ಮಂಡ್ಯ: ಇಲ್ಲಿ ಆಸ್ತಿಗಾಗಿ ತಮ್ಮನ ಕೊಲೆಗೆ ಸುಪಾರಿ ನೀಡಿ ಪ್ರಯಾಗ್​ರಾಜ್ ಕುಂಭಮೇಳದಲ್ಲಿ ಅಣ್ಣನಿಂದ ಪುಣ್ಯಸ್ನಾನ!

| Updated By: Ganapathi Sharma

Updated on: Feb 16, 2025 | 12:44 PM

ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ. ಆಸ್ತಿಗಾಗಿ ಸ್ವಂತ ತಮ್ಮನನ್ನೇ ಹತ್ಯೆ ಮಾಡಲು ಅಣ್ಣನೇ ಐದು ಲಕ್ಷ ರೂಪಾಯಿ ಸುಪಾರಿ ನೀಡಿದ್ದಾನೆ. ಇತ್ತ ಸುಪಾರಿ‌ ಪಡೆದ ಪಾತಕಿಗಳು ತಮ್ಮನ ಹತ್ಯೆ ಮಾಡಿದ್ದರೆ, ಅತ್ತ ಸುಪಾರಿ ನೀಡಿದ ಅಣ್ಣ ಕುಂಭಮೇಳದಲ್ಲಿ ಪುಣ್ಯಸ್ನಾನ ‌ಮಾಡಿ ಪಾಪವನ್ನು ತೊಳೆಯಲು ಮುಂದಾಗಿದ್ದ!

ಮಂಡ್ಯ: ಇಲ್ಲಿ ಆಸ್ತಿಗಾಗಿ ತಮ್ಮನ ಕೊಲೆಗೆ ಸುಪಾರಿ ನೀಡಿ ಪ್ರಯಾಗ್​ರಾಜ್ ಕುಂಭಮೇಳದಲ್ಲಿ ಅಣ್ಣನಿಂದ ಪುಣ್ಯಸ್ನಾನ!
ಸಾಂದರ್ಭಿಕ ಚಿತ್ರ
Follow us on

ಮಂಡ್ಯ, ಫೆಬ್ರವರಿ 16: ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಲಕ್ಷ್ಮೇಗೌಡನದೊಡ್ಡಿ ‌ಗ್ರಾಮದಲ್ಲಿ‌ ಫೆಬ್ರವರಿ 11 ರಂದು ಬೆಳ್ಳಂಬೆಳಗ್ಗೆ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದ ರೈತ ಕೃಷ್ಣೇಗೌಡ (45) ಭೀಕರ ಹತ್ಯೆ ಕೇಸ್, ಕೊನೆಗೂ ಬಯಲಾಗಿದೆ. ಆಸ್ತಿಗಾಗಿ ಮೃತ ಕೃಷ್ಣೇಗೌಡನ ಸಹೋದರನೇ ಸುಪಾರಿ‌ ನೀಡಿ ಹತ್ಯೆ ಮಾಡಿಸಿರುವ ರಹಸ್ಯ ಬಯಲಾಗಿದೆ.

ಅಂದಹಾಗೆ, ಫೆಬ್ರವರಿ 11 ರ ಬೆಳಗ್ಗೆ 6 ಸುಮಾರಿಗೆ ಮನೆಯಿಂದ ಜಮೀನನ ಬಳಿ ಎಮ್ಮೆಗಳನ್ನು ಕಟ್ಟಲು ಹೋಗಿದ್ದ ಕೃಷ್ಣೇಗೌಡರನ್ನು ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಕೂಗಾಟ, ಕಿರುಚಾಟ ಕೇಳಿ ಸ್ಥಳಕ್ಕೆ ಬಂದಿದ್ದ ಸ್ಥಳೀಯರ ಮೇಲೆ ಲಾಂಗ್ ಬೀಸಿದ್ದರು. ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಕೃಷ್ಣೇಗೌಡರ ಹತ್ಯೆ ವಿಚಾರ ಗ್ರಾಮಸ್ಥರ ಆತಂಕಕ್ಕೂ ಕಾರಣವಾಗಿತ್ತು. ಕೊಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆಎಂ ದೊಡ್ಡಿ ಠಾಣೆ ಪೊಲೀಸರು ಕೊನೆಗೆ ಕೊಲೆ ಪ್ರಕರಣವನ್ನು ಭೇದಿಸಿ, ಮೃತ ಕೃಷ್ಣೇಗೌಡನ ಸಹೋದರ ಶಿವನಂಜೇಗೌಡನನ್ನು ಬಂಧಿಸಿದ್ದಾರೆ. ಕೊಲೆಗೆ ಐದು ಲಕ್ಷ ರೂಪಾಯಿ ಸುಪಾರಿ ಪಡೆದಿದ್ದ ಚಂದ್ರಶೇಖರ್, ಸುನೀಲ್, ಉಲ್ಲಾಸ್, ಪ್ರತಾಪ್, ಅಭಿಷೇಕ್, ಶ್ರೀನಿವಾಸ, ಕನಕಪುರ ಮೂಲದ ಹನುಮೇಗೌಡ ಸೇರಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಬಂಧನದ ಬಳಿಕ ಬಯಲಾದ ಸ್ಫೋಟಕ ವಿಚಾರ

ಬಂಧನದ ಬಳಿಕ ಕೊಲೆಯ ಸ್ಫೋಟಕ ವಿಚಾರ ಬೆಳಕಿಗೆ ಬಂದಿದ್ದು, ಆಸ್ತಿ ವಿಚಾರವಾಗಿ ಮೃತನ ಸಹೋದರ ಶಿವನಂಜೇಗೌಡನೇ ಐದು ಲಕ್ಷ ರೂಪಾಯಿ ಸುಪಾರಿ ನೀಡಿ ಹತ್ಯೆ ಮಾಡಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಮಂಡ್ಯ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.

