ಮಧ್ಯಪ್ರದೇಶ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಹೋಂ ಗಾರ್ಡ್, ವಾಪಸ್ ಬರುವಾಗ ರೈಲಿನಲ್ಲಿಯೇ ಸಾವು
ಆತ ಒಬ್ಬ ಹೋಮ್ ಗಾರ್ಡ್. ಚುನಾವಣಾ ಕರ್ತವ್ಯಕ್ಕೆಂದು ದೂರದ ಮಧ್ಯಪ್ರದೇಶಕ್ಕೆ ತೆರಳಿದ್ದ. ಚುನಾವಣಾ ಕರ್ತವ್ಯ ಮುಗಿಸಿಕೊಂಡು ವಾಪಾಸ್ ಬರುವಾಗ ಸಾವನ್ನಪ್ಪಿದ್ದಾನೆ. ಮನೆಗೆ ಆಧಾರವಾಗಿದ್ದ ಆತನ ಸಾವಿನ ಸುದ್ದಿ, ಕುಟುಂಬಸ್ಥರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ಮಂಡ್ಯ, ನ.25: ಮಧ್ಯಪ್ರದೇಶದ ಚುನಾವಣಾ ಕರ್ತವ್ಯಕ್ಕೆ ತೆರಳಿ ವಾಪಾಸ್ ರಾಜ್ಯಕ್ಕೆ ಬರುವ ವೇಳೆ ಹೋಮ್ ಗಾರ್ಡ್ ಒಬ್ಬ ಸಾವನ್ನಪ್ಪಿದ್ದಾನೆ. ಮಂಡ್ಯ ಜಿಲ್ಲೆಯ ಮಳವಳ್ಳಿ(Malavalli) ತಾಲೂಕಿನ ಬೆಳಕವಾಡಿ ಗ್ರಾಮದ ಸಿದ್ದು(27) ಎಂಬಾತ ಸಾವನ್ನಪ್ಪಿದ ದುರ್ದೈವಿ. ಇತ ಮಧ್ಯಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 12ರಂದು ರಾಜ್ಯದಿಂದ ನಾಲ್ಕು ಸಾವಿರ ಜನರು ತೆರಳಿದ್ದರು. ಅದರಲ್ಲಿ ಮಂಡ್ಯದಿಂದಲೇ 200 ಜನರು ಹೋಗಿದ್ದು, ಚುನಾವಣೆ ಮುಗಿಸಿಕೊಂಡು ವಾಪಾಸ್ 18ಕ್ಕೆ ಬರಬೇಕಿತ್ತು. ಆದರೆ, ಅಲ್ಲಿನ ರಾಜ್ಯ ಚುನಾವಣಾ ಆಯೋಗದ ಎಡವಟ್ಟಿನಿಂದ ಬರುವುದು ತಡವಾಗಿದೆ.
ಹೀಗಾಗಿ ನಿನ್ನೆ(ನ.24) ರೈಲಿನಲ್ಲಿ ಬರುವಾಗ ಬೆಂಗಳೂರು ಸಮೀಪ ರೈಲಿನಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಬೆಂಗಳೂರಿನ ಜೆಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅದರೆ, ಅಷ್ಟರಲ್ಲಿ ಸಿದ್ದು ಪ್ರಾಣ ಪಕ್ಷಿ ಹಾರಿಹೋಗಿತ್ತು. ಇನ್ನು ಮೃತ ಸಿದ್ದು, ಮಧ್ಯಪ್ರದೇಶದಿಂದ ಹೊರಡುವಾಗಲೇ ಅನಾರೋಗ್ಯಕ್ಕೆ ತುತ್ತಾಗಿದ್ದ ಎನ್ನಲಾಗಿದ್ದು, ರೈಲಿನಲ್ಲಿ ಎರಡು ಬಾರಿ ವಾಂತಿ ಮಾಡಿಕೊಂಡಿದ್ದನಂತೆ. ಸಿದ್ದುಗೆ ತಕ್ಷಣವೇ ಚಿಕಿತ್ಸೆ ಕೊಡಿಸಿದ್ರೆ ಬದುಕುಳಿಯುತ್ತಿದ್ದ, ಆದರೆ, ನಿರ್ಲಕ್ಷ್ಯ ಮಾಡಿದ್ದ ಪರಿಣಾಮ ಸಿದ್ದು ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ:ಚುನಾವಣಾ ಆಯೋಗದ ನಿರ್ಲಕ್ಷ್ಯ; ಮಧ್ಯಪ್ರದೇಶದಲ್ಲಿ ಕರ್ನಾಟಕದ 4 ಸಾವಿರ ಹೋಮ್ಗಾರ್ಡ್ಗಳ ಪರದಾಟ
ಇನ್ನು ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ, ಬಳಿಕ ಸ್ವಗ್ರಾಮ ಬೆಳಕವಾಡಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮಗನನ್ನು ಕಳೆದುಕೊಂಡು ವಯಸ್ಸಾದ ತಾಯಿ ಸಿದ್ದಮ್ಮ ಅವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಕುಟುಂಬಕ್ಕೆ ಆಧಾರವಾಗಿದ್ದ ಸಿದ್ದು ಸಾವಿನಿಂದ ಇಡೀ ಕುಟುಂಬ ಕಂಗಾಲಾಗಿದ್ದು, ಸೂಕ್ತ ಪರಿಹಾರದ ಜೊತೆಗೆ ಪತ್ನಿ ಸೌಮ್ಯಗೆ ಕೆಲಸ ಕೊಡುವಂತೆ ಆಗ್ರಹಿಸಿದ್ದಾರೆ. ಒಟ್ಟಾರೆ ಮಧ್ಯಪ್ರದೇಶದ ಚುನಾವಣೆ ಕರ್ತವ್ಯಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಸಿದ್ದು, ಅನಾರೋಗ್ಯಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಸಾವಿನಿಂದ ಇಡೀ ಕುಟುಂಬ ಕಂಗಾಲಾಗಿದ್ದು, ಸೂಕ್ತ ಪರಿಹಾರ ನೀಡುವ ಮೂಲಕ ಬಡ ಕುಟುಂಬದ ನೆರವಿಗೆ ಧಾವಿಸಿ ಎಂದು ಅಂಗಲಾಚುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