ಎಚ್ಡಿಕೆಗೆ ಸೆಡ್ಡು ಹೊಡೆದ ಶಿವರಾಮೇಗೌಡ: ನಾಗಮಂಗಲದಿಂದ ಸ್ಪರ್ಧೆಗೆ ಸಿದ್ಧತೆ
ವೈರಲ್ ಆಗಿರುವ ಆಡಿಯೊದಲ್ಲಿ ನನ್ನನ್ನ ಮಾತನಾಡುವಂತೆ ಮಾಡಿದ್ದೆ ಒಂದು ದೊಡ್ಡ ಹುನ್ನಾರವಾಗಿತ್ತು. ಈ ಬಗ್ಗೆ ನಮ್ಮ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿ ಯೋಚಿಸಬೇಕಿತ್ತು ಎಂದು ಶಿವರಾಮೇಗೌಡ ಅಭಿಪ್ರಾಯಪಟ್ಟರು.

ಮಂಡ್ಯ: ಜೆಡಿಎಸ್ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ವಿರುದ್ಧ ನನಗೆ ಯಾವುದೇ ಅಸಮಾಧಾನ ಇಲ್ಲ. ನಮ್ಮವರೇ ಕೆಲವರು ನನ್ನ ವಿರುದ್ಧ ಹುನ್ನಾರ ನಡೆಸಿದ್ದರು. ಅವರ ಹುನ್ನಾರಕ್ಕೆ ಖೆಡ್ಡಾಕ್ಕೆ ನಾನು ಬಿದ್ದೆ ಎಂದು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು. ವೈರಲ್ ಆಗಿರುವ ಆಡಿಯೊದಲ್ಲಿ ನನ್ನನ್ನ ಮಾತನಾಡುವಂತೆ ಮಾಡಿದ್ದೆ ಒಂದು ದೊಡ್ಡ ಹುನ್ನಾರವಾಗಿತ್ತು. ಈ ಬಗ್ಗೆ ನಮ್ಮ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿ ಯೋಚಿಸಬೇಕಿತ್ತು. ಅವರು ಹಿಂದುಮುಂದು ಯೋಚಿಸದೇ ನನ್ನನ್ನು ಪಕ್ಷದಿಂದ ಉಚ್ಚಾಟಿಸುವ ತೀರ್ಮಾನಕ್ಕೆ ಬಂದುಬಿಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.
ಅವರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನಿಖಿಲ್ ಅವರನ್ನು ಮಂಡ್ಯದಲ್ಲಿ ಚುನಾವಣೆಗೆ ನಿಲ್ಲಿಸುವುದು ನನಗೆ ಇಷ್ಟ ಇರಲಿಲ್ಲ. ನಮ್ಮವರೇ, ನಮ್ಮ ಜಿಲ್ಲೆಯವರೇ ಚಿತಾವಣೆ ಮಾಡಿ ಅವರನ್ನು ನಿಲ್ಲಿಸಿ ಮರ್ಯಾದೆ ಕಳೆದರು. ನಾಗಮಂಗಲದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಪ್ರತಿ ಕೆಲಸಕ್ಕೂ ಸಾರಾಸಗಟಾಗಿ ಶೇ 7ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಶಾಸಕರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲದಿಂದ ಸ್ಪರ್ಧೆಗೆ ಎಲ್.ಆರ್.ಶಿವರಾಮೇಗೌಡ ಸಿದ್ಧತೆ ನಡೆಸಿದ್ದಾರೆ. JDSನಿಂದ ಉಚ್ಚಾಟನೆಗೊಂಡ ನಂತರ ಜೆಡಿಎಸ್, ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿರುವ ಅವರು ಕ್ಷೇತ್ರ ಪ್ರವಾಸ ಮಾಡುವ ಮೂಲಕ ಈಗಿನಿಂದಲೇ ಪ್ರಚಾರ ಆರಂಭ ಮಾಡಿದ್ದಾರೆ. ಇದಕ್ಕಾಗಿ ನಾಗಮಂಗಲದಲ್ಲಿ ಮನೆ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಮನೆಗೆ ಭೂಮಿ ಪೂಜೆ ಮಾಡುವ ಮೂಲಕ ಸ್ಪರ್ಧೆ ಖಚಿತ ಎಂಬ ಸಂದೇಶ ರವಾನಿಸಿದ್ದಾರೆ.
