Fact Check: ಕಿಟಕಿಯಿಂದ ಬಸ್ ಹತ್ತುವಾಗ ಮಹಿಳೆಯ ಕೈ ಕಟ್ ಆಯಿತೇ?: ವೈರಲ್ ವಿಡಿಯೋದ ಸತ್ಯಾಸತ್ಯತೆ ಇಲ್ಲಿದೆ
ಕಿಟಕಿ ಮೂಲಕ ಕೆಎಸ್ಆರ್ ಟಿಸಿ ಬಸ್ ಹತ್ತಲು ಯತ್ನಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಕೈ ಕಟ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಕೆಎಸ್ಆರ್ಟಿಸಿ ಸ್ಪಷ್ಟನೆ ನೀಡಿದೆ.
ಬೆಂಗಳೂರು/ಮಂಡ್ಯ: ರಾಜ್ಯಾದ್ಯಂತ ಮಹಿಳೆಯರಿಗೆ (Women) ಶಕ್ತಿ ಯೋಜನೆ (Shakti Yojana) ಜಾರಿಯಾಗಿದ್ದು, ಬಸ್ಗಾಗಿ ಪ್ರಯಾಣಿಕರು ಹಾಗೂ ಕಂಡಕ್ಟರ್ ಗಲಾಟೆ, ಮಾತಿನ ಚಕಮಕಿಯಾಗುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಅದರಂತೆ ಕಿಟಕಿ ಮೂಲಕ ಕೆಎಸ್ಆರ್ ಟಿಸಿ ಬಸ್ ಹತ್ತಲು ಯತ್ನಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಕೈ ಕಟ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ಹರಿದಾಡುತ್ತಿದೆ. ಬಸ್ ಗದ್ದಲ ಇದ್ದ ಕಾರಣ ಮಹಿಳೆ ಕಿಟಕಿಯಿಂದ ಹತ್ತುವಾಗ ಕೈ ಮುರಿದಿದೆ ಎಂದು ಆರೋಪಿಸಲಾಗಿದೆ. ಆದ್ರೆ, ಇದನ್ನು ಕೆಎಸ್ಆರ್ಟಿಸಿ ಅಲ್ಲಗೆಳೆದಿದ್ದು, ಘಟನೆ ಬಗ್ಗೆ ಸ್ಪಷ್ಟನೆ ನೀಡಿದೆ. ಕಿಟಿಕಿಯಿಂದ ಹತ್ತುವಾಗ ಮಹಿಳೆಯ ಕೈ ಕಟ್ ಆಗಿಲ್ಲ. ಬದಲಿಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಮಹಿಳೆ ಕೈಗೆ ಗಂಭೀರ ಗಾಯವಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಶಕ್ತಿ ಯೋಜನೆಯ ಕೊಡುಗೆಯಿಂದ ಮಹಿಳೆ ಕೈ ಕಳೆದುಕೊಳ್ಳಬೇಕಾಯ್ತು ಎಂದು ನೆಟ್ಟಿಗರು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಕೆಎಸ್ಆರ್ಟಿಸಿ ಸುತ್ತೋಲೆ ಹೊರಡಿಸುವ ಮೂಲಕ ವಿಡಿಯೋ ಬಗ್ಗೆ ಸತ್ಯಾಸತ್ಯತೆ ತಿಳಿಸಿದೆ. ಮಹಿಳೆ ಬಸ್ಸಿನ ಕಿಟಕಿಯಿಂದ ಹತ್ತುವಾಗ ಕೈ ಮುರಿದಿದೆ ಎಂಬಂತೆ ಅಪಪ್ರಚಾರ ಮಾಡಲಾಗುತ್ತಿದೆ ಎಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಬಸ್ ನಲ್ಲಿ ಕಿಟಕಿ ಮೂಲಕ ಹತ್ತುವಾಗ ನಡೆದಿರುವ ಘಟನೆ ಎಂದು ಬಿಂಬಿಸಿ ಅಪಘಾತದ ವಿಡಿಯೋವನ್ನು ತಪ್ಪಾಗಿ ತೋರಿಸುತ್ತಿರುವ ಬಗ್ಗೆ ಸ್ಪಷ್ಟೀಕರಣ. pic.twitter.com/cFBdTPK8K0
— KSRTC (@KSRTC_Journeys) June 25, 2023
ಜೂನ್ 18ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಮರಾಜನಗರ ವಿಭಾಗದ ನಂಜನಗೂಡು ಘಟಕದ ಬಸ್ (KA-10-F-151) ನಂಜನಗೂಡಿನಿಂದ ಟಿ.ನರಸೀಪುರಕ್ಕೆ ತೆರಳುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 1:45 ಗಂಟೆಗೆ ಬಸವರಾಜಪುರದ ಬಳಿಯಲ್ಲಿ ಎದುರಿನಿಂದ ಬಂದ ಲಾರಿ(TN-77-Q-8735)ಯೊಂದು ಬಸ್ಸಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಿಟಕಿ ಬಳಿಯ ಸೀಟಿನಲ್ಲಿ ಕುಳಿತಿದ್ದ ಮಹಿಳೆಯ ಬಲಕೈಗೆ ಗಂಭೀರವಾದ ಗಾಯವಾಗಿದೆ ಎಂದು ಕೆಎಸ್ಆರ್ಟಿಸಿ ಸುತ್ತೋಲೆ ಮೂಲಕ ಸ್ಪಷ್ಟಪಡಿಸಿದೆ.
ಇನ್ನು ಗಾಯಗೊಂಡ ಮಹಿಳೆಯನ್ನು ತಕ್ಷಣವೇ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ, ಉತ್ತಮ ಚಿಕಿತ್ಸೆ ನೀಡಲಾಗಿದೆ. ಲಾರಿ ಚಾಲಕನ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಅಲ್ಲದೇ ಗಾಯಗೊಂಡಿರುವ ಮಹಿಳಾ ಪ್ರಯಾಣಿಕ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