ಮಂಡ್ಯ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಸಾವು: ಮೂವರು ಎಎಸ್ಐಗಳು ಸಸ್ಪೆಂಡ್
ಮಂಡ್ಯ ನಗರದಲ್ಲಿ ಭಾರೀ ದುರ್ಘಟನೆ ಸಂಭವಿಸಿದ್ದು, ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದಿಂದ 3 ವರ್ಷದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರಂತ ನಡೆದಿದೆ. ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರ ಮುಂದೆ ಗಾಡಿ ನಿಲ್ಲಸಲು ಹೋಗಿ ಆಯತಪ್ಪಿ ಬಿದ್ದು, ರಿತೀಕ್ಷ ಎಂಬ ಮಗುವೊಂದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮೂವರು ಎಎಸ್ಐಗಳನ್ನು ಸಸ್ಪೆಂಡ್ ಮಾಡಲಾಗಿದೆ.

ಮಂಡ್ಯ, (ಮೇ 26): ಮಂಡ್ಯ ಟ್ರಾಫಿಕ್ ಪೊಲೀಸರ (Mandya Traffic Police) ಎಡವಟ್ಟಿನಿಂದ ಮೂರು ವರ್ಷದ ಮಗು ಮೃಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಎಸ್ಐಗಳನ್ನು ಅಮಾನತು ಮಾಡಲಾಗಿದೆ.ಮಗು ಸಾವಿಗೆ ಮಂಡ್ಯ (Mandya) ಟ್ರಾಫಿಕ್ ಪೊಲೀಸರು ಕಾರಣವೆಂದು ಕುಟುಂಬಂಸ್ಥರು ಹೆದ್ದಾರಿಯಲ್ಲಿ ಪ್ರತಿಭಟನೆ ಕುಳಿತ್ತಿದ್ದು, ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಲ್ಮೆಟ್ ತಪಾಸಣೆ ಮಾಡುತ್ತಿದ್ದ ಮೂವರು ಎಎಸ್ಐಗಳನ್ನು ಅಮಾನತು ಮಾಡಿದ್ದಾರೆ. ಈ ಬಗ್ಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಟಿವಿ9ಗೆ ಮಾಹಿತಿ ನೀಡಿದ್ದಾರೆ. ASIಗಳಾದ ಜಯರಾಮ್, ನಾಗರಾಜ್, ಗುರುದೇವ್ ಅಮಾನತುಗೊಂಡವರು.
ಮದ್ದೂರು ತಾಲ್ಲೂಕಿನ ಗೊರವನಹಳ್ಳಿಗೆ ಸೇರಿದ ಅಶೋಕ್ ಮತ್ತು ವಾಣಿ ದಂಪತಿ, ತಮ್ಮ ಮಗಳು ಹೃತೀಕ್ಷಗೆ (3 ವರ್ಷ) ನಾಯಿ ಕಚ್ಚಿದ್ದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು.ಈ ವೇಳೆ ಮಂಡ್ಯ ನಗರದ ನಂದ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆಗಾಗಿ ಬೈಕ್‌ಅನ್ನು ಅಡ್ಡಗಟ್ಟಿದ್ದಾರೆ. ಏಕಾಏಕಿ ಹಠಾತ್ ಅಡ್ಡಗಟ್ಟಿದ ಪರಿಣಾಮ, ಅಶೋಕ್ ಚಾಲನೆ ಮಾಡುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದಿನಿಂದ ಬಂದ ಟೆಂಪೋ ಮಗು ಹೃತೀಕ್ ಮೇಲ ಹರಿದಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಇದರಿಂದ ಸಿಡಿದೆದ್ದ ಕುಟುಂಬಸ್ಥರು ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದು, ಹೆದ್ದಾರಿಯಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆಗಿಳಿದಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅವರು ಸ್ಥಳದಲ್ಲಿ ಇದ್ದ ಮೂವರು ಎಎಸ್ಐಗಳನ್ನು ಸಸ್ಪೆಂಡ್ ಮಾಡಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲೊಂದು ಮನಕಲಕುವ ಘಟನೆ: ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದ ಮಗು ಸಾವು
