ಮತ್ತೆ ಕಾಡುತ್ತಿದೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣ; ಕಾನೂನುಬಾಹಿರ ಚಟುವಟಿಕೆಗಳ ತಡೆಗೆ ವಿಜಯಪುರ ಜಿಲ್ಲಾಡಳಿತದಿಂದ ಸಿದ್ಧತೆ
ಜಿಲ್ಲಾ ಪರಿವೀಕ್ಷಣಾ ತಂಡ ಅಧ್ಯಕ್ಷೆ ಡಾ.ರೇಜಶ್ವರಿ ಗೋಲಗೇರಿ, ಡಿಎಚ್‍ಓ ಡಾ.ಮಹೇಂದ್ರ ಕಾಪ್ಸೆ, ಸಮಿತಿಯ ಸುನಂದ ತೋಳಬಂದಿ, ಪೀಟರ್ ಅಲೆಗ್ಝಾಂಡರ್, ತುಳಸಿರಾಂ ಸೂರ್ಯವಂಶಿ, ಪರಶುರಾಮ ದೇವಮಾನೆ, ಜಿಲ್ಲಾ ಪೊಲೀಸ್ ಇಲಾಖೆ ಘಟನೆಯ ತನಿಖೆ ನಡೆಸಲಿವೆ ಎಂದು ಜಿಲ್ಲಾಧಿಕಾರಿ ಪಿ ಸುನೀಲಕುಮಾರ ತಿಳಿಸಿದ್ದಾರೆ.
ವಿಜಯಪುರ: ಲಿಂಗ ಪರೀಕ್ಷೆ, ಭ್ರೂಣ ಹತ್ಯೆ ಕಾನೂನುಬಾಹಿರ ಚಟುವಟಿಕೆ ಹಾಗೂ ಶಿಕ್ಷಾರ್ಹ ಅಪರಾಧ. ಆದರೆ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಅಕ್ರಮವಾಗಿ ಪ್ರಸವ ಪೂರ್ಣ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ. ಇತ್ತೀಚೆಗೆ ನಗರದಲ್ಲಿ ನಡೆದ ವಿದ್ರಾವಕ ಘಟನೆಯೊಂದು ಈ ಸಂಶಯಕ್ಕೆ ಕಾರಣವಾಗಿದೆ. ಚಿದಂಭರ ನಗರದ ವಾಸಿಯಾದ ನಾಲ್ಕು ತಿಂಗಳ ಗರ್ಭಿಣಿಗೆ ಕಾನೂನು ಬಾಹೀರವಾಗಿ ಮನೆಯೊಂದರಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಿದ ಘಟನೆ ನಡೆದಿದೆ. ಮಗು ಸರಿಯಾಗಿ ಬೆಳೆದಿಲ್ಲಾ ಎಂದು ನಂಬಿಸಿ ಅಕ್ರಮವಾಗಿ ಗರ್ಭಿಣಿ ವಿಜಯಲಕ್ಷ್ಮೀ ಹಡಪದಗೆ ಆಕೆಯ ಪತಿ ಅರವಿಂದ ಹಡಪದ ಹಾಗೂ ಈತನ ಅಕ್ಕ ಬಾಗೀರಥಿ ಅಬಾರ್ಶನ್ ಮಾಡಿದ್ದಾರೆ. ಸದ್ಯ ಇದನ್ನು ಮನಗಂಡ ಜಿಲ್ಲಾಡಳಿತ ಭ್ರೂಣ ಹತ್ಯೆ ತಡೆಗೆ ಮುಂದಾಗಿದೆ.