ನಾನು ಶಾಸಕನಾಗಲು ಸ್ಪರ್ಧಿಸುತ್ತಿಲ್ಲ, ಮಂತ್ರಿಯಾಗಲು ಸ್ಪರ್ಧಿಸುತ್ತಿದ್ದೇನೆ. ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಬೆಂಬಲ ನೀಡುತ್ತಿದ್ದಾರೆ. ಎನ್.ಚಲುವರಾಯಸ್ವಾಮಿ, ಸುರೇಶ್ಗೌಡ ನನ್ನ ಬದ್ಧ ವೈರಿಗಳು. ಏಕಕಾಲದಲ್ಲಿ ಇಬ್ಬರನ್ನೂ ಸೋಲಿಸುವ ಅವಕಾಶ ನನಗೆ ಇದೆ. ನನಗೆ ಪಕ್ಷ ಸೂಕ್ತವಾಗಲ್ಲ ಅಂತ ಕ್ಷೇತ್ರದ ಜನರೇ ಹೇಳುತ್ತಿದ್ದಾರೆ. ಹೀಗಾಗಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ನಾಗಮಂಗಲವು ಹೈವೋಲ್ಟೇಜ್ ಕ್ಷೇತ್ರ ಎನಿಸಿಕೊಂಡಿದೆ. ಹಳ್ಳಿಹಳ್ಳಿಗಳಲ್ಲೂ ಬೆಂಬಲಿಗರ ಪಡೆ ಸಂಘಟಿಸುವ ಮೂಲಕ ಜೆಡಿಎಸ್ನ ಮತಬ್ಯಾಂಕ್ಗೆ ಕೈಹಾಕಲು ಯತ್ನಿಸುತ್ತಿದ್ದಾರೆ. ನನ್ನ ಸ್ಪರ್ಧೆಯಿಂದ ಕೆಲವರಿಗೆ ಲಾಭ ಆಗಬಹುದು ಎಂದು ತಿಳಿದಿದ್ದಾರೆ. ಆದರೆ ನಾನು ಚೆಲುವರಾಯಸ್ವಾಮಿ, ಸುರೇಶ್ ಗೌಡ ಇಬ್ಬರ ಮತವನ್ನು ಪಡೆಯುತ್ತೇನೆ. ಪ್ರತಿ ಊರಲ್ಲೂ ಮೂರು ಗುಂಪು ರಚಿಸುತ್ತೇನೆ. ಅವರಿಬ್ಬರಂತೆ ನನ್ನ ಗುಂಪು ಇರುವಂತೆ ಮಾಡುತ್ತೇನೆ. ಅವರ ಗುಂಪು ಇಲ್ಲದಿದ್ರು ನನ್ನ ಪರವಾದ ಗುಂಪು ಇರಲೆಬೇಕು. ಈ ಕ್ಷೇತ್ರ ಬಿಟ್ಟು ಹೋಗಲ್ಲ ಎಂದು ಹೇಳಲು ನಾನು ಮನೆ ಮಾಡ್ತಿರೋದು. ಚುನಾವಣೆ ಮುಗಿಯುವವರೆಗೂ ನಿದ್ದೆ ಮಾಡುವುದಿಲ್ಲ, ಹೋರಾಟ ನಿರಂತರ ಮುಂದುವರಿಸುತ್ತೇನೆ ಎಂದು ಘೋಷಿಸಿದರು.
ಇದನ್ನೂ ಓದಿ: ರಷ್ಯಾ ಸುಪರ್ದಿಯಲ್ಲಿದ್ದ ಉಕ್ರೇನ್ ನಗರಗಳಲ್ಲಿ ನರಮೇಧದ ಸಾಕ್ಷ್ಯ ಪತ್ತೆ: ಸೇಡು ತೀರಿಸುತ್ತೇನೆಂದು ಶಪಥ ಮಾಡಿದ ಝೆಲೆನ್ಸ್ಕಿ
ಇದನ್ನೂ ಓದಿ: ರಷ್ಯಾ ವಶಕ್ಕೆ ಮರಿಯುಪೋಲ್: ಉಕ್ರೇನ್ನಲ್ಲಿ ರಷ್ಯಾ ಗೆಲ್ಲಲು ಬಿಡುವುದಿಲ್ಲ ಎಂದ ಅಮೆರಿಕ, ಹೆಚ್ಚಾಗ್ತಿದೆ ಅಣ್ವಸ್ತ್ರ ದಾಳಿ ಭೀತಿ