Tunga Dam: ತುಂಗಾ ಡ್ಯಾಂ ಭರ್ತಿ; ಮಲೆನಾಡಿನ ಸೌಂದರ್ಯದ ಹೆಚ್ಚಳಕ್ಕೆ ಸಾಕ್ಷಿ ಆಯ್ತು ಮುಂಗಾರು ಮಳೆ

Tunga Dam Water Level: ಡ್ಯಾಂನ ಗರಿಷ್ಠ ಮಟ್ಟ 589.20 ಮೀ ತಲುಪಿದೆ. ಡ್ಯಾಂ ತುಂಬಿದ್ದರಿಂದ ನಿನ್ನೆಯಿಂದ 21 ಕ್ಲಸ್ಟರ್ ಗೇಟ್ ಮೂಲಕ 5000 ರಿಂದ 8000 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬೀಡಲಾಗುತ್ತಿದೆ. ಒಳ ಹರಿವು ಕೂಡಾ 750 ಸಾವಿರ ಕ್ಯೂಸೆಕ್ ಇದೆ.

Tunga Dam: ತುಂಗಾ ಡ್ಯಾಂ ಭರ್ತಿ; ಮಲೆನಾಡಿನ ಸೌಂದರ್ಯದ ಹೆಚ್ಚಳಕ್ಕೆ ಸಾಕ್ಷಿ ಆಯ್ತು ಮುಂಗಾರು ಮಳೆ
ತುಂಗಾ ಡ್ಯಾಂ
Follow us
| Updated By: preethi shettigar

Updated on: Jun 16, 2021 | 12:31 PM

ಶಿವಮೊಗ್ಗ: ಮಲೆನಾಡಿನ ಭಾಗದಲ್ಲಿ ಧಾರಕಾರವಾಗಿ ಮುಂಗಾರು ಮಳೆ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿದೆ. ಮತ್ತೆ ಮಲೆನಾಡಿನ ಹಸಿರಿನ ಸೆರೆಗಿಗೆ ಜೀವ ಕಳೆ ಬಂದಿದೆ. ಬತ್ತಿ ಹೋಗಿದ್ದ ತುಂಗೆಯು ಮಳೆಯಿಂದ ತುಂಬಿ ತುಳುತ್ತಿದ್ದಾಳೆ. ಹೀಗೆ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಮಲೆನಾಡಿನ ವಾತಾವರಣ ಸಂಪೂರ್ಣವಾಗಿ ಬದಲಾಗಿ ಬಿಟ್ಟಿದೆ. ಬೇಸಿಗೆಯಿಂದ ಬಳಲುತ್ತಿದ್ದ ಜನರಿಗೆ ಸದ್ಯ ತಂಪಿನ ವಾತಾವರಣ ಖುಷಿ ಕೊಟ್ಟಿದ್ದು, ನಿರಂತರವಾಗಿ ಸುರಿದ ಮಳೆಯಿಂದ ಎಲ್ಲರಿಗೂ ಮೊದಲ ಸಿಹಿ ಸುದ್ದಿಯನ್ನು ತುಂಗಾ ಡ್ಯಾಂ ನೀಡಿದೆ.

ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ಇರುವ ತುಂಗಾ ಡ್ಯಾಂ ತುಂಬಿದೆ. ಡ್ಯಾಂನ ಗರಿಷ್ಠ ಮಟ್ಟ 589.20 ಮೀ ತಲುಪಿದೆ. ಡ್ಯಾಂ ತುಂಬಿದ್ದರಿಂದ ನಿನ್ನೆಯಿಂದ 21 ಕ್ಲಸ್ಟರ್ ಗೇಟ್ ಮೂಲಕ 5000 ರಿಂದ 8000 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬೀಡಲಾಗುತ್ತಿದೆ. ಒಳ ಹರಿವು ಕೂಡಾ 750 ಸಾವಿರ ಕ್ಯೂಸೆಕ್ ಇದೆ. ಈ ಡ್ಯಾಂ ನೀರಿನಿಂದ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಉಪಯೋಗವಾಗಲಿದೆ (19.5 ಮೆಗಾವ್ಯಾಟ್ ಉತ್ಪಾದನೆ ಸಾರ್ಮರ್ಥ್ಯವಿದೆ).

ಜತೆಗೆ ನೀರಾವರಿ ಜಮೀನಿಗೆ ನೀರು ಮತ್ತು ಶಿವಮೊಗ್ಗ ನಗರದ ಜನತೆಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಹಾಲಿನ ನೊರೆಯಂತೆ ಡ್ಯಾಂ ವಾತಾವರಣ ಸಂಪೂರ್ಣವಾಗಿ ಬದಲಾಗಿ ಹೋಗಿದ್ದು, ಲಾಕ್​ಡೌನ್​ ಸಡಿಲಿಕೆಯಿಂದಾಗಿ ಪ್ರವಾಸಿಗರು ತುಂಗಾ ಡ್ಯಾಂನತ್ತ ಮುಖ ಮಾಡಿದ್ದಾರೆ. ಮಳೆಗಾಲದಲ್ಲಿ ಮಾತ್ರ ಇಂತಹ ಸನ್ನಿವೇಶ ನೋಡಲು ಸಿಗುತ್ತಿದೆ. ಹೀಗಾಗಿ ಡ್ಯಾಂ ನಿಂದ ನೀರು ಬಿಡುವುದನ್ನು ಕಣ್ಣು ತುಂಬಾ ನೋಡಿ ಖುಷಿ ಪಡುತ್ತಿದ್ದೇವೆ ಎಂದು ಪ್ರವಾಸಿಗರಾದ ಅನಿಲ್ ತಿಳಿಸಿದ್ದಾರೆ.

