ಮೇಲುಕೋಟೆ ಚೆಲುವನಾರಾಯಣನ ಸನ್ನಿಧಿಯಲ್ಲಿ ಸಂಸದೆ ಸುಮಲತಾ ಸವಾಲು ಸ್ವೀಕರಿಸಿದ ಜೆಡಿಎಸ್ ಶಾಸಕ ಪುಟ್ಟರಾಜು
ಚೆಲುವನಾರಾಯಣನ ಸನ್ನಿಧಿಗೆ ಆಗಮಿಸಿ ದೇವರ ದರ್ಶನ ಪಡೆದು ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಶಾಸಕ ಪುಟ್ಟರಾಜು, ಸುಮಲತಾ ಅವರ ಸವಾಲು ಸ್ವೀಕರಿಸಿದ್ದಾರೆ.

ಮಂಡ್ಯ: ಶಾಸಕರ ವಿರುದ್ಧ ಸಂಸದೆ ಸುಮಲತಾ(Sumalatha Ambareesh) ಕಮಿಷನ್ ಆರೋಪ ಮಾಡಿದ್ದು ಮಂಡ್ಯ JDS ಶಾಸಕರಿಗೆ ಸವಾಲು ಹಾಕಿದ್ದರು. ಈ ವಿಚಾರವಾಗಿ ಮೇಲುಕೋಟೆಯಲ್ಲಿ ಇಂದು ಶಾಸಕ ಪುಟ್ಟರಾಜು ಸುದ್ದಿಗೋಷ್ಠಿ ನಡೆಸಿದ್ದಾರೆ.
ಮೇಲುಕೋಟೆ ಚೆಲುವನಾರಾಯಣನ ಸನ್ನಿಧಿಗೆ ಆಗಮಿಸಿ ದೇವರ ದರ್ಶನ ಪಡೆದು ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಶಾಸಕ ಪುಟ್ಟರಾಜು, ಸುಮಲತಾ ಅವರ ಸವಾಲು ಸ್ವೀಕರಿಸಿದ್ದಾರೆ. ಅವರೇ ದಿನಾಂಕ ನಿಗದಿಪಡಿಸಲಿ, ನಾನೇ ಅಲ್ಲಿಗೆ ಬರುತ್ತೇನೆ. ಅದೇನು ದಾಖಲೆ ಇದೆ ತರಲಿ, ನಾನೂ ದಾಖಲೆ ತರುತ್ತೇನೆ. ಗಾಳಿಯಲ್ಲಿ ಗುಂಡು ಹೊಡೆಯೋದಲ್ಲ ಎದೆಗೆ ಹೊಡಿಯಬೇಕು ಎಂದು ಸಂಸದೆ ಸುಮಲತಾ ವಿರುದ್ಧ ಶಾಸಕ ಪುಟ್ಟರಾಜು ಸಿಡಿದೆದ್ದಿದ್ದಾರೆ.
ಅಂಬರೀಶ್ ಹೆಂಡ್ತಿ ಎಂದು ಜನ ಇವರನ್ನ ಗೆಲ್ಲಿಸಿರೋದು
ನಟ ಅಂಬರೀಶ್ ಹೆಂಡ್ತಿ ಎಂದು ಜನ ಇವರನ್ನ ಗೆಲ್ಲಿಸಿರೋದು. ಇವರ ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆಯಲ್ಲಿ ಗೆದ್ದಿಲ್ಲ. ಮೂರೂವರೆ ವರ್ಷದಿಂದ ಏನು ಮಾಡಿದ್ದಾರೆ ತೋರಿಸಲಿ. ಬರಿ ಸಂಸತ್ಗೆ ಹೋಗಿ ಕುಳಿತ್ರೆ ಸಾಕಾ. ಜನರ ಕೆಲಸ ಯಾರು ಮಾಡ್ತಾರೆ. ನಮ್ಮ ಬಗ್ಗೆ ಮಾತನಾಡಿದರೆ ಹೀರೋ ಆಗುವ ಬಯಕೆ. ಶಾಸಕನಾಗಿ ನಾನು ಸದನದಲ್ಲಿ ಯಾವ ರೀತಿ ಮಾತನಾಡಿದ್ದೇನೆ ಇತಿಹಾಸ ತೆಗೆದು ನೋಡಲಿ. ಮಾತನಾಡುವುದರಿಂದ ದೊಡ್ಡ ಲೀಡರ್ ಆಗುತ್ತೀನಿ ಅಂದು ಕೊಂಡಿದ್ರೆ ಬಿಡಿ. ಗೌರವದಿಂದ ರಾಜಕಾರಣ ಮಾಡಿ. ನನ್ನ ವ್ಯಕ್ತಿತ್ವ ಅಂಬರೀಶ್ ಅವರಿಗೆ ಗೊತ್ತಿತ್ತು. ನಮ್ಮ ಮನೆ ದುಡ್ಡು ಹಾಕಿ ಅಂಬರೀಶ್ ಅವರಿಗೆ ಚುನಾವಣೆ ಮಾಡಿದ್ದೆ ಎಂದರು. ಇದನ್ನೂ ಓದಿ: Ola: ಸಾಫ್ಟ್ವೇರ್ ತಂಡಗಳಿಂದ 500 ಉದ್ಯೋಗಿಗಳ ವಜಾಗೊಳಿಸಲು ಮುಂದಾದ ಓಲಾ
