ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರುವು: ಗ್ರಾಮಸ್ಥರು-ಸರ್ಕಾರದ ನಡುವೆ ಜಟಾಪಟಿ ಏಕೆ? ಇಲ್ಲಿದೆ ಕಾರಣ

| Updated By: ವಿವೇಕ ಬಿರಾದಾರ

Updated on: Jan 28, 2024 | 2:11 PM

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಗ್ರಾಮದ 108 ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಅಷ್ಟಕ್ಕೂ ಧ್ವಜವನ್ನು ಹಾರಿಸಿದ್ದು ಯಾಕೆ? ಧ್ವಜ ಹಾರಿಸಲು ಅನುಮತಿ ನೀಡಲಾಗಿದಯೇ? ಸರ್ಕಾರ ಮತ್ತು ಗ್ರಾಮಸ್ಥರ ನಡುವೆ ಜಟಾಪಟಿ ಏರ್ಪಟ್ಟಿದ್ದು ಏಕೆ? ಇಲ್ಲಿದೆ ವಿವರ..

ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರುವು: ಗ್ರಾಮಸ್ಥರು-ಸರ್ಕಾರದ ನಡುವೆ ಜಟಾಪಟಿ ಏಕೆ? ಇಲ್ಲಿದೆ ಕಾರಣ
ಮಂಡ್ಯ ಧ್ವಜ ವಿವಾದ
Follow us on

ಮಂಡ್ಯ, ಜನವರಿ 28: ಮಂಡ್ಯ (Mandya) ಜಿಲ್ಲೆಯ ಕೆರಗೋಡು (Keregodu) ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಗ್ರಾಮದ 108 ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದರು. ಈ ಹುನುಮ ಧ್ವಜವನ್ನು (Hanuma Flag) ಪೊಲೀಸರು ತೆರವುಗೊಳಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್​ ಜಾರಿ ಮಾಡಲಾಗಿದೆ. ಅಷ್ಟಕ್ಕೂ ಧ್ವಜವನ್ನು ಹಾರಿಸಿದ್ದು ಯಾಕೆ? ಧ್ವಜ ಹಾರಿಸಲು ಅನುಮತಿ ನೀಡಲಾಗಿದಯೇ? ಸರ್ಕಾರ ಮತ್ತು ಗ್ರಾಮಸ್ಥರ ನಡುವೆ ಜಟಾಪಟಿ ಏರ್ಪಟ್ಟಿದ್ದು ಏಕೆ? ಇಲ್ಲಿದೆ ವಿವರ..

ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಇದರ ನೆನೆಪಾಗಿ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರ ಧ್ವಜಸ್ತಂಭದ ಮೇಲೆ ಹನುಮ ಧ್ವಜ ಹಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಧ್ವಜ ಹಾರಿಸಲು ನಿಶ್ಚಯಿಸಿದ ಜಾಗ ಗ್ರಾಮ ಪಂಚಾಯಿತಿಗೆ ಸೇರಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು 108 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಹನುಮ ಧ್ವಜ ಹಾರಿಸಲು ಅನುಮತಿ ನೀಡಿ  ಎಂದು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.

ಇದಕ್ಕೆ ಗ್ರಾಮ ಪಂಚಾಯಿತಿ “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಹೊರತುಪಡಿಸಿ ಯಾವುದೇ ಧಾರ್ಮಿಕ/ ರಾಜಕೀಯ ಧ್ವಜವನ್ನು ಹಾರಿಸುವಂತಿಲ್ಲವೆಂದು ಹೇಳಿದೆ. ಆದರೂ ಕೂಡ ಗ್ರಾಮಸ್ಥರು ಮತ್ತು ಹಿಂದೂ ಕಾರ್ಯಕರ್ತರು ಹನುಮ ಧ್ವಜ ಹಾರಿಸಿದ್ದಾರೆ. ಹನುಮ ಧ್ವಜ ಹಾರಿಸಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರ ಗ್ರಾಮ ಪಂಚಾಯತ್​ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದೆ. 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಮ ಪಂಚಾಯತ್​ ಸದಸ್ಯರು ನಡಾವಳಿ ರಚಿಸಿ, ವಿವಾದ ಇತ್ಯರ್ಥ ಪಡಿಸಿದ್ದರು.