ವ್ಯವಸಾಯ, ಹೈನುಗಾರಿಕೆ ಜೊತೆಗೆ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಕೃಷ್ಣೇಗೌಡ, ಇತ್ತೀಚೆಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಸಾಲದ ಹಣವನ್ನು ಸಹೋದರ ಶಿವನಂಜೇಗೌಡ ತೀರಿಸಿ ಆತನ ಜಮೀನನ್ನು ತನ್ನ ಹೆಂಡತಿ ಹೆಸರಿಗೆ ಬರೆಸಿಕೊಂಡಿದ್ದ. ಜಮೀನು ಬರೆದುಕೊಟ್ಟರೂ ಕೃಷ್ಣೇಗೌಡ ತನ್ನ ಸಹೋದರ ಶಿವನಂಜೇಗೌಡನಿಗೆ ಜಮೀನು ಬಿಟ್ಟುಕೊಟ್ಟಿರಲಿಲ್ಲ. ಜೊತೆಗೆ ತನ್ನ ಸಹೋದರಿಯರನ್ನೇ ಎತ್ತಿಕಟ್ಟಿ ಜಮೀನನ ವಿಚಾರದಲ್ಲಿ ಕೇಸ್ ಹಾಕಿಸಿದ್ದ. ಈ ವಿಚಾರವಾಗಿ ಕೃಷ್ಣೇಗೌಡನ‌ ಮೇಲೆ ಶಿವನಂಜೇಗೌಡನಿಗೆ ಸಾಕಷ್ಟು ಕೋಪವಿತ್ತು. ಈತನನ್ನ ಹೀಗೆ ಬಿಟ್ಟರೇ ಆಗುವುದಿಲ್ಲ ಎಂದು ತಾನು ಆರ್ಚಕನಾಗಿ ಕೆಲಸ ಮಾಡುತ್ತಿದ್ದ ಮದನಹಟ್ಟಿಯಮ್ಮ ದೇವಸ್ಥಾನಕ್ಕೆ ಬರುತ್ತಿದ್ದ ಚಂದ್ರಶೇಖರ್ ಎಂಬಾತನಿಗೆ ಎರಡು ತಿಂಗಳ ಹಿಂದೇಯೆ ಐದು ಲಕ್ಷ ರೂಪಾಯಿ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದಾನೆ.

ಮಂಡ್ಯ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ

ಇನ್ನು ಹತ್ಯೆಯ ಬಗ್ಗೆ ಮೊದಲೇ ತಿಳಿದಿದ್ದ ಆರೋಪಿ ಶಿವನಂಜೇಗೌಡ, ತನ್ನ ಮೇಲೆ ಯಾವುದೇ ಅನುಮಾನ ಬರಬಾರದು ಎಂದು ಕೊಲೆಯಾಗುವ ಹಿಂದಿನ ದಿನವೇ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದ ಎಂದು ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಪತಿಯ ಗುಟ್ಟು ರಟ್ಟು: ಗಂಡನ ಜಿಮ್‌ ಸೆಂಟರ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಅಂದಹಾಗೆ ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿ ಚಂದ್ರಶೇಖರ್, ಎರಡು ತಿಂಗಳಿಂದ ಹತ್ಯೆಗೆ ಸ್ಕೇಚ್ ಹಾಕಿದ್ದ. ತನ್ನ ಜೊತೆಗೆ ಕೆಲ ಯುವಕರನ್ನು ಸೇರಿಸಿಕೊಂಡು, ಕೃಷ್ಣೇಗೌಡನ ಚಲನವಲನವನ್ನು ಶಿವನಂಜೇಗೌಡನ ಬಳಿ ಪಡೆದು ಫೆಬ್ರವರಿ 9 ರಂದೇ ಬೆಳಗ್ಗೆ ಹತ್ಯೆಗೆ ಮುಂದಾಗಿದ್ದರು. ಆದರೆ ಅಂದು ದೇವಸ್ಥಾನದ ಬಳಿ ಭಕ್ತರು ಇದ್ದ ಕಾರಣ ಹತ್ಯೆ ಮಾಡಿರಲಿಲ್ಲ.

ಒಟ್ಟಾರೆ ಆಸ್ತಿಗಾಗಿ ಸಹೋದರರನ್ನೇ ಭೀಕರವಾಗಿ ಹತ್ಯೆ ಮಾಡಿಸಿದ ಅಣ್ಣ ಸೇರಿ ಎಂಟು ಬಂಧಿಯನ್ನು ಕೆಎಂ ದೊಡ್ಡಿ ಠಾಣೆ ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