ಬೊಮ್ಮಾಯಿ ಸಿಎಂ ಆಗಿ ರಾಜ್ಯದ ಗೌರವವನ್ನು ಕಾಪಾಡಲಿ, ನೂತನ ಸಿಎಂಗೆ ಅಭಿನಂದನೆ ಸಲ್ಲಿಸಿದ ಡಿ.ಕೆ.ಶಿವಕುಮಾರ್
ಬೊಮ್ಮಾಯಿ ಸಿಎಂ ಆಗಿ ರಾಜ್ಯದ ಗೌರವವನ್ನು ಕಾಪಾಡಲಿ ಎಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಡಿ.ಕೆ.ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಮಂಡ್ಯ: ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಬೊಮ್ಮಾಯಿ ಸಿಎಂ ಆಗಿ ರಾಜ್ಯದ ಗೌರವವನ್ನು ಕಾಪಾಡಲಿ ಎಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನೆರವು ಸಿಕ್ಕಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಹಲವು ಕೆಲಸಗಳು ಆಗಬೇಕಿದೆ. ಮೇಕೆದಾಟು ಅಟೆಕಟ್ಟು ನಿರ್ಮಾಣದ ವಿಚಾರದಲ್ಲಿ ಡ್ಯಾಂ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ ಸೇರಿದಂತೆ ಅನೇಕ ಕೆಲಸಗಳಾಗಬೇಕು. ಸಿಎಂ ಬೊಮ್ಮಾಯಿ ಎಲ್ಲ ಸಂಸದರನ್ನು ಕರೆದೊಯ್ಯಲಿ. ಬೊಮ್ಮಾಯಿ ರಾಜ್ಯದ ಹಿತ ಕಾಪಾಡುವ ವಿಶ್ವಾಸವಿದೆ. ಬಿಎಸ್‌ವೈ ಅವಧಿಯಲ್ಲಿ ಏನೇನೋ ಹೇಳಿಕೆ ನೀಡುತ್ತಿದ್ದರು. ಬಿಜೆಪಿಯಲ್ಲಿ ಶಿಸ್ತು ಕಾಣಿಸುತ್ತಿರಲಿಲ್ಲ, ಈಗ ನೋಡಬೇಕು. ರಾಜೀನಾಮೆ ಘೋಷಣೆ ದಿನ ಬಿಎಸ್‌ವೈ ಕಣ್ಣೀರಾಕಿದರು. ಆ ಕಣ್ಣೀರಿನ ಹಿನ್ನೆಲೆಯನ್ನು ಹೇಳಬೇಕು. ವಿದಾಯದ ಭಾಷಣದಲ್ಲಿ ಬಿಎಸ್‌ವೈ ನೋವು ಹೇಳಿಕೊಂಡಿದ್ದಾರೆ. ಅವರ ಭಾಷಣ ಬಹಳ ಸಂಶಯಕ್ಕೂ ಎಡೆ ಮಾಡಿಕೊಟ್ಟಿದೆ. ಆ ನೋವಿನ ಹಿನ್ನೆಲೆಯನ್ನು ಯಡಿಯೂರಪ್ಪ ಹೇಳಲಿ ಎಂದಿದ್ದಾರೆ.
ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯದ 30ನೇ ನೂತನ ಮುಖ್ಯಮಂತ್ರಿಯಾಗಿ ಬೆಂಗಳೂರಿನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಸವರಾಜ ಬೊಮ್ಮಾಯಿಯವರಿಗೆ ಪ್ರಮಾಣ ವಚನ ಭೋದಿಸಿದ್ದು ದೇವರ ಹೆಸರಿನಲ್ಲಿ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೇವಲ ಮೂರೇ ನಿಮಿಷದಲ್ಲಿ ಕಾರ್ಯಕ್ರಮ ಮುಗಿದಿದೆ. ಈ ಸಮಾರಂಭಕ್ಕೆ ಬಸವರಾಜ ಬೊಮ್ಮಾಯಿ ಕುಟುಂಬಸ್ಥರಾದ ಪತ್ನಿ ಚನ್ನಮ್ಮ, ಪುತ್ರ ಭರತ್, ಪುತ್ರಿ ಆದಿತಿ ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ: ಜನಪರ ಆಡಳಿತದ ಭರವಸೆ ನೀಡಿದ ಬಸವರಾಜ ಬೊಮ್ಮಾಯಿ; ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತ ಏರಿಕೆ