
ಮಂಡ್ಯ, ಸೆಪ್ಟೆಂಬರ್ 08: ಜಿಲ್ಲೆಯ ಮದ್ದೂರು (Maddur) ಪಟ್ಟಣ ಸಂಪೂರ್ಣ ಸ್ಥಬ್ಧವಾಗಿದೆ. ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಭುಗಿಲೆದಿದ್ದು, ಪ್ರತಿಭಟನೆ ಮಾಡಲಾಗಿದೆ. ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ. ಈ ಮಧ್ಯೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy), ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿಗೆ ಕರೆ ಮಾಡಿ, ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು. ಒತ್ತಡಕ್ಕೆ ಮಣಿದರೆ ಖುದ್ದು ನಾನೇ ಮದ್ದೂರಿಗೆ ಬರಬೇಕಾಗುತ್ತೆ ಎಂದು ಖಾರ್ವಾಗಿ ಹೇಳಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಿದ್ದಾರೆಂಬ ಮಾಹಿತಿ ಇದೆ. ಕಳೆದ ವರ್ಷದ ನೆಲಮಂಗಲ ಘಟನೆ ಕೂಡ ನೆನಪಿದೆ. ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಅಂತಹ ವಾತಾವರಣ ಸೃಷ್ಟಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮಸೀದಿ ಕಡೆಯಿಂದ ಕಲ್ಲೆಸೆತ ಮಾಡಲಾಗಿದೆ, 21 ಮಂದಿ ಮುಸ್ಲಿಮರನ್ನು ಬಂಧಿಸಲಾಗಿದೆ: ಸಚಿವ ಚಲುವರಾಯಸ್ವಾಮಿ
ಕುವೆಂಪು ಅವರ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ನಡವಳಿಕೆ, ಅವರ ಆಡಳಿತವೇ ಈ ಘಟನೆಗೆ ಕಾರಣ. ಹಿಂದೂಗಳು ಅಸಮಾಧಾನವಾಗುವ ರೀತಿ ಕಾಂಗ್ರೆಸ್ ಮಾಡುತ್ತಿದೆ. ನಾವು ರಾಜಕೀಯವಾಗಿ ಹೇಳುತ್ತಿಲ್ಲ. ರಾಜ್ಯದ ಹಲವೆಡೆ ಗಲಾಟೆಯಾಗಲು ಕಾಂಗ್ರೆಸ್ ಪಕ್ಷವೇ ಕಾರಣ. ಕಾಂಗ್ರೆಸ್ ಪಕ್ಷದ ಅವನತಿ ಆರಂಭವಾಗುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಮಂಡ್ಯ ಮದ್ದೂರಿನಲ್ಲಿ ಮತ್ತೆ ಕಲ್ಲು ತೂರಾಟ: ಪ್ರತಿಭಟನಾಕಾರರ ಅಟ್ಟಾಡಿಸಿ ಲಾಠಿ ಬೀಸಿದ ಪೊಲೀಸರು, ವಿಡಿಯೋ ನೋಡಿ
ಹಿಂದೆ ಒಂದೆರಡು ಜಿಲ್ಲೆಯಲ್ಲಿ ಸಂಘರ್ಷ ಸೀಮಿತವಾಗಿತ್ತು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಇಡೀ ರಾಜ್ಯಕ್ಕೆ ವ್ಯಾಪಿಸಿದೆ. ಅವರ ಪ್ರತಿಭಟನೆ ನೋಡಿದರೆ ಕಾಂಗ್ರೆಸ್ ಪಕ್ಷದ ಅವನತಿ ಆರಂಭವಾಗಿದೆ ಎಂದು ಅರ್ಥ. ಕಾಂಗ್ರೆಸ್ ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಇದು ಸೆಲ್ಪ್ ಸುಸೈಡ್ ಆಗಲಿದೆ. ಎಸ್, ಡಿಸಿ ಜೊತೆಗೆ ಮಾತನಾಡಿದ್ದೇನೆ ಶಾಂತಿ ಕಾಪಾಡಲು ಕೋರಿದ್ದೇನೆ. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗದಂತೆ, ಜೀವ ಹಾನಿಯಾಗದಂತೆ ಹೋರಾಟ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಇನ್ನು ಇಂದು ಬೆಳಿಗ್ಗೆ ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳಿಂದ ಮತ್ತೆ ಕಲ್ಲು ತೂರಾಟ ಮಾಡಲಾಗಿದೆ. ಹೀಗಾಗಿ ಪೊಲೀಸರು ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಸದ್ಯ ಎರಡು ಕೇಸ್ ದಾಖಲಾಗಿದ್ದು, ಪ್ರಕರಣ ಸಂಬಂಧ 21 ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:50 pm, Mon, 8 September 25