ಹೋಂ ಐಸೋಲೇಶನ್ ಆಗುವ ಕೊರೊನಾ ರೋಗಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ; ಇಲ್ಲಿದೆ ಸಮಗ್ರ ಮಾಹಿತಿ
New Home Isolation Guidelines: ಇವತ್ತು ಬಿಡುಗಡೆ ಮಾಡಿರುವ ಮಾರ್ಗಸೂಚಿ, ಕೊರೊನಾದ ಸೌಮ್ಯ ಗುಣಲಕ್ಷಣಗಳನ್ನು ಹೊಂದಿರುವ ಮತ್ತು ಲಕ್ಷಣರಹಿತ ಸೋಂಕಿತರಿಗೆ ಮಾತ್ರ ಅನ್ವಯ. ಮಾರ್ಗಸೂಚಿಗಳು ಹೀಗಿವೆ..
ದೇಶದಲ್ಲಿ ಮತ್ತೆ ಕೊವಿಡ್ 19 ಕೇಸ್(Covid 19 Cases)ಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಕೊರೊನಾ ಸೋಂಕು ತಗುಲಿದ್ದರೂ, ಸೌಮ್ಯ ಲಕ್ಷಣಗಳು ಇರುವವರು ಮತ್ತು ಲಕ್ಷಣಗಳೇ ಇಲ್ಲದವರು ಮನೆಯಲ್ಲೇ ಐಸೋಲೇಟ್ ಆಗಲು ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಜಾಗತಿಕವಾಗಿ ಕಾಡುತ್ತಿದೆ. ಅದಕ್ಕೆ ಭಾರತವೂ ಹೊರತಾಗಿಲ್ಲ. ಹೀಗೆ ಸೋಂಕಿಗೆ ಒಳಗಾದವರೆಲ್ಲ ಗಂಭೀರ ಸ್ವರೂಪದ ಅನಾರೋಗ್ಯಕ್ಕೀಡಾಗುವುದಿಲ್ಲ. ಅನೇಕರಲ್ಲಿ ಕೊರೊನಾದ ಲಕ್ಷಣಗಳು ಸೌಮ್ಯವಾಗಿರುತ್ತವೆ ಹಾಗೂ ಮತ್ತೊಂದಿಷ್ಟು ಜನರಿಗೆ ಏನೂ ಲಕ್ಷಣಗಳೇ ಇರುವುದಿಲ್ಲ. ಅಂಥವರಿಗೆ ಕಡಿಮೆ ಚಿಕಿತ್ಸೆ ಸಾಕು. ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇರುವುದಿಲ್ಲ. ಈ ಎರಡೂ ವರ್ಗದವರು ಮನೆಯಲ್ಲೇ ಇದ್ದುಕೊಂಡು, ವೈದ್ಯರ ಮಾರ್ಗದರ್ಶನ ಅನುಸಾರ ಕೊರೊನಾವನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗೇ, ವೈದ್ಯಕೀಯ ಸಿಬ್ಬಂದಿ ಅವರನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಆರೋಗ್ಯ ಸಚಿವಾಲಯ ಇಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಅಂದಹಾಗೆ, ಇವತ್ತು ಬಿಡುಗಡೆ ಮಾಡಿರುವ ಮಾರ್ಗಸೂಚಿ, ಕೊರೊನಾದ ಸೌಮ್ಯ ಗುಣಲಕ್ಷಣಗಳನ್ನು ಹೊಂದಿರುವ ಮತ್ತು ಲಕ್ಷಣರಹಿತ ಸೋಂಕಿತರಿಗೆ ಮಾತ್ರ ಅನ್ವಯ. ಸಣ್ಣಪ್ರಮಾಣದಲ್ಲಿ ಉಸಿರಾಟ ತೊಂದರೆ, ಆಕ್ಸಿಜನ್ ಮಟ್ಟ ಶೇ. 