ಚುನಾವಣಾ ಆಯೋಗದ ನಿರ್ಲಕ್ಷ್ಯ; ಮಧ್ಯಪ್ರದೇಶದಲ್ಲಿ ಕರ್ನಾಟಕದ 4 ಸಾವಿರ ಹೋಮ್ಗಾರ್ಡ್ಗಳ ಪರದಾಟ
ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಕರ್ತವ್ಯಕ್ಕಾಗಿ ಕರ್ನಾಟಕದಿಂದ ನಾಲ್ಕು ಸಾವಿರ ಹೋಮ್ಗಾರ್ಡ್ಗಳನ್ನು ಕಳುಹಿಸಿಕೊಡಲಾಗಿತ್ತು. ಚುನಾವಣೆ 17 ರಂದು ಮುಕ್ತಾಯಗೊಂಡಿದ್ದು, 19 ರಂದು ರಾಜ್ಯಕ್ಕೆ ವಾಪಸ್ ಆಗಬೇಕಿತ್ತು. ಆದರೆ ಚುನಾವಣಾ ಆಯೋಗದ ನಿರ್ಲಕ್ಷ್ಯಕ್ಕೆ ಹೋಮ್ಗಾರ್ಡ್ಗಳು ಮಧ್ಯಪ್ರದೇಶದಲ್ಲಿ ಪರದಾಡುವಂತಾಗಿದೆ.
ಬೆಂಗಳೂರು, ನ.21: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ (Madhya Pradesh Elections 2023) ಕರ್ತವ್ಯಕ್ಕಾಗಿ ಕರ್ನಾಟಕದಿಂದ ನಾಲ್ಕು ಸಾವಿರ ಹೋಮ್ಗಾರ್ಡ್ಗಳನ್ನು (Home Guards) ಕಳುಹಿಸಿಕೊಡಲಾಗಿತ್ತು. ಚುನಾವಣೆ 17 ರಂದು ಮುಕ್ತಾಯಗೊಂಡಿದ್ದು, 19 ರಂದು ಹೋಮ್ಗಾರ್ಡ್ಗಳು ರಾಜ್ಯಕ್ಕೆ ವಾಪಸ್ ಆಗಬೇಕಿತ್ತು. ಆದರೆ ಚುನಾವಣಾ ಆಯೋಗದ ನಿರ್ಲಕ್ಷ್ಯಕ್ಕೆ ಮಂಡ್ಯ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಹೋಮ್ಗಾರ್ಡ್ಗಳು ಮಧ್ಯಪ್ರದೇಶದಲ್ಲಿ ಪರದಾಡುವಂತಾಗಿದೆ.
ಮಧ್ಯಪ್ರದೇಶ ಚುನಾವಣಾ ಕರ್ತವ್ಯಕ್ಕೆ ರಾಜ್ಯದಿಂದ ಕಳುಹಿಸಲಾಗಿದ್ದ 4 ಸಾವಿರ ಹೋಮ್ಗಾರ್ಡ್ಸ್ಗಳಲ್ಲಿ 200 ಕ್ಕೂ ಹೆಚ್ಚು ಮಂದಿ ಮಂಡ್ಯ ಜಿಲ್ಲೆಯವರಾಗಿದ್ದಾರೆ. ಕರ್ನಾಟಕಕ್ಕೆ ಮರಳಲು ರೈಲು ಟಿಕೆಟ್ ಬುಕ್ ಮಾಡದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲುತ್ತದೆ: ಪಿಯೂಷ್ ಗೋಯಲ್
ಅದೇ ರೀತಿ, ಬಳ್ಳಾರಿ ಜಿಲ್ಲೆಯ 400 ಕ್ಕೂ ಅಧಿಕ ಹೋಮ್ಗಾರ್ಡ್ಗಳು ಮಧ್ಯಪ್ರದೇಶದಲ್ಲಿ ಪರದಾಡುತ್ತಿದ್ದಾರೆ. ಚುನಾವಣೆ ಮುಗಿದರು ರಾಜ್ಯಕ್ಕೆ ಕಳುಹಿಸಿಕೊಟ್ಟಿಲ್ಲ. ಮೂರು ದಿನಗಳಿಂದ ಇಲ್ಲಿ ಪರದಾಡುತ್ತಿದ್ದೇವೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ತಮ್ಮನ್ನು ವಾಪಸ್ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಅಲ್ಲದೆ, ರಾಮನರಗ ಜಿಲ್ಲೆಯ 150ಕ್ಕೂ ಹೆಚ್ಚು ಹೋಮ್ಗಾರ್ಡ್ ಮಧ್ಯಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಇವರೆಲ್ಲರೂ ರಾಯಸೇನಾ ಜಿಲ್ಲೆಯಲ್ಲಿ ಇದ್ದು, ವಿಧಾನಸಭಾ ಚುನಾವಣೆ ಮುಗಿದು 3 ದಿನ ಕಳೆದರೂ ವಾಪಸ್ ಕಳಿಸಿಲ್ಲ. ಕೂಡಲೇ ರೈಲಿನ ವ್ಯವಸ್ಥೆ ಮಾಡಿ ರಾಜ್ಯಕ್ಕೆ ಕಳುಹಿಸುವಂತೆ ಪೊಲೀಸ್ ಇಲಾಖೆ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕದ ಮೈಸೂರು, ಬೆಳಗಾವಿ, ರಾಯಚೂರು, ಬೆಳ್ತಂಗಡಿ, ಕಲಗುರಗಿ ಜಿಲ್ಲೆಗಳಿಂದಲೂ ಹೋಮ್ಗಾರ್ಡ್ಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ಕಳುಹಿಸಲಾಗಿತ್ತು. ಸದ್ಯ ನಾಲ್ಕು ಸಾವಿರ ಹೋಮ್ಗಾರ್ಡ್ಗಳು ಮಧ್ಯಪ್ರದೇಶದಲ್ಲೇ ಪರದಾಡುವಂತಾಗಿದ್ದು, ಕೂಡಲೇ ಕರ್ನಾಟಕಕ್ಕೆ ಮರಳಲು ರೈಲಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