ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ನಾಲ್ವರು ಹೋಂಗಾರ್ಡ್​ಗಳು ಸೇರಿ ಎಂಟು ಜನರಿಗೆ ಗಾಯ

ಕಳೆದ ವರ್ಷ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಸಂಭವಿಸಿದ್ದ ಗಲಭೆಯ ಕಹಿ ನೆನಪು ಇನ್ನೂ ಇರುವಾಗಲೇ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಭಾನುವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಮಸೀದಿಯಿಂದ ಕಲ್ಲು ತೂರಾಟ ಮಾಡಿದ್ದಾರೆ ಎಂದು ಹಿಂದೂಗಳು ಆರೋಪಿಸಿದ್ದು, ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿತ್ತು. ಘಟನೆ ಸಂಬಂಧ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ನಾಲ್ವರು ಹೋಂಗಾರ್ಡ್​ಗಳು ಸೇರಿ ಎಂಟು ಜನರಿಗೆ ಗಾಯ
ಮದ್ದೂರಿನಲ್ಲಿ ಗಣೇಶ ಮೆರವಣಿಗೆ
Updated By: Ganapathi Sharma

Updated on: Sep 08, 2025 | 9:33 AM

ಮಂಡ್ಯ, ಸೆಪ್ಟೆಂಬರ್ 8: ಮಂಡ್ಯದ (Mandya) ಮದ್ದೂರಿನ ಚನ್ನೇಗೌಡ ಬಡಾವಣೆ ನಿವಾಸಿಗಳು ಭಾನುವಾರ ರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆಸುತ್ತಿರುವಾಗ ಕಲ್ಲು ತೂರಾಟ ನಡೆದಿದೆ. ಮಸೀದಿಯಿಂದಲೇ ಲೈಟ್ ಆಫ್ ಮಾಡಿ ಕಲ್ಲು ತೂರಾಟ (Stone Pelting)  ಮಾಡಿದ್ದಾರೆ ಎಂದು ಮೆರವಣಿಗೆಯಲ್ಲಿದ್ದವರು ಆರೋಪಿಸಿದ್ದಾರೆ. ಬೀದಿ ಬೀದಿಯಲ್ಲಿ ಮೆರವಣಿಗೆ ಮೂಲಕ ಬಂದ ಗಣಪ ಇನ್ನೇನು ಮಸೀದಿ ಮುಂದೆ ಹಾದುಹೋಗಬೇಕಿತ್ತು. ಈ ವೇಳೆ, ದಿಢೀರ್ ಲೈಟ್​ ಆಫ್​ ಮಾಡಿ ಮಸೀದಿಯಿಂದ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ದೊಣ್ಣೆಗಳನ್ನು ಕೂಡ ಎಸೆದಿದ್ದಾರೆ ಎಂದು ಸ್ಥಳದಲ್ಲಿದ್ದವರು ದೂರಿದ್ದಾರೆ. ಘಟನೆಯಲ್ಲಿ ನಾಲ್ವರು ಹೋಂಗಾರ್ಡ್​​ಗಳು ಸೇರಿ 8 ಜನರು ಗಾಯಗೊಂಡಿದ್ದಾರೆ.

ಮಸೀದಿ ಬಳಿ ಬಂದಾಗ ಯಾವುದೇ ಘೋಷಣೆ ಕೂಗಬಾರದು. ಮೈಕ್ ಹಾಕಬಾರದು ಎಂದು ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಮೈಕ್‌ ಆಫ್ ಮಾಡಿ ಮೆರವಣಿಗೆ ಮಾಡಲಾಗುತ್ತಿತ್ತು. ಇದಾದ ಬಳಿಕ‌ ಏಕಾಏಕಿ ಲೈಟ್ ಆಫ್ ಮಾಡಿ ಗಣಪತಿ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಾಟ‌ ಮಾಡಲಾಗಿದೆ ಎಂದು ಹಿಂದೂಗಳು ಆರೋಪಿಸಿದ್ದಾರೆ. ನಾವು ಸುಮ್ಮನಿದ್ದರೂ ನಮ್ಮ ಮೇಲೆ ಈ ರೀತಿ ದಾಳಿ ಮಾಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಅವರ ಹಬ್ಬ ಮಾಡಿದಾಗ ನಾವು ಗಲಾಟೆ ಮಾಡಿದ್ದೆವಾ ಎಂದುಹಿಂದೂಗಳು ಪ್ರಶ್ನೆ ಮಾಡಿದ್ದಾರೆ.

