದರೂ ಸಚಿವರು ಮೃತದೇಹ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಸಚಿವ ಈಶ್ವರಪ್ಪ ಮೇಲೆ ಏಕೆ ಕೇಸ್ ಹಾಕಿಲ್ಲ? ಮೆರವಣಿಗೆ ವೇಳೆ ಅಂಗಡಿಗಳ ಮೇಲೆ ಕಲ್ಲು ಹೊಡೆಸಿದ್ದಾರೆ. ಇದಕ್ಕೆ ಏಕೆ ಪ್ರಕರಣ ದಾಖಲಿಸಿಲ್ಲವೆಂದು ಡಿಜಿ ಹೇಳಬೇಕು. ಇದಕ್ಕೆ ಖಾಕಿ ಬಟ್ಟೆಯನ್ನು ಹಾಕಿಕೊಂಡವರು ಉತ್ತರ ನೀಡಬೇಕು. ಇಲ್ಲವೇ ಖಾಕಿ ತೆಗೆದುಬಿಟ್ಟು ನೀವು ಕೂಡ ಕೇಸರಿ ಬಟ್ಟೆ ಹಾಕಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಫೆ.27ರಂದು ಬೆಳಗ್ಗೆ 9 ಗಂಟೆಗೆ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಆರಂಭ: ಡಿಕೆ ಸುರೇಶ್
ಇದನ್ನೂ ಓದಿ: ಈಶ್ವರಪ್ಪ ಪ್ರತಿಯೊಬ್ಬ ನಾಗರಿಕರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್