93ಕ್ಕಿಂತ ಕಡಿಮೆ ಇದ್ದವರು ಮನೆಯಲ್ಲಿ ಐಸೋಲೇಟ್ ಆಗಬಾರದು. ಹಾಗೊಮ್ಮೆ ಆಗಿದ್ದರೂ ಇಂಥ ತೊಂದರೆ ಕಂಡ ಕ್ಷಣವೇ ಆಸ್ಪತ್ರೆಗೆ ದಾಖಲಾಗಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಹೋಂ ಐಸೋಲೇಶನ್ ಪರಿಷ್ಕೃತ ಮಾರ್ಗಸೂಚಿ ಇಲ್ಲಿದೆ 1. ಮನೆಯಲ್ಲೇ ಐಸೋಲೇಟ್ ಆಗುವ ಸೌಮ್ಯ/ಲಕ್ಷಣ ರಹಿತ ಕೊರೊನಾ ರೋಗಿಗಳಿಗೆ, ಸೋಂಕು ನಿರ್ವಹಣೆಗೆ ಮಾರ್ಗದರ್ಶನ ನೀಡಲು, ಜಿಲ್ಲೆ/ಉಪಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಿ, ಅದರ ನಂಬರ್ನ್ನು ನೀಡಲಾಗುತ್ತದೆ. 2. ಹೀಗೆ ಸೋಂಕು ರಹಿತರು ಮತ್ತು ಸೌಮ್ಯ ಲಕ್ಷಣಗಳಿರುವವರು ಮನೆಯಲ್ಲಿ ಐಸೋಲೇಟ್ ಆಗಲು, ಕ್ವಾರಂಟೈನ್ಗೆ ಒಳಪಡಲು ಅಗತ್ಯ ಸೌಲಭ್ಯಗಳನ್ನು ಹೊಂದಬೇಕು. 3. ಮನೆಯಲ್ಲಿ ಇರುವ ಸೋಂಕಿತರ ಆರೈಕೆಗೆ ನಿಲ್ಲುವವರು 24×7 ಕಾಲವೂ ಅವರ ಮೇಲೆ ನಿಗಾ ಇಡಬೇಕು. ಅಗತ್ಯಗಳನ್ನು ಪೂರೈಸಬೇಕು. ಮುಖ್ಯವಾಗಿ ಈ ಕೇರ್ಟೇಕರ್ಗಳು ಎರಡೂ ಡೋಸ್ ಕೊವಿಡ್ 19 ಲಸಿಕೆ ತೆಗೆದುಕೊಂಡವರು ಆಗಿರಬೇಕು. 4. 60 ವರ್ಷ ಮೇಲ್ಪಟ್ಟವರು, 60 ವರ್ಷ ಮೇಲ್ಪಟ್ಟು ಇತರ ರೋಗಗಳಿಂದ ಬಳಲುತ್ತಿರುವವರು ಕೊರೊನಾ ಸೋಂಕಿಗೆ ಒಳಗಾಗಿ ಅವರಿಗೆ ಸೌಮ್ಯ ಲಕ್ಷಣಗಳಿದ್ದರೆ ಅಥವಾ ಲಕ್ಷಣರಹಿತರಾಗಿದ್ದರೆ, ಅವರು ಒಮ್ಮೆಲೇ ಹೋಂ ಐಸೋಲೇಶನ್ಗೆ ಒಳಗಾಗುವಂತಿಲ್ಲ. ಒಮ್ಮೆ ಸಂಬಂಧಪಟ್ಟ ವೈದ್ಯರ ಬಳಿ ಸಂಪೂರ್ಣ ತಪಾಸಣೆ ಮಾಡಿಸಿಕೊಳ್ಳಬೇಕು. ನಂತರ ಅವರ ಸಲಹೆ ಮೇರೆಗೆ ಮನೆಯಲ್ಲಿ ಐಸೋಲೇಟ್ ಆಗಬೇಕು. 5. ಇಮ್ಯುನೊಕೊಪ್ರೊಮೈಸ್ಡ್ ರೋಗಿಗಳು ಅಂದರೆ ರೋಗ ನಿರೋಧಕ ಶಕ್ತಿಯ ತೀವ್ರ ಕೊರತೆಯಿಂದ ಬಳಲುತ್ತಿರುವವರನ್ನು ಯಾವ ಕಾರಣಕ್ಕೂ ಹೋಂ ಐಸೋಲೇಶನ್ಗೆ ಶಿಫಾರಸ್ಸು ಮಾಡಲಾಗುವುದಿಲ್ಲ. ಹಾಗೊಮ್ಮೆ ಆಗುವುದಾದರೆ ಮುಂಚಿತವಾಗಿ ಅವರ ಆರೋಗ್ಯ ತಪಾಸಣೆ ಮಾಡಬೇಕಾಗುತ್ತದೆ.
