ಮಂಡ್ಯ: ಬೇಬಿ ಬೆಟ್ಟದಲ್ಲಿ ಗಣಿ ಅಕ್ರಮಕ್ಕೆ ಸಿಎಂ ಅಪರ ಕಾರ್ಯದರ್ಶಿ ಸೇರಿ 12 ಅಧಿಕಾರಿಗಳ ಸಾಥ್
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ, ಈ ಹಿಂದೆ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಲೋಕಾಯುಕ್ತ ತನಿಖೆಯ ವರದಿ ಬಹಿರಂಗವಾಗಿದ್ದು, ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಆ ಕುರಿತ ಮಾಹಿತಿ ಇಲ್ಲಿದೆ.
ಮಂಡ್ಯ, ಜುಲೈ 13: ಮಂಡ್ಯದ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆಯಿಂದ ಸಾವಿರಾರು ಕೋಟಿ ನಷ್ಟವಾಗಿರುವುದರ ಜತೆಗೆ ಕೆಆರ್ಎಸ್ ಜಲಾಶಯಕ್ಕೆ ಗಂಡಾಂತರ ಭೀತಿಯೂ ಎದುರಾಗಿತ್ತು. ಇದೀಗ ಮತ್ತೆ ಬೇಬಿ ಬೆಟ್ಟದಲ್ಲಿ ವಿರೋಧದ ನಡುವೆಯೂ ಟ್ರಯಲ್ ಬ್ಲಾಸ್ಗೆ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ, ಗಣಿ ಅಕ್ರಮದ ಕರಾಳತೆಯನ್ನು ಲೋಕಾಯುಕ್ತ ತನಿಖಾ ವರದಿ ಬಿಚ್ಚಿಟ್ಟಿದ್ದು, ಅಕ್ರಮಕ್ಕೆ ಸಿಎಂ ಅಪರ ಕಾರ್ಯದರ್ಶಿ ಸೇರಿ 12 ಅಧಿಕಾರಿಗಳು ಸಾಥ್ ನೀಡಿರುವುದನ್ನು ಬಯಲಿಗೆ ಎಳೆದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಚಿನಕುರುಳಿ, ಹೊನಗಾನಹಳ್ಳಿ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಕೆಲವು ಸರ್ಕಾರಿ ಅಧಿಕಾರಿಗಳ ನೆರವಿನಿಂದ ಅಕ್ರಮ ಗಣಿಗಾರಿಕೆ ನಡೆದಿದೆ. 2003-04ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಅಕ್ರಮ ಗಣಿಗಾರಿಕೆ ನಡೆದಿದೆ. ಅಕ್ರಮ ಗಣಿಗಾರಿಕೆಯಿಂದಾಗಿ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ನಷ್ಟವಾಗಿದೆ ಎಂಬುದು ಅಧೀಕ್ಷಕರಿಗೆ ಲೋಕಾಯುಕ್ತ ಡಿವೈಎಸ್ಪಿ ಸಲ್ಲಿಸಿರುವ ವರದಿಯಿಂದ ಬಹಿರಂಗವಾಗಿದೆ.
ಮಂಡ್ಯ ಡಿಸಿಯಾಗಿದ್ದ ಸಿಎಂ ಅಪರ ಕಾರ್ಯದರ್ಶಿ
ಜೂನ್ 14ರಂದು ಸಲ್ಲಿಸಿರುವ ವರದಿಯಲ್ಲಿ ಸಿಎಂ ಅಪರ ಕಾರ್ಯದರ್ಶಿ ಎಸ್. ಜಿಯಾವುಲ್ಲಾ ಹೆಸರು ಉಲ್ಲೇಖವಾಗಿದೆ. ಮಂಡ್ಯ ಡಿಸಿಯಾಗಿದ್ದ ಜಿಯಾವುಲ್ಲಾ, ಪ್ರಸ್ತುತ ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿಯಾಗಿದ್ದಾರೆ. 12 ಅಧಿಕಾರಿಗಳು ಕರ್ತವ್ಯ ಲೋಪವೆಸಗಿರುವ ಬಗ್ಗೆ ವರದಿಯಲ್ಲಿ ಬಿಡಿ ಬಿಡಿಯಾಗಿ ಉಲ್ಲೇಖಿಸಲಾಗಿದೆ. ಇದೀಗ ದೂರುದಾರ ಕೆಆರ್ ರವೀಂದ್ರ ಲೋಕಾಯುಕ್ತ ಡಿವೈಎಸ್ಪಿ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ವಿರೋಧದ ನಡುವೆಯೂ ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ಗೆ ಮಂಡ್ಯ ಜಿಲ್ಲಾಡಳಿತ ಸಿದ್ಧ; ಏನೆಲ್ಲ ತೊಂದರೆಯಾಗಲಿದೆ ನೋಡಿ
ಅಕ್ರಮ ಗಣಿಗಾರಿಕೆ ವಿರುದ್ಧ 2017ರಲ್ಲಿ ಕೆಆರ್ ರವೀಂದ್ರ ದೂರು ನೀಡಿದ್ದರು. ಪ್ರಕರಣವನ್ನು ಸಿಬಿಐ ಅಥವಾ ಎಸ್‌ಐಟಿ ತನಿಖೆಗೆ ಒಪ್ಪಿಸುವಂತೆ ಅವರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