ಆದರೆ ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ ಇದನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಮೌಖಿಕ ಆದೇಶ ಹೊರಡಿಸಿತ್ತು. ಅದರಂತೆ ಹನುಮ ಧ್ವಜ ತೆರವು ಮಾಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಗ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಅಯೋಧ್ಯೆ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನೆನಪಿಗಾಗಿ ಹಾರಿಸಲಾದ ಹನುಮ ಧ್ವಜ ತೆರವಿಗೆ ಗ್ರಾಮಸ್ಥರ ವಿರೋಧ, ಲಾಠಿ ಚಾರ್ಜ್​​​​

ಗ್ರಾಮಸ್ಥರ ಪ್ರತಿಭಟನೆಯಿಂದ ತೆರಳಿದ್ದ ಅಧಿಕಾರಿಗಳು (ಜ.27) ರ ರಾತ್ರಿ ಹನುಮ ಧ್ವಜ ತೆರವಿಗೆ ಗ್ರಾಮಕ್ಕೆ ಬಂದಿದ್ದಾರೆ. ನಸುಕಿನ ಜಾವ 3 ಗಂಟೆಗೆ ಗ್ರಾಮಕ್ಕೆ ಮಂಡ್ಯ ಎಸಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಆಗಮಿಸಿ ಧ್ವಜ‌ ತೆರವುಗೊಳಿಸಲು ಯತ್ನಿಸಿದ್ದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದರು.

144 ಸೆಕ್ಷನ್​ ಜಾರಿ, ಲಾಠಿ ಚಾರ್ಜ್​

ಇಂದು (ಜ.28) ಗ್ರಾಮಕ್ಕೆ ಮತ್ತೆ ಆಗಮಿಸಿದ ಅಧಿಕಾರಿಗಳು ಮತ್ತು ಪೊಲೀಸರು ಹನುಮ ಧ್ವಜ ತೆರವುಗೊಳಿಸಲು ಮುಂದಾದರು ಈ ವೇಳೆಯೂ ವಿರೋಧ ವ್ಯಕ್ತವಾಯಿತು. ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೆ ಪ್ರತಿಭಟನಾಕಾರರು ಇದಕ್ಕೆ ಬಗ್ಗಲಿಲ್ಲ. ಕೂಡಲೆ ಗ್ರಾಮದಲ್ಲಿ 144 ಸೆಕ್ಷನ್​ ಜಾರಿ ಮಾಡಲಾಯಿತು. ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್​ ಮಾಡಲಾಯಿತು. ಕೊನೆಗೂ ಪೊಲೀಸರು ಹನುಮ ಧ್ವಜವನ್ನು ತೆರವುಗೊಳಿಸಿದರು.

ಇನ್ನು ತೆರವುಗೊಳಿಸಿದ್ದನ್ನು ವಿರೋಧಿಸಿದ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಾ ರಸ್ತೆಯಲ್ಲೇ ಅಡುಗೆ ಮಾಡಲು ಮುಂದಾದರು. ಈ ವೇಳೆ ಪೊಲೀಸರು ಪಾತ್ರೆಯಲ್ಲಿದ್ದ ನೀರನ್ನು ರಸ್ತೆಗೆ ಸುರಿದು ತಡೆದರು. ಇದೇ ವೇಳೆ ಗ್ರಾಮಸ್ಥರು ರವಿಕುಮಾರ್ ಪ್ಲೆಕ್ಸ್​ಗೆ ಚಪ್ಪಲಿ ಹಾರ ಹಾಕಿದ್ದಾರೆ. ಬಳಿಕ ಕೆರಗೋಡು ಗ್ರಾಮಸ್ಥರು, ಹಿಂದೂಪರ ಕಾರ್ಯಕರ್ತರಿಂದ ಸಭೆ ನಡೆಸಿದ್ದು, ಮನೆ-ಮನೆಗೆ ಹನುಮ ಧ್ವಜ ನೀಡಿ, ಪ್ರತಿ ಮನೆಯ ಮೇಲೂ ಹನುಮ ಧ್ವಜ ಹಾರಿಸಲು ನಿರ್ಧರಿಸಿದರು.

