ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಜಾಲ ಸಕ್ರಿಯ: ಜಿಲ್ಲಾ ವೈದ್ಯಾಧಿಕಾರಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 12, 2021 | 4:00 PM

ಮಂಡ್ಯ ತಾಲ್ಲೂಕಿನ ಕಾರಸವಾಡಿ ಗ್ರಾಮದ ಮನೆಯೊಂದರಲ್ಲಿ ಭ್ರೂಣ ಹತ್ಯೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ನಂತರ ಅಧಿಕಾರಿಗಳು ದಾಳಿ ನಡೆಸಿದರು.

ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಜಾಲ ಸಕ್ರಿಯ: ಜಿಲ್ಲಾ ವೈದ್ಯಾಧಿಕಾರಿ
ಮಂಡ್ಯದ ಆಸ್ಪತ್ರೆಯೊಂದರಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
Follow us on

ಮಂಡ್ಯ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಜಾಲ ಸಕ್ರಿಯವಾಗಿದೆ. ಸರ್ಕಾರ ಹೆಣ್ಣು ಭ್ರೂಣಹತ್ಯೆ ನಿಷೇಧಿಸಿದ್ದರೂ ಭ್ರೂಣಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ ಎಂದು ಜಿಲ್ಲಾ ವೈದ್ಯಾಧಿಕಾರಿ ಧನಂಜಯ ಹೇಳಿದ್ದಾರೆ. ತಾಲ್ಲೂಕಿನ ಕಾರಸವಾಡಿ ಗ್ರಾಮದ ಮನೆಯೊಂದರಲ್ಲಿ ಭ್ರೂಣ ಹತ್ಯೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ನಂತರ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ರಕ್ತಸ್ರಾವದಿಂದ ಬಳಲುತ್ತಿದ್ದ

ಮಳವಳ್ಳಿ ತಾಲ್ಲೂಕಿನ ಮೂರುವರೆ ತಿಂಗಳ ಗರ್ಭಿಣಿಗೆ ಗರ್ಭಪಾತದ ಮಾಡಿಸಿ, ಹೆಣ್ಣು ಭ್ರೂಣ ಹತ್ಯೆ ಮಾಡಲಾಗಿದೆ. ಅಧಿಕಾರಿಗಳು ಈ ಸ್ಥಳದಲ್ಲಿ ದಾಳಿ ನಡೆಸಿದಾಗ ಮಹಿಳೆ ರಕ್ತಸ್ರಾವದಿಂದ ಒದ್ದಾಡುತ್ತಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು. ಮಹಿಳೆಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿದ್ದು, ಮೂರನೇ ಮಗು ಅವರ ಹೊಟ್ಟೆಯಲ್ಲಿತ್ತು.

ಗರ್ಭದಲ್ಲಿರುವ ಮೂರನೇ ಮಗುವೂ ಹೆಣ್ಣು ತಿಳಿದ ನಂತರ ಭ್ರೂಣ ತೆಗೆಸಲಾಗಿದೆ. ಮೂರುವರೆ ತಿಂಗಳ ಹೆಣ್ಣುಭ್ರೂಣದ ಹತ್ಯೆ ನಡೆಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜಿಲ್ಲೆಯಲ್ಲಿ ಲಿಂಗಪತ್ತೆ ನಡೆಸಲಾಗುತ್ತಿಲ್ಲ. ಹೊರ ಜಿಲ್ಲೆಯಲ್ಲಿ ಲಿಂಗ ಪತ್ತೆ ಹಚ್ಚಿ ಇಲ್ಲಿಗೆ ಕರೆತಂದು ಕೃತ್ಯ ನಡೆಸಲಾಗಿದೆ. ನರ್ಸ್ ಒಬ್ಬರು ತಾವಿರುವ ಮನೆಯಲ್ಲಿಯೇ ಕೃತ್ಯ ನಡೆಸಿದ್ದು, ಅಧಿಕಾರಿಗಳು ದಾಳಿ ನಡೆಸುವ ಸಂದರ್ಭ ಅವರು ನಾಪತ್ತೆಯಾಗಿದ್ದಾರೆ.

ನರ್ಸ್​ ಕೆಲಸ ಮಾಡುತ್ತಿದ್ದ ಮಂಡ್ಯದ ಖಾಸಗಿ ಕ್ಲಿನಿಕ್​ಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆರೋಪಿ ನರ್ಸ್​ ಮೂರು ತಿಂಗಳ ಹಿಂದೆಯೇ ಅಲ್ಲಿಂದ ಕೆಲಸ ಬಿಟ್ಟಿರುವ ಮಾಹಿತಿ ಈ ಸಂದರ್ಭ ಬೆಳೆಕಿಗೆ ಬಂದಿದೆ. ಕ್ಲಿನಿಕ್ ಪರಿಶೀಲನೆ ವೇಳೆ ಅಲ್ಲಿ ದಂಪತಿಯೊಬ್ಬರು ಇದ್ದರು. ಅವರೂ ಭ್ರೂಣಹತ್ಯೆಗಾಗಿಯೇ ಬಂದಿರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:ಮತ್ತೆ ಕಾಡುತ್ತಿದೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣ; ಕಾನೂನುಬಾಹಿರ ಚಟುವಟಿಕೆಗಳ ತಡೆಗೆ ವಿಜಯಪುರ ಜಿಲ್ಲಾಡಳಿತದಿಂದ ಸಿದ್ಧತೆ

ಇದನ್ನೂ ಓದಿ: 24 ವಾರಗಳ ಅವಧಿಗೂ ಮೀರಿದ್ದ ಭ್ರೂಣ ತೆಗೆಯಲು ಅನುಮತಿ ನೀಡಿದ ದೆಹಲಿ ಹೈಕೋರ್ಟ್​; ಮಹಿಳೆಗೆ ಅಪಾಯವಿದ್ದರೂ ಒಪ್ಪಿಗೆ ನೀಡಿದ ಪತಿ