ಗಂಗಾರತಿ‌ ಮಾದರಿಯಲ್ಲಿ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಆರತಿ: ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ

| Updated By: ಗಣಪತಿ ಶರ್ಮ

Updated on: Jul 22, 2024 | 10:46 AM

ಕೆಆರ್​ಎಸ್ ಜಲಾಶಯಕ್ಕೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದು, ಅದರ ರೂಪುರೇಷೆ ಬಗ್ಗೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ಮಾತಿನ ವಿವರ ಇಲ್ಲಿದೆ.

ಗಂಗಾರತಿ‌ ಮಾದರಿಯಲ್ಲಿ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಆರತಿ: ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ
ಕೆಆರ್​ಎಸ್ ಜಲಾಶಯ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್
Follow us on

ಮಂಡ್ಯ, ಜುಲೈ 22: ಗಂಗಾರತಿ‌ ಮಾದರಿಯಲ್ಲಿ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸೋಮವಾರ ಹೇಳಿದರು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್​ಎಸ್ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, 25 ಜನರ ತಂಡ ಕಳುಹಿಸಿ ನಂತರ ವರದಿ ಕೊಡುತ್ತಾರೆ. ಆನಂತರ ಕಾವೇರಿ ಆರತಿ ಕಾರ್ಯಕ್ರಮ ಮಾಡುತ್ತೇವೆ . ಧಾರ್ಮಿಕ ದತ್ತಿ ಇಲಾಖೆ, ಕಾವೇರಿ ನೀರಾವರಿ ನಿಗಮ ಸೇರಿಕೊಂಡು ಕಾರ್ಯಕ್ರಮ ಮಾಡುತ್ತಾರೆ ಎಂದರು.

ವರುಣನ ಕೃಪೆ, ಚಾಮುಂಡೇಶ್ವರಿ ಅನುಗ್ರಹದಿಂದ ಕಾವೇರಿಗೆ ಬಾಗಿನ ಅರ್ಪಿಸುವ ಕಾಲ ದೊರೆತಿದೆ. ಕಳೆದ ವರ್ಷ ಕಷ್ಟದಲ್ಲಿ ಇದ್ದೆವು. ಆದರೂ ರೈತರನ್ನು ಕಾಪಾಡಿದ್ದೇವೆ. ಕಳೆದ ವರ್ಷ 200 ತಾಲೂಕುಗಳಲ್ಲಿ ಬರಗಾಲವಿತ್ತು. ಕಾವೇರಿ ಪ್ರಾಧಿಕಾರ ಆದೇಶದ ಪ್ರಕಾರ 40 ಟಿಎಂಸಿ ಬಿಡಬೇಕಿತ್ತು. ಆದರೆ 20 ಟಿಎಂಸಿ ಬಿಡಲು ಹೇಳಿತ್ತು. ಅಷ್ಟನ್ನೂ ನಾವು ಬಿಡಲಿಲ್ಲ. ಕೆಲವರು ನೀರು ಬಿಟ್ಟಿದ್ದೇವೆ ಎಂದು ವಾದ ಮಾಡಿದ್ದಾರೆ. ನಾವು ಎಲ್ಲರನ್ನು ಕರೆದು ಚರ್ಚೆ ಮಾಡಿದ್ದೇವೆ. ಆನಂತರ ನೀರು ಬಿಟ್ಟಿದ್ದೇವೆ. 30 ಟಿಎಂಸಿ ನೀರು ತಮಿಳುನಾಡಿಗೆ ತಲುಪಿಸಿದ್ದೇವೆ. ಇನ್ನು ಹತ್ತು ಟಿಎಂಸಿ ನೀರು ಬಿಡಬೇಕು. ಈ ವರ್ಷದ ಕೋಟಾ ಮುಗಿಯುತ್ತದೆ. 50 ಸಾವಿರ ಕ್ಯೂಸೆಕ್ ನೀರು ಹೋಗುತ್ತಿದೆ. ಆದೇಶವನ್ನು ಪಾಲನೆ ಮಾಡಿದ್ದೇವೆ ಎಂದು ಅವರು ಹೇಳಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ 1657 ಕೆರೆಗಳು ಇವೆ. ಎಲ್ಲ ಕೆರೆಗಳನ್ನ ತುಂಬಿಸಲು ಕಾರ್ಯಕ್ರಮ ರೂಪಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಎರಡು ಲಕ್ಷ ಹೆಕ್ಟರ್ ಬಿತ್ತನೆ ಗುರಿ ಹೊಂದಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರದ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ 25 ಕೋಟಿ ರೂ. ಸಾಲ ಕೂಡ ನೀಡಲಾಗುತ್ತಿದೆ. ರೈತರ ಪರವಾಗಿ ನಮ್ಮ ಬದ್ಧತೆ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ರಾಮನಗರ ಚಾಮುಂಡೇಶ್ವರಿ ಕರಗಕ್ಕೆ ಸಿದ್ಧತೆ; ಡಿಸಿಎಂ ಸಿಎಂ ಆಗಲಿ ಎಂದು ಶಕ್ತಿ ದೇವತೆಗೆ ಶಾಸಕನ ಹರಕೆ

‘ಕಾವೇರಿ ಬೃಂದಾವನ ಅಮ್ಯೂಸ್ಮೆಂಟ್ ಪಾರ್ಕ್’

ಕಾವೇರಿ ಬೃಂದಾವನ ಅಮ್ಯೂಸ್ಮೆಂಟ್ ಪಾರ್ಕ್ ಮಾಡಲಾಗುತ್ತದೆ. ಏನು ಯೋಜನೆ ಎಂಬುದು ಮುಂದೆ ಗೊತ್ತಾಗುತ್ತದೆ. ಯಾರೂ ಗಾಬರಿ ಆಗುವುದು ಬೇಡ. ಟೀಕೆ ಟಿಪ್ಪಣಿ ‌ಹಾರ ಹಾಕುವವವರು, ಕಲ್ಲು ಹೊಡೆಯುವವರು ಎಲ್ಲರು ಕೂಡ ಇರುತ್ತಾರೆ. ರಾಜಕಾರಣದಲ್ಲಿ ಇವೆಲ್ಲ ಇರುತ್ತದೆ. ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ. ರಸ್ತೆ ವಿಸ್ತರಣೆ ‌ಮಾಡುತ್ತೇವೆ. ಡ್ಯಾಮ್ ಸುರಕ್ಷತೆಗೆ ಏನು ಬೇಕೋ ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಸಿಎಂ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