ಮಂಡ್ಯ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸ್ಫೋಟ ಸಂಭವಿಸಿದೆ. ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಹೋಗಿ ಬಂದಿದ್ದ, ಓಂ ಶಕ್ತಿ ಯಾತ್ರೆಯಲ್ಲಿ ಭಾಗಿಯಾಗಿದ್ದ 43 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೊದಲು, ಸೋಮವಾರ 33 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದೀಗ ಮತ್ತೆ 43 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಂಗಳವಾರ ಯಾತ್ರೆಯಿಂದ 120 ಭಕ್ತರು ಹಿಂದಿರುಗಿದ್ದರು. 120 ಭಕ್ತರನ್ನು ಪ್ರತ್ಯೇಕವಾಗಿರಿಸಿ ಕೊವಿಡ್-19 ಟೆಸ್ಟ್ ಮಾಡಿಸಲಾಗಿದೆ. 120 ಭಕ್ತರ ಪೈಕಿ 43 ಭಕ್ತರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.
ಕೊರೊನಾ ಪಾಸಿಟಿವ್ ಆಗಿರುವ ಮಂದಿಗೆ ಬಾಲಕರ ಹಾಸ್ಟೆಲ್ನ ಕೊವಿಡ್ ಕೇರ್ ಸೆಂಟರ್ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ, ಚಂದಗಾಲು ಗ್ರಾಮದಿಂದ ಓಂಶಕ್ತಿ ಯಾತ್ರೆಗೆ ತೆರಳಿದ್ದವರಿಗೆ ಇದೀಗ ಕೊವಿಡ್ ಸೋಂಕು ದೃಢಪಟ್ಟಿದೆ.
ಚಿಕ್ಕಬಳ್ಳಾಪುರದ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
ಚಿಕ್ಕಬಳ್ಳಾಪುರದ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಮೂವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಇಬ್ಬರು ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ಸ್‌ಪೆಕ್ಟರ್, ಮತ್ತೊಬ್ಬ ಸಿಬ್ಬಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ. ಟಿವಿ9ಗೆ ಆರೋಗ್ಯ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಹರ ಜಾತ್ರೆಗೆ ತಟ್ಟಲಿದೇಯಾ ಕೊರೊನಾ ಭೀತಿ?
ಜನವರಿ 14 ಮತ್ತು 15ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠದಲ್ಲಿ ನಡಯಲಿರುವ ಹರ ಜಾತ್ರೆಗೆ ಕೊರೊನಾ ಭೀತಿ ತಟ್ಟಲಿದೆಯಾ ಎಂಬ ಬಗ್ಗೆ ಪ್ರಶ್ನೆಗಳು ಮೂಡಿವೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಪ್ರಮುಖರ ಭಾಗವಹಿಸುವಿಕೆ ಇರಲಿದೆ ಎಂದು ಹೇಳಲಾಗಿತ್ತು. ಆದರೆ, ಕರ್ನಾಟಕ ಸರ್ಕಾರ ಜಾತ್ರೆ ಹಬ್ಬಗಳಿಗೆ ಅವಕಾಶವಿಲ್ಲ. ಕೊವಿಡ್ ಮಾರ್ಗಸೂಚಿ ಅನುಸರಿಸಿಯೇ ಆಚರಣೆಗೆ ಅವಕಾಶ ಎಂದು ಹೇಳಿದೆ. ಈ ಬಗ್ಗೆ, ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಸಾವಿರಾರು ಜನ ಸೇರುವ ಪಂಚಮಸಾಲಿ ಗುರುಪೀಠದ ಹರ ಜಾತ್ರೆಗೆ ಕೊವಿಡ್ ಬಿಸಿ ತಟ್ಟಲಿರುವ ಅನುಮಾನ ಮೂಡಿದೆ. ಪಂಚಾಮಸಾಲಿ ಸಮಾಜ ಬಾಂಧವರಲ್ಲಿ ಗೊಂದಲ ಶುರುವಾಗಿದೆ.