ಮನೆಯಲ್ಲಿ ಇರುವ ಸೋಂಕಿತರು ಏನೆಲ್ಲ ಮಾಡಬೇಕು? ಹೊಂ ಐಸೋಲೇಶನ್ಗೆ ಒಳಪಡುವ ಕೊವಿಡ್ 19 ಸೋಂಕಿತರು ಮನೆಯಲ್ಲಿದ್ದುಕೊಂಡು ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದನ್ನೂ ಸಚಿವಾಲಯ ತಿಳಿಸಿದೆ. ಅವು ಹೀಗಿವೆ.. 1. ಕೊರೊನಾ ರೋಗಿಗಳು ಮನೆಯಲ್ಲಿ ಇದ್ದರೂ, ಉಳಿದ ಸದಸ್ಯರ ಸಂಪರ್ಕಕ್ಕೆ ಬರಲೇಬಾರದು. ಅದರಲ್ಲೂ ಮನೆಯಲ್ಲಿರುವ ವೃದ್ಧರು, ಅಸ್ವಸ್ಥರಿಂದ ದೂರ ಇರಬೇಕು. 2. ಐಸೋಲೇಟ್ ಆಗಲು ಆಯ್ಕೆ ಮಾಡಿಕೊಳ್ಳುವ ಕೋಣೆ ಸದಾ ಗಾಳಿಯಾಡುವಂತೆ ಇರಬೇಕು. ಕಿಟಕಿಗಳನ್ನು ತೆರೆದಿಡಬೇಕು. ಇದರಿಂದ ತಾಜಾ ಗಾಳಿ ಸಿಗುತ್ತದೆ. 3. ಹಾಗೇ, ಸೋಂಕಿತರು ಮೂರು ಲೇಯರ್ಗಳ ಮಾಸ್ಕ್ ಧರಿಸಬೇಕು ಮತ್ತು ಪ್ರತಿ 8 ತಾಸುಗಳಿಗೊಮ್ಮೆ ಅದನ್ನು ಬದಲಿಸಬೇಕು. ಹಳೇದನ್ನು ನಾಶ ಮಾಡಬೇಕು. ಬಳಸಿದ ಮಾಸ್ಕ್ಗಳನ್ನು ಬೇಕಾಬಿಟ್ಟಿ ಎಸೆಯುವಂತಿಲ್ಲ. ಅವುಗಳನ್ನು ತುಂಡುತುಂಡಾಗಿ ಕತ್ತರಿಸಿ, ಅದನ್ನು 72 ತಾಸುಗಳ ಕಾಲ ಕಾಗದದ ಬ್ಯಾಗ್ನಲ್ಲಿ ಇಟ್ಟು ನಂತರ ಡಿಸ್ಪೋಸ್ ಮಾಡಬೇಕು. 4. ಸಾಧ್ಯವಾದಷ್ಟು ದ್ರವ ರೂಪದ ಆಹಾರಗಳನ್ನು ತೆಗೆದುಕೊಳ್ಳಬೇಕು. ನೀರನ್ನು ಚೆನ್ನಾಗಿ ಕುಡಿಯಬೇಕು. ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮ ಮಾಡಬೇಕು. ವಿಶ್ರಾಂತಿ ತೆಗೆದುಕೊಳ್ಳಬೇಕು. ಹಾಗೇ, ಸಾಬೂನು ಮತ್ತು ನೀರಿನಿಂದ ಕೈತೊಳೆದುಕೊಳ್ಳುತ್ತಿರಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. 5. ಸೋಂಕಿತರು ತಾವು ಬಳಸಿದ ಪಾತ್ರೆಗಳು ಸೇರಿ ಇನ್ನಿತರ ಯಾವುದೇ ವೈಯಕ್ತಿಕ ವಸ್ತುಗಳನ್ನೂ ಮನೆಯಲ್ಲಿ ಇತರರೊಟ್ಟಿಗೆ ಹಂಚಿಕೊಳ್ಳಬಾರದು. ಮನೆಯ ಉಳಿದ ಜನರೂ ಕೂಡ ಈ ಬಗ್ಗೆ ಗಮನಹರಿಸಬೇಕು. 6. ಪಲ್ಸ್ ಆಕ್ಸಿಮೀಟರ್ಗಳನ್ನು ಇಟ್ಟುಕೊಳ್ಳಿ. ಆಗಾಗ ನಿಮ್ಮ ಆಕ್ಸಿಜನ್ ಮಟ್ಟವನ್ನು ಚೆಕ್ ಮಾಡಿಕೊಳ್ಳಬೇಕು. ಹಾಗೇ ದೇಹದ ಉಷ್ಣತೆಯ ಬಗ್ಗೆಯೂ ಗಮನ ಇರಬೇಕು. ಯಾವುದೇ ಸಣ್ಣ ಲಕ್ಷಣಗಳು ಕಂಡುಬಂದರೂ ನಿಮಗೆ ಕೊಡಲಾದ ಕಂಟ್ರೋಲ್ ರೂಂ ನಂಬರ್ಗೆ ಕರೆ ಮಾಡಬೇಕು.
ಆಸ್ಪತ್ರೆಗೆ ಯಾವಾಗ ದಾಖಲಾಗಬೇಕು? 1.ಬಿಟ್ಟುಬಿಡದಂತೆ ಜ್ವರ ಶುರುವಾದಾಗ (100 ಡಿಗ್ರಿ ಸೆಲ್ಸಿಯಸ್ನಷ್ಟು ಜ್ವರ 3 ದಿನಗಳಾದರೂ ಕಡಿಮೆಯಾಗಿಲ್ಲದಾಗ) 2. ಉಸಿರಾಡಲು ತೊಂದರೆಯಾದಾಗ 3.ಆಕ್ಸಿಜನ್ ಮಟ್ಟ ಕಡಿಮೆಯಾದಾಗ 4. ಎದೆ ಭಾಗದಲ್ಲಿ ನೋವು ಶುರುವಾದರೆ 5. ಅತಿಯಾದ ಆಯಾಸ ಉಂಟಾದರೆ 6. ಮಾನಸಿಕವಾಗಿ ಏನಾದರೂ ಕಿರಿಕಿರಿ, ಗೊಂದಲಗಳು ಹೆಚ್ಚಾದರೆ.
ಇದನ್ನೂ ಓದಿ: KL Rahul: ಕೆಎಲ್ ರಾಹುಲ್ರನ್ನು ಕೆಣಕಿದ ಎಲ್ಗರ್: ನಾಯಕರ ನಡುವೆ ಮಾತಿನ ಚಕಮಕಿ