ಕುತೂಹಲ ಮೂಡಿಸಿದ ಮಂಡ್ಯ ಸಂಸದೆ ಸುಮಲತಾ ನಡೆ; ಟಿಕೆಟ್ ಮಿಸ್ ಆದರೆ ಪಕ್ಷೇತರವಾಗಿ ಕಣಕ್ಕೆ?

| Updated By: Rakesh Nayak Manchi

Updated on: Mar 07, 2024 | 3:23 PM

ಮಂಡ್ಯ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಒಂದೆಡೆ, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಿಜೆಪಿ ಜೊತೆ ನಿರಂತರ ಮಾತುಕತೆ ನಡೆಸುತ್ತಿದೆ. ಇನ್ನೊಂದೆಡೆ, ಬಿಜೆಪಿ ಟಿಕೆಟ್ ಪಡೆಯಲು ಹಾಲಿ ಸಂಸದೆ ಸುಮಲತಾ ಅವರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ಟಿಕೆಟ್ ಕೈತಪ್ಪಿದರೆ ಪಕ್ಷೇತರವಾಗಿ ಕಣಕ್ಕಿಳಿಯುವ ಸಾಧ್ಯತೆಗಳು ಇವೆ.

ಕುತೂಹಲ ಮೂಡಿಸಿದ ಮಂಡ್ಯ ಸಂಸದೆ ಸುಮಲತಾ ನಡೆ; ಟಿಕೆಟ್ ಮಿಸ್ ಆದರೆ ಪಕ್ಷೇತರವಾಗಿ ಕಣಕ್ಕೆ?
ತಮಗೆ ಟಿಕೆಟ್ ಸಿಗದೇ ಇದ್ದರೆ ಮೈತ್ರಿಯಲ್ಲಿರುತ್ತೀರಾ ಎಂದರೆ ಮಂಡ್ಯ ಸಂಸದೆ ಸುಮಲತಾ ಮೌನ
Follow us on

ಮಂಡ್ಯ, ಮಾ.7: ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಒಂದೆಡೆ, ಜೆಡಿಎಸ್ (JDS) ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಿಜೆಪಿ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದು, ಬಿಜೆಪಿ (BJP) ಹೈಕಮಾಂಡ್ ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇನ್ನೊಂದೆಡೆ, ಬಿಜೆಪಿ ಹೈಕಮಾಂಡ್ ಮೇಲೆ ವಿಶ್ವಾಸ ಇಟ್ಟಿರುವ ಮಂಡ್ಯ (Mandya) ಹಾಲಿ ಸಂಸದೆ ಸುಮಲತಾ (Sumalatha), ತನಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎನ್ನುತ್ತಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅವರ ನಡೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಟಿಕೆಟ್ ವಿಚಾರವಾಗಿ ಸುಮಲತಾ ಅವರು ಇನ್ನೂ ಸ್ಪಷ್ಟ ನಿಲುವಿಗೆ ಬಂದಿಲ್ಲ. ಟಿಕೆಟ್ ನನಗೆ ಸಿಗುತ್ತದೆ ನೋಡಿ ಎನ್ನುವ ಅವರು ಟಿಕೆಟ್ ಸಿಗದಿದ್ದರೆ ಏನು ಅಂದರೆ ಉತ್ತರ ನೀಡದೆ ಮೌನಕ್ಕೆ ಜಾರುತ್ತಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಧರ್ಮ ಪಾಲನೆಗೆ ಜೆಡಿಎಸ್‌ಗೆ ಸ್ವಾಗತ ಎಂದರು. ತಮಗೆ ಟಿಕೆಟ್ ಸಿಗದೇ ಇದ್ದರೆ ಮೈತ್ರಿ ಪಾಲಿಸುತ್ತೀರಾ ಎಂದು ಪ್ರಶ್ನಿಸಿದಾಗ ಸುಮಲತಾ ಮೌನವಾಗಿದ್ದಾರೆ.

ನನ್ನನ್ನು ಒಂದು ಪಕ್ಷಕ್ಕೆ ಕಂಪೇರ್ ಮಾಡಬೇಡಿ ಎಂದು ಹೇಳುವ ಮೂಲಕ ಸುಮಲತಾ ಅವರು ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ. ಹೊಂದಾಣಿಕೆ ಸೀಟು ಹಂಚಿಕೆ‌ ಇರುವುದು ಬಿಜೆಪಿ ಜೆಡಿಎಸ್ ನಡುವೆ. ಇಡೀ ರಾಜ್ಯದಲ್ಲಿ ಸೀಟು ಹಂಚಿಕೆಯ ಬಗ್ಗೆ ಅವರು ಸಭೆ ಮಾಡುತ್ತಾರೆ. ಮಂಡ್ಯ ಟಿಕೆಟ್ ಯಾರಿಗೆ ಎಂದು ಹೈಕಮಾಂಡ್ ಹೇಳಬೇಕು. ನಾನು ಮಂಡ್ಯವನ್ನು ಬಿಟ್ಟು ಹೋಗಲ್ಲ. ಕೆಲವೇ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದರು.

ಇದನ್ನೂ ಓದಿ: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ನಾಯಕರ ಒತ್ತಾಯ, ಅಂತಿಮವಾಗಿ ಕಣಕ್ಕಿಳಿಯುತ್ತಾರಾ ಪುಟ್ಟರಾಜು?

