ಮಂಡ್ಯ: ತಂದೆಯೇ ಹೆತ್ತ ಮಕ್ಕಳ ಕತ್ತು ಸೀಳಿ ಸುತ್ತಿಗೆಯಿಂದ ಹೊಡೆದು ಕೊಂದ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಂಗಪಟ್ಟಣ ಗ್ರಾ ಠಾಣಾ ಪೊಲೀಸರು ಆರೋಪಿ ತಂದೆಯನ್ನ ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದ ಹೊರವಲಯದಲ್ಲಿರುವ ಚಾಮುಂಡೇಶ್ವರಿ ಫಾರ್ಮ್ ಹೌಸ್ನಲ್ಲಿ ಆರೋಪಿ ಶ್ರೀಕಾಂತ್ ತನ್ನ ಕೈಯಿಂದಲೇ ಕುಟುಂಬದ ಸರ್ವನಾಶ ಮಾಡಿದ್ದ. ಸದ್ಯ ಈಗ ಪುಟ್ಟ ಕಂದಮ್ಮಗಳನ್ನು ಕೊಂದ ದುರುಳ ಜೈಲು ಸೇರಿದ್ದಾನೆ.
ಆರೋಪಿ ಶ್ರೀಕಾಂತ್ ತನ್ನ ಪತ್ನಿ ಲಕ್ಷ್ಮೀ ಮೇಲೆ ಹಲ್ಲೆ ನಡೆಸಿ ಇಬ್ಬರು ಪುಟ್ಟ ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ಬುಧವಾರ ಮಧ್ಯ ರಾತ್ರಿಯೇ ಇಬ್ಬರು ಮಕ್ಕಳನ್ನ ಕೊಂದು ತನ್ನ ಹುಟ್ಟೂರಾದ ಜೇವರ್ಗಿಗೆ ತೆರಳಿದ್ದ. ಮನೆಗೆ ಹೋಗಿ ಒಂಚೂರು ಪಶ್ಚಾತಾಪ ಪಡದೆ ಕಂಠ ಪೂರ್ತಿ ಮದ್ಯ ಸೇವಿಸಿ ಮಲಗಿದ್ದ. ಟಿವಿಯಲ್ಲಿ ಮಕ್ಕಳ ಕೊಲೆ ವಿಚಾರ ತಿಳಿದು ಸ್ವತಃ ಶ್ರೀಕಾಂತ್ ಪೋಷಕರೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಶ್ರೀಕಾಂತ್ನನ್ನು ಬಂಧಿಸಿದ್ದಾರೆ.
ಬಂಧನದ ಬಳಿಕ ಕೊಲೆಗೆ ಕಾರಣವೇನು ಎಂಬುದನ್ನ ಶ್ರೀಕಾಂತ್ ರಿವೀಲ್ ಮಾಡಿದ್ದಾನೆ. ಹೆಂಡತಿ ಯಾವಾಗಲು ಮೊಬೈಲ್ನಲ್ಲಿ ಮಾತನಾಡುತ್ತಿದ್ದಳು. ಯಾರೊಂದಿಗೂ ಗಂಟೆ ಗಟ್ಟಲೇ ಮಾತನಾಡುತ್ತಲೇ ಇದ್ದಳು. ಈ ಹಿನ್ನಲೆ ಪತ್ನಿಯ ಮೇಲೆ ಶಂಕೆ ವ್ಯಕ್ತಪಡಿಸಿ ಶ್ರೀಕಾಂತ್ ಕಿರಿಕ್ ಮಾಡ್ತಿದ್ದ. ಪತ್ನಿ ಲಕ್ಷ್ಮೀಯ ಶೀಲವನ್ನ ಶಂಕಿಸಿ ಪದೆ ಪದೇ ಗಲಾಟೆ ನಡೆಯುತ್ತಿತ್ತು. ಆರೋಪಿ ಶ್ರೀಕಾಂತ್ ಇಬ್ಬರು ಮಕ್ಕಳು ನನ್ನದಲ್ಲವೆಂದು ಮಕ್ಕಳ ಮೇಲೆ ಸದಾ ಕೆಂಡ ಕಾರುತ್ತಿದ್ದನಂತೆ. ಬುಧವಾರ ರಾತ್ರಿ ಮಕ್ಕಳ ಕತ್ತನ್ನ ಸೀಳಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದು ಹಾಕಿದ್ದು ಪತ್ನಿಯನ್ನ ಕೊಲ್ಲಲು ಬರೋಬ್ಬರಿ 6 ಬಾರಿ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾಗಿ ಪೊಲೀಸರ ಬಳಿ ಕಾರಣ ಬಾಯ್ಬಿಟ್ಟಿದ್ದಾನೆ.