ಗ್ರಾಮದಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಪ್ರತಿಭಟನೆಯಲ್ಲಿ ಜೆಡಿಎಸ್​ ಮಾಜಿ ಸಚಿವ ಡಿಸಿ ತಮ್ಮಣ್ಣ, ಮಾಜಿ ಶಾಸಕ ಸುರೇಶ್ ಗೌಡ ಸೇರಿ ಹಲವರು ಭಾಗಿಯಾಗಿದ್ದಾರೆ. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಹಿಂದೂ ಕಾರ್ಯಕರ್ತರು ಧ್ವಜಸ್ತಂಭಕ್ಕೆ ರಾಮನ ಫೆಕ್ಸ್ ಕಟ್ಟಿದರು.

ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನ ಹಾರಿಸುವಂತಿಲ್ಲ

ಈ ಬಗ್ಗೆ ಸಚಿವ ಎನ್​.ಚಲುವರಾಯಸ್ವಾಮಿ ಮಾತನಾಡಿ, ಈ ವಿಚಾರದಲ್ಲಿ ರಾಜಕೀಯ ನಡೆಯುತ್ತಿರುವುದು ಸತ್ಯ. ಇದಕ್ಕೆ ಯಾರು ರಾಜಕಾರಣ ಬೆರಸುತ್ತಿದ್ದಾರೆ ಗೊತ್ತಿಲ್ಲ. ಅಲ್ಲಿ ಯಾರು ಮಧ್ಯಪ್ರವೇಶ ಮಾಡಿದ್ದಾರೆ ಗೊತ್ತಿಲ್ಲ. ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಷ್ಟ್ರಧ್ವಜ ಹಾರಿಸಬಹುದು. ಅದನ್ನ ಹೊರತು ಪಡಿಸಿ ಬೇರೆ ಧ್ವಜ ಹಾರಿಸುವಂತಿಲ್ಲ. ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನ ಹಾರಿಸುವಂತಿಲ್ಲ ಎಂದರು.

ಸ್ಥಳೀಯ ಯುವಕರು ಒಳ್ಳೆಯವರೇ ಆದರೆ ಅವರನ್ನ ದಾರಿ ತಪ್ಪಿಸಲಾಗುತ್ತಿದೆ. ಖಾಸಗಿ ಜಾಗದಲ್ಲಿ ಅಥವಾ ದೇವಾಲಯದ ಮುಂದೆ ಧ್ವಜ ಹಾರಿಸಲು ಅವಕಾಶ ಕೊಡೊಣ. ನಾನು ರಾಮನ ಭಕ್ತ, ನಮ್ಮ ಮನೆ ದೇವರು ವಿಷ್ಣು. ನಾವು ಯಾವುದೇ ಧ್ವಜದ ವಿರೋಧಿಗಳಲ್ಲ. ಪಂಚಾಯ್ತಿಯಲ್ಲಿ ಇದಕ್ಕೆ ಅನುಮೋದನೆ ನೀಡಿದ್ದರೇ ತಪ್ಪು. ಅವರ ವಿರುದ್ಧವೂ ಕ್ರಮ ಆಗುತ್ತೆ. ಇದರಲ್ಲಿ ನಾವಾಗಲಿ, ಸ್ಥಳೀಯ ಶಾಸಕರಾಗಲಿ ರಾಜಕೀಯ ಮಾಡುತ್ತಿಲ್ಲ. ಸಂವಿಧಾನ ವಿರುದ್ಧ ಆಗಿರುವುದರಿಂದ ತೆರವು ಮಾಡಲಾಗಿದೆ ಎಂದರು.