ಸ್ಥಳಕ್ಕೆ ಮಂಡ್ಯ ಎಸ್‌ಪಿ ಬಾಲದಂಡಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕಳೆದ ವರ್ಷ ನಾಗಮಂಗಲದಲ್ಲಿ ಗಲಾಟೆ ಸಂಭವಿಸಿತ್ತು. ಇದೀಗ ಮತ್ತೊಂದು ಅದೇ ರೀತಿಯ ಘಟನೆ ಜಿಲ್ಲೆಯಲ್ಲಿ ಮರುಕಳಿಸಿದೆ.

20 ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ

ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಮದ್ದೂರಿನಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.

2 ಪ್ರಕರಣ ದಾಖಲು: ಮಂಡ್ಯ ಎಸ್​ಪಿ ಮಾಹಿತಿ

ತಮಿಳು ಕಾಲೋನಿ ಯುವಕರು ಗಣೇಶ ಪ್ರತಿಷ್ಠಾಪನೆ ಮಾಡಿದ್ದರು. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ರಾಮ್ ರಹೀಮ್ ನಗರದಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಲೈಟ್​ಆಫ್ ಮಾಡಿ ಕಲ್ಲು ತೂರಾಟ ಮಾಡಿದ್ದಾರೆಂಬ ಆರೋಪವಿದೆ. ಘಟನೆ ಸಂಬಂಧ 2 ಪ್ರಕರಣ​ ದಾಖಲು ಮಾಡಿದ್ದೇವೆ. 21 ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಇಬ್ಬರು ಮಾತ್ರ ಚನ್ನಪಟ್ಟಣದವರು, ಉಳಿದೆಲ್ಲರೂ ಸ್ಥಳೀಯರು. ಮಂಗಳವಾರ ಬೆಳಗ್ಗೆವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದೇವೆ ಎಂದು ಮದ್ದೂರಿನಲ್ಲಿ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.

ಮದ್ದೂರಿನಲ್ಲಿ ನಾಳೆ ಬೆಳಗ್ಗೆ ವರೆಗೆ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಎಸ್‌ಪಿ ಮಲ್ಲಿಕಾರ್ಜನ ಬಾಲದಂಡಿ ನೇತೃತ್ವದಲ್ಲಿ ಮದ್ದೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಲಿದ್ದಾರೆ.

ಬಿಜೆಪಿ ಖಂಡನೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಹಬ್ಬಗಳು, ಗಣಪತಿ ಉತ್ಸವ ಹಾಗೂ ಮೆರವಣಿಗೆಗಳನ್ನು ನೆಮ್ಮದಿಯಾಗಿ ಆಚರಿಸಲಾಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಗಣೇಶ ವಿಸರ್ಜನೆಯ ಮೆರವಣಿಗೆಯ ಸಂದರ್ಭದಲ್ಲಂತೂ ಮತಾಂಧ ಪುಂಡರು ಗುಂಪು ಕಟ್ಟಿಕೊಂಡು ಕಲ್ಲು ತೂರುವ ಘಟನೆ ಮಂಡ್ಯ, ಧಾರವಾಡ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ವರದಿಯಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ವೇಳೆ ಇಬ್ಬರ ಸಾವು, ರಾಯಚೂರಿನಲ್ಲಿ ಕಲ್ಲು ತೂರಾಟ

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಿಡಿಗೇಡಿಗಳು ಮೆರವಣಿಗೆ ವೇಳೆ ನಿರಂತರ ಕಲ್ಲು ತೂರಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸಿದ್ದಾರೆ, ಕಲ್ಲು ತೂರಾಟದಲ್ಲಿ ಮಹಿಳೆಯರು ಹಾಗೂ ಪೊಲೀಸರು ತೀವ್ರವಾಗಿ ಗಾಯಗೊಂಡಿರುವ ಘಟನೆ ಅತ್ಯಂತ ಆತಂಕಕಾರಿಯಾಗಿದ್ದು ಬಿಜೆಪಿ ಇದನ್ನು ಅತ್ಯುಗ್ರವಾಗಿ ಖಂಡಿಸುತ್ತದೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿಯೂ ಗಣಪತಿ ಮೂರ್ತಿಯನ್ನು ಮಲಿನಗೊಳಿಸಿರುವ ಸುದ್ದಿಯೂ ವರದಿಯಾಗಿದೆ, ಅಲ್ಪಸಂಖ್ಯಾತರ ಹೆಸರಿನ ಪುಂಡರ ಈ ಪರಿಯ ಅಟ್ಟಹಾಸ ಹಿಂದೂ ಧರ್ಮಿಯರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಭಯಗ್ರಸ್ತ ವಾತಾವರಣವನ್ನುಂಟುಮಾಡಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:56 am, Mon, 8 September 25