ಲಕ್ಷ್ಮೀ ಹಾಗೂ ಶ್ರೀಕಾಂತ್ ಇಬ್ಬರು ಸಹ ಗುಲ್ಬರ್ಗ ಮೂಲದವರು. ಕಳೆದ 7 ವರ್ಷದ ಹಿಂದೆ ಮದುವೆಯಾಗಿದ್ದ ಇವರಿಗೆ ಒಂದು ಗಂಡು, ಒಂದು ಹೆಣ್ಣು ಮಗು ಇತ್ತು. ಮದ್ವೆಯಾದ ಕೆಲ ದಿನಗಳ ಕಾಲ ನೆಟ್ಟಗೆ ಸಂಸಾರ ಮಾಡಿ ಕೊಂಡಿದ್ದ ಶ್ರೀಕಾಂತ ಬರ ಬರುತ್ತಾ ಎಣ್ಣೆಗೆ ದಾಸನಾಗಿದ್ದ. ದಿನ ನಿತ್ಯ ಕೂಲಿ ಕೆಲಸಕ್ಕೆ ಹೋಗುವುದು ಬಂದ ಕೂಲಿ ಹಣದಲ್ಲಿ ಕಂಠಪೂರ್ತಿ ಕುಡಿಯುವುದು ಮನೆಗೆ ಬಂದು ಹೆಂಡ್ತಿ ಮಕ್ಕಳ ಮೇಲೆ ಜಗಳ ತೆಗೆದು ಗಲಾಟೆ ಮಾಡ್ತಾಯಿದ್ದ.
ಇದನ್ನೂ ಓದಿ: Mandya News: ಸುತ್ತಿಗೆಯಿಂದ ಹೊಡೆದು ಇಬ್ಬರು ಪುಟ್ಟ ಕಂದಮ್ಮಗಳನ್ನು ಕೊಂದ ತಂದೆ
ಲಕ್ಷ್ಮೀಯ ಪೋಷಕರು ಕಳೆದ ಮೂರ್ನಾಲ್ಕು ವರ್ಷಗಳಿಂದ ಶ್ರಿರಂಗಪಟ್ಟಣದ ಚಾಮುಂಡೇಶ್ವರಿ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ರು. ಹಾಗಾಗಿ ಪತಿಯ ಕಾಟ ತಾಳಲಾರದೆ ಪತ್ನಿ ಲಕ್ಷ್ಮೀ ಕಳೆದೊಂದು ವಾರದ ಹಿಂದೆ ಜೇವರ್ಗಿಯಿಂದ ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ಗೆ ಬಂದಿದ್ಲು. ಈ ವಿಚಾರ ತಿಳಿದ ಪತಿ ಶ್ರೀಕಾಂತ ಸಹ ಜೇವರ್ಗಿಯಿಂದ ಶ್ರೀರಂಗಪಟ್ಟಣದ ಮರಳಗಾಲ ಗ್ರಾಮಕ್ಕೆ ಬಂದು ಹೆಂಡತಿಯನ್ನ ಸಮಾಧಾನ ಮಾಡಿ ವಾಪಸ್ಸು ಕರೆದುಕೊಂಡು ಹೋಗಿದ್ದ.
ಇನ್ನು ಜೇವರ್ಗಿಗೆ ಹೋದ ಮೇಲೆ ಅಲ್ಲಿಯಾದ್ರು ನೆಟ್ಟಗಿದ್ನ ಎಂದು ನೋಡಿದ್ರು ಅದು ಇಲ್ಲಾ, ಮತ್ತೆ ಕುಡಿಯುವುದು ಮನೆಗೆ ಬಂದು ಕ್ಯಾತೆ ತೆಗೆಯುವುದು ಬಳಿಕ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ. ಗಂಡ ಹೆಂಡಿರ ಜಗಳ ನೋಡಿದ ಶ್ರೀಕಾಂತ್ ರ ತಂದೆ ತಾಯಿ ಮನೆ ಬಿಟ್ಟು ಆಚೆ ಹೋಗಿ ಎಂದು ಹೇಳಿದ್ರು. ಮತ್ತೆ ಅನಿವಾರ್ಯವಾಗಿ ಶ್ರೀಕಾಂತ ಹಾಗೂ ಲಕ್ಷ್ಮೀ ಮತ್ತೆ ಫಾರ್ಮೌ ಹೌಸ್ ಗೆ ಬಂದಿದ್ರು. ಇದೆ ಮಂಗಳವಾರ ಜೇವರ್ಗಿಯಿಂದ ಮರಳಗಾಲ ಗ್ರಾಮಕ್ಕೆ ಬಂದಿದ್ದಾರೆ.
ಗಂಡ ಹೆಂಡತಿಗೆ ತಮ್ಮ ಕೋಣೆ ಬಿಟ್ಟು ಕೊಟ್ಟ ಅತ್ತೆ ಅಂಬಿಕಾ ತೋಟದ ಮತ್ತೊಂದು ಭಾಗಕ್ಕೆ ಹೋಗಿ ಮಲಗಿದ್ರು. ಇನ್ನು ಎಂದಿನಂತೆ ತಾವು ಹೊತ್ತು ಕೊಂಡಿದ್ದ ಹಾಸಿಗೆಯನ್ನ ಮಡಚಿ ಕೋಣೆಗೆ ಇಡಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮದ್ಯದ ನಶೆಯಲ್ಲಿ ಶ್ರೀಕಾಂತನೆ ತನ್ನ ಇಬ್ಬರು ಮಕ್ಕಳ ಕತ್ತನ್ನ ಕೊಯ್ದು ಬಳಿಕ ಸುತ್ತಿಗೆಯಿಂದ ಕೊಂದು ಹಾಕಿದ್ದಾನೆ. ಪತ್ನಿ ಲಕ್ಷ್ಮೀಯ ಮೇಲೆಯೂ ಸುತ್ತಿಗೆಯಿಂದ ದಾಳಿ ನಡೆಸಿದ್ದು ಗಂಭೀರಗಾಯದಿಂದ ಬಳಲುತ್ತಿರುವ ಲಕ್ಷ್ಮೀಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಮಂಡ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