ಮಂಡ್ಯ: ಮಂಡ್ಯದ ಮಹಿಳಾ ಎಸ್ಪಿ ನೇಮಕಾತಿ ವಿವಾದ ಇನ್ನೂ ಬಗೆಹರಿದಿಲ್ಲ. ದಿನದಿಂದ ದಿನಕ್ಕೆ ಈ ಪ್ರಕರಣದಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ರಾಜಕೀಯ ಒತ್ತಡದಿಂದ ಮಂಡ್ಯದ ನೂತನ ಮಹಿಳಾ ಎಸ್ಪಿ ಸುಮನ್ ಡಿ. ಪನ್ನೇಕರ್ ಅಧಿಕಾರ ವಹಿಸಿಕೊಳ್ಳದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಕಳೆದ 1 ವಾರದಿಂದ ಮಂಡ್ಯ ಎಸ್ಪಿ ಸ್ಥಾನ ಖಾಲಿಯಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಮಂಡ್ಯ ಎಸ್ಪಿ ಅಧಿಕಾರ ಸ್ವೀಕರಿಸಲು ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ.
ಮಂಡ್ಯ ಎಸ್ಪಿ ನೇಮಕ ವಿಚಾರದಲ್ಲಿ ಯಾವುದೇ ಒತ್ತಡವಿಲ್ಲ. ಅನೇಕ ಪೊಲೀಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಅವರಿಗೆ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವುದಕ್ಕೆ ಸಮಯ ಇರುತ್ತದೆ. ಮಂಡ್ಯ ಎಸ್ಪಿ ಸುಮನ್ ಪನ್ನೇಕರ್ ಅಧಿಕಾರ ಸ್ವೀಕರಿಸಲು ಯಾವುದೇ ತಡೆಯಿಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇನ್ನು, ಸಾಮಾಜಿಕ ಜಾಲತಾಣಗಳಲ್ಲಿ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ಹರಾಜಿಗಿದೆ, ಹೆಚ್ಚು ಬಿಡ್ ಕೂಗಿದವರನ್ನು ಸರ್ಕಾರ ನೇಮಿಸಲಿದೆ ಎಂಬ ಪೋಸ್ಟ್ಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಕ್ಕು ಹೋರಾಟಗಾರ ರವೀಂದ್ರ ಈ ಪೋಸ್ಟ್ ಹಾಕಿದ್ದು, ಮಂಡ್ಯ ಎಸ್ಪಿ ಹುದ್ದೆ ಒಂದು ವಾರದಿಂದ ಖಾಲಿಯಿದೆ. ಭ್ರಷ್ಟ ಐಪಿಎಸ್, KSPS ಅಧಿಕಾರಿಗಳಿಗೆ ಸುವರ್ಣಾವಕಾಶ ಸಿಕ್ಕಂತಾಗಿದೆ. ಹೆಚ್ಚು ಬಿಡ್ ಕೂಗಿದವರಿಗೆ ಸರ್ಕಾರ ಎಸ್ಪಿ ಹುದ್ದೆ ನೀಡುತ್ತದಾ? ಎಂದು ಪ್ರಶ್ನೆ ಹಾಕಿದ್ದಾರೆ.
ಅ. 20ರಂದು ಮಂಡ್ಯ ಎಸ್ಪಿ ಡಾ.ಎಂ. ಅಶ್ವಿನಿ ಅವರನ್ನು ವರ್ಗಾವಣೆಗೊಳಿಸಿದ್ದ ಸರ್ಕಾರ ಆ ಜಾಗಕ್ಕೆ ಸುಮನ್ ಡಿ. ಪನ್ನೇಕರ್ ಅವರನ್ನು ನೇಮಕ ಮಾಡಿತ್ತು. ಆದರೆ, ಸುಮನ್ ಡಿ. ಪನ್ನೇಕರ್ ಅವರಿಗೆ ಎಸ್ಪಿ ಆಗಿ ಚಾರ್ಜ್ ತೆಗೆದುಕೊಳ್ಳದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದರು. ಇದರಿಂದ ಕಳೆದ 1 ವಾರದಿಂದ ಖಾಲಿಯಿರುವ ಮಂಡ್ಯ ಎಸ್ಪಿ ಹುದ್ದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರವೀಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಮಂಡ್ಯಕ್ಕೆ ಎಸ್ಪಿ ಇಲ್ಲಾ! ರಾಯಚೂರು ಜಿಲ್ಲೆಗೆ ಜಿಲ್ಲಾಧಿಕಾರಿ ಇಲ್ಲ: ಪ್ರಭಾವಿ ರಾಜಕಾರಣಿಗಳ ಮೇಲುಗೈ
Published On - 5:22 pm, Thu, 28 October 21