ರಾಜ್ಯ ಸರ್ಕಾರ ಗೂಂಡಾ ವರ್ತನೆ ತೋರಿಸಿದೆ: ವಿಜಯೇಂದ್ರ

ಗ್ರಾಮ ಪಂಚಾಯಿತಿ ನಿರ್ಣಯ ಮಾಡಿ‌ ಹನುಮನ ಧ್ವಜ ಹಾಕಿದೆ. ರಾಜ್ಯ ಸರ್ಕಾರ ಗೂಂಡಾ ವರ್ತನೆ ತೋರಿಸಿದೆ. ದಬ್ಬಾಳಿಕೆ ಮಾಡಿ ಪೊಲೀಸರ ಮೂಲಕ ಧ್ವಜ ಇಳಿಸುವ ಕೆಲಸ ಆಗಿದೆ. ಸರ್ಕಾರ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ಹನುಮಂತನ ಬಾವುಟ ಕಿತ್ತು ಹಾಕಿರುವುದಕ್ಕೆ ಕಾಂಗ್ರೆಸ್ ಕಾರಣ: ಆರ್​ ಅಶೋಕ್​

ಮಂಡ್ಯದಲ್ಲಿ ಅನುಮತಿ ಪಡೆದು 108 ಅಡಿ ಎತ್ತರದ ಧ್ವಜ ಹಾಕಿದ್ದರು. ಹನುಮಂತನ ಬಾವುಟ ಕಿತ್ತು ಹಾಕಿರುವುದಕ್ಕೆ ಕಾಂಗ್ರೆಸ್ ಕಾರಣ. ಬಾಯಲ್ಲಿ ಶ್ರೀರಾಮ ಇದ್ದರೆ ಸಾಲದು, ಮನಸ್ಸಿನಲ್ಲೂ ಇರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸಿನಲ್ಲಿ ಟಿಪ್ಪು‌ಸುಲ್ತಾನ್ ಇದ್ದಾರೆ. ಹಳ್ಳಿ ಹಳ್ಳಿಯಲ್ಲೂ ರಾಮನ ದೇವಸ್ಥಾನ ಕಟ್ಟಿದ್ದೇವೆ ಅಂತಾ ಹೇಳುತ್ತಾರೆ. ಇದು ಹಿಂದೂ ವಿರೋಧಿ ನೀತಿ. ಹನುಮನ ವಿಚಾರದಲ್ಲಿ ಕಾಂಗ್ರೆಸ್ ದ್ವೇಷದ ರಾಜಕೀಯ ಮಾಡುತ್ತಿದೆ. ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿ, 144 ಸೆಕ್ಷನ್ ಹಾಕಿದ್ದಾರೆ. ಕುಕ್ಕರ್​ನಲ್ಲಿ ಬಾಂಬ್ ಇಟ್ಟುಕೊಂಡು ಬಂದವರನ್ನು ಭಾಯ್ ಅಂತಾರೆ. ಇಂತಹ ಕೃತ್ಯ ಮಾಡಿದವರಿಗೆ ಏನು ಹೇಳಬೇಕು ಎಂದು ಕಾಂಗ್ರೆಸ್ ವಿರುದ್ಧ ವಿಪಕ್ಷ ನಾಯಕ ಆರ್​. ಅಶೋಕ್ ಕಿಡಿಕಾರಿದರು.

ಗ್ರಾಮಕ್ಕೆ ಭೇಟಿ ನೀಡಲಿರುವ ಬಿಜೆಪಿ ನಿಯೋಗ

ಇನ್ನು ಮಧ್ಯಾಹ್ನ 2 ಗಂಟೆಗೆ ಬಿಜೆಪಿ ನಿಯೋಗ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಲಿದೆ. ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಅಶ್ವತ್ಥ್​ ನಾರಾಯಣ, ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ಸೇರಿದಂತೆ ಹಲವರು ಭೇಟಿ ನೀಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:03 pm, Sun, 28 January 24