ಅಂಬರೀಶ್ ಹಾಗೂ ನನ್ನ ಸಂಬಂಧ ಎಂತದ್ದು ಅನ್ನೋದನ್ನ ರಾಕ್ ಲೈನ್ ಕೇಳಿ. ಅಂಬಿ ಅವರ ಕಡೇ ದೀಪಾವಳಿಯನ್ನು ನಾನು ಅವರ ಜೊತೆ ಆಚರಿಸಿದ್ದೇನೆ. ಅಂಬರೀಶ್ ಕುಟುಂಬ ಸೇರಿದಂತೆ ಜಿಲ್ಲೆಯ ಎಲ್ಲಾ ರಾಜಕಾರಣಿಗಳು ಮೂಡಾ ಸೈಟ್ ಪಡೆದಿದ್ದಾರೆ. ಈ ವಿಚಾರವಾಗಿ ನನ್ನ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯ ಹೊರ ದೇಶಕ್ಕೆ ಹೋಗುವುದಾದರೆ ಅನುಮತಿ ಪಡೆಯುವಂತೆ ಹೇಳಿದೆ. ನನ್ನ ದಂತ ಚಿಕಿತ್ಸೆಗೆ ವಿದೇಶಕ್ಕೆ ಹೋಗಲು ಅನುಮತಿ ಕೇಳಿದ್ದೆ. ದಾಖಲೆಗಳಿದ್ರೆ ತರಲಿ, ಅವರ ವಿರುದ್ಧ ನಮ್ಮ ಬಳಿಯೂ ದಾಖಲೆಗಳಿವೆ. ಅವರ ಕುಟುಂಬವೂ ಮೂಡಾ ಸೈಟ್ ಪಡೆದಿದೆ ಅಲ್ವಾ.? ಚುನಾವಣೆ ಬಂದಾಗಲೆಲ್ಲಾ ಈ ಸೈಟ್ ವಿಚಾರ ತೆಗೆಯುತ್ತಾರೆ. ಇದು ದೊಡ್ಡ ಷಡ್ಯಂತ್ರ.
ಲಘು ಮಾತು ಸಂಸದೆ ಸುಮಲತಾರಿಗೆ ಶೋಭೆ ತರುವುದಿಲ್ಲ
ಚೆಲುವನಾರಾಯಣನ ಸನ್ನಿಧಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಮೂಡಾ ಸೈಟ್ ಹಗರಣದಲ್ಲಿ ನಮ್ಮ ಎಳ್ಳಷ್ಟೂ ಪಾತ್ರವಿಲ್ಲ. ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬರಲಿದೆ. ಅಜಾತ ಶತ್ರು ಅಂಬರೀಶ್ ಅಣ್ಣನ ನೆನೆದು ಸುಮಲತಾ ಕೆಲಸ ಮಾಡಲಿ. ಲಘು ಮಾತು ಅವರಿಗೆ ಶೋಭೆ ತರುವುದಿಲ್ಲ. ನನ್ನ ದುಡಿದ ದೊಡ್ಡಿನಿಂದ ನನ್ನ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಸಂಪಾದನೆಗಿಂತ ನಾನು ಕಳೆದಿದ್ದೆ ಹೆಚ್ಚು. ಅವರ ಬಳಿ ದಾಖಲೆಗಳಿದ್ರೆ ತಂದ ದಿನಾಂಕ ನಿಗಧಿ ಮಾಡಲಿ. ನಾನು ಚರ್ಚೆಗೆ ಸಿದ್ಧನಿದ್ದೇನೆ. ನಾನು ಅಧಿಕಾರಕ್ಕೆ, ಕಮಿಷನ್‌ಗೆ ಆಸೆ ಪಟ್ಟಿದ್ದರೆ ಕ್ಷೇತ್ರದಲ್ಲಿ ಉಳಿಯಲು ಸಾಧ್ಯವಿರಲಿಲ್ಲ. ಮೈಶುಗರ್ ಕಾರ್ಖಾನೆ ಪುನರಾರಂಭ ಬಗ್ಗೆ ರೈತರು ಧರಣಿ ಮಾಡಿದ್ರು. ಆದರೆ ಯಾರು ಯಾರಿಗೆ ಕಾರ್ಖಾನೆ ಮಾರಲು ಹೋಗಿದ್ರು ಅನ್ನೋದು ಗೊತ್ತಿದೆ. KRS ಬಿರುಕು ಚರ್ಚೆ ಬಂದಾಗ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದು ಮೊದಲು ನಾನು. ಯಾರ ಬಂಡವಾಳ ಏನೇನು ಅನ್ನೋದು ಗೊತ್ತಿದೆ ಎಂದು ಸುಮಲತಾ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:34 am, Mon, 19 September 22