ವಿಜಯಲಕ್ಷ್ಮೀ ಹಡಪದಗೆ ಅದಾಗಲೇ ಇಬ್ಬರು ಹೆಣ್ಣು ಮಕ್ಕಳಂತೆ. ಮೂರನೇ ಬಾರಿ ಗರ್ಭ ಧರಿಸಿ ನಾಲ್ಕು ತಿಂಗಳಾದ ಮೇಲೆ ಪತಿ ಅರವಿಂದ ಹಾಗೂ ಆತನ ಅಕ್ಕ ಬಾಗೀರಥಿ ನಗರದ ಸ್ಕ್ಯಾನಿಂಗ್ ಸೆಂಟರ್ವೊಂದಕ್ಕೆ ಕರೆದುಕೊಂಡು ಹೋಗಿ ಸ್ಕ್ಯಾನ್ ಮಾಡಿಸಿದ್ದಾರೆ. ಲಿಂಗ ಪರೀಕ್ಷೆ ಮಾಡಬಾರದೆಂಬ ಕಾನೂನಿದ್ದರೂ ಸ್ಕ್ಯಾನಿಂಗ್ ಸೆಂಟರ್ನವರು ವಿಜಯಲಕ್ಷ್ಮೀ ಪತಿ ಅರವಿಂದನಿಗೆ ಹೊಟ್ಟೆಯಲ್ಲಿರುವುದು ಹೆಣ್ಣು ಮಗುವೆಂದು ಹೇಳಿದ್ದಾರೆ. ಆಗ ಹೊಟ್ಟೆಯಲ್ಲಿ ಮಗು ಸರಿಯಾಗಿ ಬೆಳೆದಿಲ್ಲ. ಮುಂದೆ ಕಷ್ಟವಾಗುತ್ತದೆ ಎಂದು ವಿಜಯಲಕ್ಷ್ಮೀಯನ್ನು ನಂಬಿಸಿ ವ್ಯಕ್ತಿಯೋರ್ವನ ಸಹಾಯದಿಂದ ಅಕ್ರಮವಾಗಿ ನಗರದ ಸ್ಟೇಷನ್ ರಸ್ತೆಯ ಮನೆಯೊಂದರಲ್ಲಿ ಜೂನ್ 7 ರಂದು ಕರೆದುಕೊಂಡು ಹೋಗಿ ಅಬಾರ್ಶನ್ ಮಾಡಿಸಿದ್ದಾರೆ.
ಗರ್ಭಪಾತ ಮಾಡುವ ಸಂದರ್ಭದಲ್ಲಿ ತಾಯಿಯ ಗರ್ಭದಿಂದ ಭ್ರೂಣದ ಜೊತೆಗೆ ಆಕೆಯ ಕರುಳು ಹೊರಗೆ ಬಂದಿದ್ದು, ಮಹಿಳೆ ಜೀವನ್ಮರಣದೊಂದಿಗೆ ಹೋರಾಟ ನಡೆಸಿದ್ದಾಳೆ. ಇದರಿಂದ ಕಂಗಾಲಾದ ಗರ್ಭಪಾತಕ್ಕೆ ಕರೆ ತಂದ ವ್ಯಕ್ತಿ ವಿಜಯಲಕ್ಷ್ಮಿ ಹಾಗೂ ಅರವಿಂದನ ಸಹೋದರಿ ಬಾಗೀರಥಿ ಅವರನ್ನು ರಾಷ್ಟ್ರೀಯ ಹೆದ್ದಾರಿ 50 ರ ಬಳಿ ಇರುವ ಹೈಪರ್ ಮಾರ್ಟ್ ಬಳಿ ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ವಿಜಯಲಕ್ಷ್ಮೀಯನ್ನು ನಗರದಲ್ಲಿರುವ ಸಾಸನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆಯಲ್ಲಿದ್ದ ಮಗು ಸರಿಯಾಗಿ ಬೆಳೆದಿಲ್ಲ ಆದ ಕಾರಣ ತೆಗೆಸೋದಾಗಿ ನನ್ನ ಪತಿ ಹೇಳಿ ಅಬಾರ್ಶನ್ ಮಾಡಿಸಿದ್ದಾರೆ. ಈ ವೇಳೆ ಹೀಗಾಗಿದೆ. ಆದರೆ ನನಗೆ ಸ್ಕ್ಯಾನಿಂಗ್ ಮಾಡಿಸಿದ್ದು ಎಲ್ಲಿ? ಅಬಾರ್ಶನ್ ಮಾಡೋಕೆ ಬಂದವರು ಯಾರು ಎಂಬಿತ್ಯಾದಿ ಮಾಹಿತಿ ಇಲ್ಲಾ ಎಂದು ವಿಜಯಲಕ್ಷ್ಮೀ ತಿಳಿಸಿದ್ದಾರೆ.
ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಜಿಲ್ಲಾಡಳಿತ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇತ್ತ ಗಮನ ಹರಿಸಿವೆ. ವಿಜಯಲಕ್ಷ್ಮೀ ಪತಿ ಅರವಿಂದ ಹಾಗೂ ಆತನ ಸಹೋರಿ ಬಾಗೀರಥಿಯನ್ನು ವಿಚಾರಣೆ ಮಾಡಿದ್ದಾರೆ. ಯಾವ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಮೊದಲು ಸ್ಕ್ಯಾನ್ ಮಾಡಿಸಿದ್ದು, ಅಲ್ಲಿ ಭ್ರೂಣದ ಲಿಂಗವನ್ನು ಹೇಳಿದವರು ಯಾರೂ? ನಂತರ ಅಬಾರ್ಶನ್ ಮಾಡಿಸೋಕೆ ಯಾರ ಬಳಿ ಹೋಗಿದ್ದರು? ಎಂಬ ಬಗ್ಗೆ ನಾವು ತನಿಖೆ ಮಾಡುತ್ತಿದ್ದೇವೆ. ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವ ತಂಡವನ್ನು ಪತ್ತೆ ಮಾಡುತ್ತೇವೆ. ಯಾರೇ ಆಗಲಿ ಅವರಿಗೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಹೇಳಿದ್ದಾರೆ.
ಜಿಲ್ಲಾ ಪರಿವೀಕ್ಷಣಾ ತಂಡ ಅಧ್ಯಕ್ಷೆ ಡಾ.ರೇಜಶ್ವರಿ ಗೋಲಗೇರಿ, ಡಿಎಚ್‍ಓ ಡಾ.ಮಹೇಂದ್ರ ಕಾಪ್ಸೆ, ಸಮಿತಿಯ ಸುನಂದ ತೋಳಬಂದಿ, ಪೀಟರ್ ಅಲೆಗ್ಝಾಂಡರ್, ತುಳಸಿರಾಂ ಸೂರ್ಯವಂಶಿ, ಪರಶುರಾಮ ದೇವಮಾನೆ, ಜಿಲ್ಲಾ ಪೊಲೀಸ್ ಇಲಾಖೆ ಘಟನೆಯ ತನಿಖೆ ನಡೆಸಲಿವೆ ಎಂದು ಜಿಲ್ಲಾಧಿಕಾರಿ ಪಿ ಸುನೀಲಕುಮಾರ ತಿಳಿಸಿದ್ದಾರೆ.
ಕೆಲ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವ ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವ ದೊಡ್ಡ ಜಾಲವೇ ಇದೆ. ಒಂದು ಲಿಂಗ ಪತ್ತೆಗೆ ಹಾಗೂ ಹೆಣ್ಣು ಭ್ರೂಣ ಹತ್ಯೆಗಾಗಿ 25,000 ದಿಂದ 1,00,000 ರೂಪಾಯಿವರೆಗೂ ತೆಗೆದುಕೊಳ್ಳುತ್ತಾರೆ. ನೆರೆಯ ಮಹಾರಾಷ್ಟ್ರದ ಮೂಲದ ಎಜೆಂಟರಿಂದ ಗ್ರಾಹಕರನ್ನು ಸೆಳೆಯುತ್ತಾರೆ. ಕಾರಣ ತಾವೆಲ್ಲಿಯೂ ಸಿಕ್ಕಿ ಹಾಕಿಕೊಳ್ಳಬಾರೆದಂದು ಈ ದಾರಿ ಕಂಡುಕೊಂಡಿದ್ದಾರೆ. ಈ ಪ್ರಕರಣದಿಂದ ಜಿಲ್ಲೆಯಲ್ಲಿ ಅಕ್ರಮ ಭ್ರೂಣ ಲಿಂಗ ಪತ್ತೆ ಮಾಡುವ ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವ ಕೆಲಸವಾಗುತ್ತಿದೆ ಎಂಬುದಂತೂ ಸಾಭೀತಾಗಿದೆ. ಸದ್ಯ ನಗರದ ಸಾಸನೂರು ಆಸ್ಪತ್ರೆಯಲ್ಲಿ ವಿಜಯಲಕ್ಷ್ಮೀ ಹಡಪದಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಾಣಕ್ಕೆ ಅಪಾಯವಿಲ್ಲ. ಭವಷ್ಯದಲ್ಲಿ ವಿಜಯಲಕ್ಷ್ಮೀ ತಾಯಿಯಾಗಬಹುದು ಎಂದೂ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ:
ಭ್ರೂಣಹತ್ಯೆ ತಡೆಗೆ ಚನ್ನೇಶ್ ರೂಪಿಸಿದ ಮಾಸ್ಟರ್ಪ್ಲಾನ್ ಇದು: ಒಂದೇ ನಂಬರ್ನಲ್ಲಿ ಸಮಗ್ರ ಮಾಹಿತಿ