ಕಣ್ಣೆದುರಲ್ಲೇ ಸಾವನ್ನಪ್ಪಿದ ಮಗುವನ್ನು ಪೋಷಕರು ರಸ್ತೆಯ ಮಧ್ಯೆ ಮಡಿಲಲ್ಲಿ ಇಟ್ಟುಕೊಂಡು ಗೋಳಾಡಿದ್ದಾರೆ. ಇನ್ನು ಈ ದೃಶ್ಯವನ್ನು ಕಂಡು ಕಂಡ ಸಾರ್ವಜನಿಕರು ಮಮ್ಮಲ ಮರುಗಿದ್ದು, ಪೊಲೀಸರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಘಟನೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ಸಂಚಾರಕ್ಕೂ ತೊಂದರೆಯಾಯಿತು. ಇನ್ನು ಮೃತ ಮಗು ಹೃತೀಕ್ಷ ಸಾವು ಸಂಬಂಧ ಮಂಡ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಘಟನೆ ನಡೆದ ಬಳಿಕ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಪ್ರತಿಕ್ರಿಯಿಸಿ, ನಾನು ಸಂತ್ರಸ್ತರನ್ನು ಭೇಟಿಯಾಗಿ ಮಾತನಾಡುತ್ತೇನೆ. ಘಟನೆಗೆ ಕಾರಣರಾದ ಪೊಲೀಸರನ್ನು ಅಮಾನತುಗೊಳಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಮಂಡ್ಯ ಎಸ್ಪಿ, ಘಟನೆಗೆ ಕಾರಣರಾದ ಮೂವರು ಪೊಲೀಸರನ್ನು ಅಮಾನತು ಮಾಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಭೇಟಿ
ಇನ್ನು ಪ್ರತಿಭಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದು, ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸಪಟ್ಟರು. ಈ ವೇಳೆ ಮಾತನಾಡಿದ ಅವರು, ಘಟನೆ ವಿಷಾದ ವ್ಯಕ್ತಪಡಿಸುತ್ತೇನೆ. ಕರ್ತವ್ಯದಲ್ಲಿದ್ದ ಮೂವರು ASIಗಳನ್ನ ಅಮಾನತ್ತು ಮಾಡಲಾಗಿದೆ. ಪ್ರಕರಣ ಸಂಬಂಧ ಇಲಾಖಾ ತನಿಖೆ ಮಾಡುತ್ತೇವೆ. ಅಲ್ಲದೇ ಶಾಸಕರ ಜೊತೆ ಮಾತನಾಡಿದ್ದು, ಮಗು ಕುಟುಂಬಕ್ಕೆ ಅಗತ್ಯ ಪರಿಹಾರದ ಭರವಸೆ ನೀಡಿದ್ದಾರೆ ಎಂದು ಮೃತ ಮಗುವಿನ ಪೋಷಕರು, ಪ್ರತಿಭಟನಾಕಾರರಿಗೆ ತಿಳಿಸಿದರು.
25 ಲಕ್ಷ ರೂ.ಪರಿಹಾರ ನೀಡುವಂತೆ ಅಶೋಕ್ ಆಗ್ರಹ
ಇನ್ನು ಈ ಬಗ್ಗೆ ಇತ್ತ ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಮಗುವಿನ ಸಾವಾಗಿದೆ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಇಲ್ಲದೇ ಇರುವುದು ಇದಕ್ಕೆ ನೇರ ಕಾರಣ. ಏಕಾಏಕಿ ಹೋಗಿ ರಸ್ತೆಯಲ್ಲಿ ಅಡ್ಡ ಹಾಕುವ ಕೆಲಸ ಮಾಡುತ್ತಾರೆ. ಪೊಲೀಸ್ ಕೈ ತಗುಲಿ ಕೆಳಗೆ ಬಿದ್ದು ಮಗು ಮೃತಪಟ್ಟಿದೆ ಎಂಬ ಮಾಹಿತಿ ನನಗೆ ಬಂದಿದೆ.ಪೊಲೀಸರಿಂದಲೇ ಆ ಮಗು ಮೃತಪಟ್ಟಿದೆ. ಹೀಗಾಗಿ ರಾಜ್ಯ ಸರ್ಕಾರ ಮಗುವಿನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:33 pm, Mon, 26 May 25