ಮಲೆನಾಡಿನ ಹಚ್ಚ ಹಸಿರಿನಿಂದ ಕೂಡಿದ ತಾಣದಲ್ಲಿ ತುಂಗಾ ಭದ್ರಾ, ಶರಾವತಿ ನದಿಗಳು ಸೇರಿದಂತೆ ಲಿಂಗನಮಕ್ಕಿ, ಮಾಣಿ ಪ್ರಮುಖ ಜಲಾಶಯಗಳು ಇಲ್ಲಿವೆ. ಈ ನಡುವೆ ತುಂಗಾ ಡ್ಯಾಂ ಮೊದಲು ಭರ್ತಿಯಾಗಿದೆ. ತುಂಗಾ ನದಿಗೆ ಕಳೆದ ಎರಡು ದಿನಗಳಿಂದ ಸಾವಿರಾರು ಕ್ಯೂಸೆಕ್​ ನೀರನ್ನು ಬಿಡಲಾಗುತ್ತಿದೆ. ಬತ್ತಿ ಹೋಗಿದ್ದ ನದಿಯಲ್ಲಿ ಈಗ ಹರಿಯುವ ನೀರು ಮರುಜೀವ ಕೊಟ್ಟಿದೆ.

ಈ ತುಂಗಾ ತುಂಬಿರುವುದರಿಂದ ಉತ್ತರ ಕರ್ನಾಟಕದ ಹಾವೇರಿ, ಗದಗ ಮತ್ತು ದಾವಣೆಗೆರೆ, ಶಿವಮೊಗ್ಗ ರೈತರಿಗೆ ಕೃಷಿಗೆ ಅನುಕೂಲವಾಗಲಿದೆ. ಈ ವರ್ಷ ಅವರಿಗೆ ನೀರಿನ ಸಮಸ್ಯೆ ಆಗುವುದಿಲ್ಲ. ಡ್ಯಾಂ ನೀರು ಅವಲಂಭಿಸಿಯೇ ಈ ಭಾಗದ ಸಾವಿರಾರು ರೈತರು ನೀರಾವರಿ ಕೃಷಿ ಮಾಡುತ್ತಾರೆ. ತುಂಗೆಯು ಒಂದಡೆ ರೈತರಿಗೆ ಖುಷಿ ಕೊಟ್ಟರೆ ಮತ್ತೊಂದಡೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದಾಳೆ. ಈಗಾಗಲೇ ಕಳೆದ ಎರಡು ಮೂರು ದಿನಗಳಿಂದ ಮಲೆನಾಡಿನಲ್ಲಿ ಮಳೆ ಬೀಳುತ್ತಿರುವುದರಿಂದ ಪ್ರವಾಸಿಗರು ತುಂಬಿದ ತುಂಗಾ ಡ್ಯಾಂ ನೋಡಿ ಸಂತೋಷಪಟ್ಟಿದ್ದಾರೆ ಎಂದು ತುಂಗಾ ಡ್ಯಾಂ ಮುಖ್ಯ ಇಂಜಿನೀಯರ್ ಹರೀಶ್ ಹೇಳಿದ್ದಾರೆ.

ಕಳೆದ ವರ್ಷ ಮಲೆನಾಡಿನಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದವು. ಸದ್ಯ ತುಂಗಾ ಡ್ಯಾಂ ಭರ್ತಿ ಮೂಲಕ ಮೊದಲ ಡ್ಯಾಂ ಭರ್ತಿಯಾಗಿದೆ. ಇದೇ ರೀತಿ ಮುಂಗಾರು ಕೈಹಿಡಿದರೆ ಶಿವಮೊಗ್ಗ ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗಲಿವೆ.

ಇದನ್ನೂ ಓದಿ:

ಶಿವಮೊಗ್ಗ ಜಿಲ್ಲೆಯ ಎರಡು ವಾರ್ಡ್​ ಸೀಲ್​ಡೌನ್ ; ಮಲೆನಾಡು ಭಾಗದ ಜನರಲ್ಲಿ ಹೆಚ್ಚಿದ ಆತಂಕ

ತುಂಗಭದ್ರೆಯಲ್ಲಿ ಶುರುವಾಗಲಿ ಗಂಗಾ ಆರತಿ ಮಾದರಿಯ ಉತ್ಸವ; ನದಿಯ ಸ್ವಚ್ಛತೆಗೆ ಮುಂದಾದ ಹರಿಹರದ ಜನತೆ