ಮೈತ್ರಿ ಧರ್ಮ ಎನ್ನೋದು ಎರಡು ಪಕ್ಷಗಳ ನಡುವೆ ಇರುವ ಮಾತು. ನಾನು ಈಗ ಬಿಜೆಪಿ ಎಂಪಿ ಆಗೋಕೆ ಆಸೆ ಪಡುತ್ತಿದ್ದೇನೆ. ಮೈತ್ರಿ‌ ಪಾಲನೆಯ ಬಗ್ಗೆ ಮಾತನಾಡುವಷ್ಟು ದೊಡ್ಡ ಮಟ್ಟದಲ್ಲಿ ನಾನೀಲ್ಲ. ನನಗೆ ಹೈಕಮಾಂಡ್ ವಿಶ್ವಾಸದ ಮಾತು ಹೇಳಿದೆ. ಅದಕ್ಕೆ ನಾನು ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದ ಮಾತು ಹೇಳುತ್ತಿದ್ದೇನೆ. ಯಾರು ನಾವು ಅಂದುಕೊಂಡಿದ್ದು ಆಗಬೇಕೆಂದು ಕುಳಿತುಕೊಳ್ಳಲ್ಲ. ಏನು ಬೇಕಾದರೂ ಆಗಲಿ ನೋಡೋಣ. ಬಿಜೆಪಿ ಟಿಕೆಟ್ ಆಗಲಿಲ್ಲ ಅಂದರೆ, ಮುಂದೆ ನೋಡೋಣಾ. ನಾನು ಯಾವುದರಲ್ಲೂ ಪ್ರಶ್ನೆ ಇಟ್ಟಿಲ್ಲ ಎಂದರು.

ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಸಭೆ ನಡೆಸುತ್ತೇನೆ. ತಾಲೂಕುವಾರು ಪ್ರವಾಸ ಮಾಡಿ ಸಭೆ ನಡೆಸುತ್ತೇನೆ. ಜೆಡಿಎಸ್ ಸಭೆ ಬಗ್ಗೆ ಮಾಹಿತಿಯಿಲ್ಲ, ಆಂತರಿಕ ವಿಚಾರ. JDS ಸಭೆ ವಿಚಾರದಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ. ಪಕ್ಷದಿಂದ ಬರುವ ನಿರ್ದೇಶನ ಪಾಲಿಸಲು ನಾನು ಸಿದ್ಧ. ಪಕ್ಷ ನೀಡುವ ಆ ನಿರ್ದೇಶನ ಏನೆಂದು ಕಾಯುತ್ತಿದ್ದೇನೆ ಎಂದು ಸುಮಲತಾ ಹೇಳಿದರು.

ಗಣಿಗ ರವಿಕುಮಾರ್ ವಿರುದ್ಧ ಸುಮಲತಾ ವಾಗ್ದಾಳಿ

ಅಂಡರ್ ಪಾಸ್ ವಿಚಾರವಾಗಿ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಪ್ರತಿಭಟನೆ ವಿಚಾರವಾಗಿ ವಾಗ್ದಾಳಿ ನಡೆಸಿದ ಸುಮಲತಾ, ನಾನು ಕೆಲವೊಂದು ದಾಖಲೆ ಸಹಿತ ಉತ್ತರ ಹೇಳುತ್ತೇನೆ ಎಂದು ಹೇಳಿ ದಾಖಲೆ ಬಿಡುಗಡೆ ಮಾಡಿದರು.

ಹನಕೆರೆ ಗ್ರಾಮದ ಬಳಿ ಅಂಡರ್ ಪಾಸ್​ಗಾಗಿ ಅಡಿಷನಲ್ ಕೆಲಸಕ್ಕಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದಲ್ಲಿ ಪ್ರೋಸೆಸ್ ಆಗಿದೆ. ಅಂತಿಮವಾಗಿ ಸಚಿವರ ಸಹಿ ಒಂದು ಆಗಬೇಕಿದೆ. ಈ ಹಂತದಲ್ಲಿ ಪ್ರತಿಭಟನೆ ಮಾಡುವುದು ಎಷ್ಟು ಸರಿ? ಅವರಿಗೆ ಇದು ಗೊತ್ತಿದೆಯೋ ಇಲ್ಲವೋ ಅಥವಾ ಗೊತ್ತಿದ್ದೂ ಈ ರೀತಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಸುಳ್ಳು ಹೇಳಿ ಈ ರೀತಿ ದಿಕ್ಕು ತಪ್ಪಿಸುವ ಕೆಲಸ ಸರಿಯಲ್ಲ ಎಂದರು.

ನನ್ನ ಹೋರಾಟದಿಂದ ಆಗಿದೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಇರಬಹುದು. ಅರ್ಧಬಂರ್ಧ ತಿಳಿದು ಮಾತಾಡುವುದು ಸರಿಯಲ್ಲ. ನನಗೆ ಕ್ರೆಡಿಟ್ ಏನೂ ಬೇಡ. ನನಗೆ ಅದರ ಅವಶ್ಯಕತೆ ನನಗಿಲ್ಲ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಾಕಷ್ಟು ಸಲ ಭೇಟಿ ಮಾಡಿ ಹಲವು ಬೇಡಿಕೆ ಇಟ್ಟಿದ್ದೆ. ಅದರ ಫಲವಾಗಿ ಅನುಮೋದನೆ ಸಿಕ್ಕಿದೆ. ಗಡ್ಕರಿ, ಬಿಜೆಪಿ ಸರ್ಕಾರ ಸಾಕಷ್ಟು ಹೆದ್ದಾರಿ ಅಭಿವೃದ್ಧಿ ಮಾಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ರಸ್ತೆ ಆಗಿದೆ. ಇದರ ಕ್ರೆಡಿಟ್ ಬಿಜೆಪಿಗೆ ಕೊಡಲು ಕಾಂಗ್ರೆಸ್‌ನವರು ಸಿದ್ಧರಿಲ್ಲ. ಹೀಗಾಗಿ ಈ ರೀತಿಯ ಹೋರಾಟ ಮಾಡುತ್ತಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