ವೀಕೆಂಡ್ ಕರ್ಫ್ಯೂಗೆ ಓಲಾ, ಉಬರ್ ಸಂಘದಿಂದ ಬೇಸರ
ವೀಕೆಂಡ್ ಕರ್ಫ್ಯೂಗೆ ಓಲಾ, ಉಬರ್ ಸಂಘದಿಂದ ಬೇಸರ ವ್ಯಕ್ತವಾಗಿದೆ. ಸರ್ಕಾರ ಚಾಲಕರ ಜೀವನದ ಜೊತೆಗೆ ಚೆಲ್ಲಾಟ ಆಡುತ್ತಿದೆ. ರಾಜ್ಯ ಸರ್ಕಾರಕ್ಕೆ ಲಾಕ್ಡೌನ್ ಒಂದೇ ಪರಿಹಾರವಾ? ಹಾಗಾದರೆ ವ್ಯಾಕ್ಸಿನ್ ತಗೊಂಡಿದ್ದು ಪ್ರಯೋಜನವಿಲ್ವಾ? ಆಟೋ, ಟ್ಯಾಕ್ಸಿ ಚಾಲಕರ ಜೀವನ ನಶಿಸಿ ಹೋಗುತ್ತಿದೆ. ಶನಿವಾರ, ಭಾನುವಾರವೇ ಚಾಲಕರಿಗೆ ಹೆಚ್ಚಿನ ಆದಾಯ ಬರುತ್ತಿತ್ತು. ಕರ್ಫ್ಯೂ ಜಾರಿ ಮಾಡಿ ಮತ್ತೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ ಎಂದು ಓಲಾ, ಉಬರ್ ಒಕ್ಕೂಟದ ಅಧ್ಯಕ್ಷ ತನ್ವೀರ್ ಅಸಮಧಾನ ಹೊರಹಾಕಿದ್ದಾರೆ.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಇಂದಿನಿಂದ ಮತ್ತಷ್ಟು ಬಿಗಿಕ್ರಮ
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಇಂದಿನಿಂದ ಮತ್ತಷ್ಟು ಬಿಗಿಕ್ರಮ ಜಾರಿಗೊಳಿಸಲಾಗುವುದು. ಗೋವಾ, ಮಹಾರಾಷ್ಟ್ರ, ಕೇರಳದಿಂದ ಬರುವವರ ಮೇಲೆ ನಿಗಾ ವಹಿಸಲಾಗುವುದು. ಮೂರು ರಾಜ್ಯಗಳಿಂದ ಬರುವ ಪ್ರಯಾಣಿಕರ ತೀವ್ರ ತಪಾಸಣೆ ಮಾಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ನೆಗೆಟಿವ್ ವರದಿ ಇಲ್ಲದೇ ಬರುವ ಪ್ರಯಾಣಿಕರ ಟೆಸ್ಟ್ ಹೆಚ್ಚಳ ಮಾಡಿರುವ ಬಗ್ಗೆ ಹೇಳಿದ್ದಾರೆ.
ನಿನ್ನೆ ಮಹಾರಾಷ್ಟ್ರದಿಂದ ಬಂದ 142 ಪ್ರಯಾಣಿಕರಿಗೆ ಟೆಸ್ಟ್ ಮಾಡಲಾಗಿದೆ. 142ರ ಪೈಕಿ 14 ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಯುಎಸ್ಎ, ಲಂಡನ್, ದುಬೈನಿಂದ ಬಂದವರಲ್ಲಿ ಹೆಚ್ಚು ಕೊರೊನಾ ಕಂಡುಬಂದಿದೆ. ಲಂಡನ್ನಿಂದ ಬರುವ ಪ್ರಯಾಣಿಕರಲ್ಲಿ ಕೊರೊನಾ ಹೆಚ್ಚಳವಾಗಿದೆ. ಇಂದು ಏರ್ಪೋರ್ಟ್ನಲ್ಲಿ 25 ಕೊರೊನಾ ಪ್ರಕರಣ ಪತ್ತೆ ಆಗಿದೆ. ಏರ್ಪೋರ್ಟ್ನಲ್ಲಿ ಜನದಟ್ಟಣೆ ತಡೆಗೆ ಸಿಬ್ಬಂದಿ ನೇಮಿಸುತ್ತೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೋಂ ಐಸೋಲೇಶನ್ ಆಗುವ ಕೊರೊನಾ ರೋಗಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ; ಇಲ್ಲಿದೆ ಸಮಗ್ರ ಮಾಹಿತಿ
ಇದನ್ನೂ ಓದಿ: Bengaluru Metro: ವೀಕೆಂಡ್ ಕರ್ಫ್ಯೂ ವೇಳೆ ಬೆಂಗಳೂರು ಮೆಟ್ರೋ ಸಂಚಾರ ಹೇಗಿರಲಿದೆ? ವಿವರ ಇಲ್ಲಿದೆ