ರಾಯಲ್ಟಿ ವಸೂಲಿಗೆ ನಿರ್ಲಕ್ಷ್ಯ: ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ಸುರೇಶ್ಗೌಡ, ಸಚಿವ ನಾರಾಯಣಗೌಡ ಅಸಮಾಧಾನ
ಶಾಸಕ ಸುರೇಶ್ ಗೌಡ ಅಧಿಕಾರಿಗಳ ವಿರುದ್ಧ ಹಫ್ತಾ ವಸೂಲಿ ಆರೋಪ ಮಾಡಿದ್ದರು. ಆದರೆ ಸಭೆಯಲ್ಲಿ ಪಾಲ್ಗೊಂಡಿದ್ದ ನಾರಾಯಣಗೌಡ ಮಾತ್ರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಏನೂ ಮಾತನಾಡಲಿಲ್ಲ.
ಮಂಡ್ಯ: ಗಣಿ ಇಲಾಖೆಯ ಕಾರ್ಯವೈಖರಿಗೆ ಶಾಸಕ ಮತ್ತು ಸಚಿವರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಶುಕ್ರವಾರ (ಫೆ 4) ನಡೆಯಿತು. ಗಣಿ ಇಲಾಖೆ ಸಚಿವ ಹಾಲಪ್ಪ ಆಚಾರ್ (Halappa Achar) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರಂಭದಲ್ಲೇ ಶಾಸಕ ಸುರೇಶ್ಗೌಡ (Suresh Gowda) ಅಧಿಕಾರಿಗಳಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಶಾಸಕರ ಮಾತಿಗೆ ಸಚಿವ ನಾರಾಯಣಗೌಡ ಸಹ ದನಿಗೂಡಿಸಿದರು. ರಾಯಲ್ಟಿ ವಸೂಲಿ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಿಲ್ಲೆಯ ರಾಜಧನ ವಸೂಲಾದ್ರೆ ಅರ್ಧ ಬಜೆಟ್ ತುಂಬುತ್ತೆ. ಯಾಕೆ ರಾಯಲ್ಟಿ ವಸೂಲಿಗೆ ಕ್ರಮ ವಹಿಸಿಲ್ಲ ಎಂದು ಶಾಸಕ ಸುರೇಶ್ಗೌಡ ಪ್ರಶ್ನಿಸಿದರು. ಸಚಿವ ನಾರಾಯಣಗೌಡ ಸಹ ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು. ‘ತೋರಿಸೋದು ಅರ್ಧ, ಇನ್ನರ್ಧ ಕಳ್ಳ ಮಾರ್ಗದಲ್ಲಿ ಸಾಗಣೆಯಾಗುತ್ತಿದೆ. ಈ ಬಗ್ಗೆ ವಿಸ್ತೃತ ಚರ್ಚೆ ಮಾಡಿ, ರೂಪರೇಷೆ ತಯಾರಿಸಬೇಕಿದೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಕ್ರಮ ವಹಿಸಬೇಕೆಂದು ಅವರು ಸಹ ಗಣಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರಿಗೆ ಮನವಿ ಮಾಡಿದರು. ಜಿಲ್ಲೆಯನ್ನು ನಡೆಸುತ್ತಿರುವವರು ಕ್ರಷರ್ ಮಾಲೀಕರು ಎಂಬಂಥ ಸ್ಥಿತಿ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾಕೆ ರಾಯಲ್ಟಿ ವಸೂಲಿಗೆ ಕ್ರಮ ವಹಿಸಿಲ್ಲ? ತೋರಿಸೋದು ಅರ್ಧ ಮಾಲು, ಇನ್ನರ್ಧ ಮಾಲು ಕಳ್ಳಸಾಗಣೆಯಾಗುತ್ತಿದೆ. ಲೆಕ್ಕ ತೋರಿಸುತ್ತಿರುವ ಅರ್ಧ ಮಾಲಿಗೂ ರಾಯಲ್ಟಿ ವಸೂಲಿ ಮಾಡುತ್ತಿಲ್ಲ. ನೀವ್ ನೀವೇ ಮಂತ್ಲಿ ಮಾಡ್ಕೊಂಡ್ ಸುಮ್ನಾಗ್ತಿದ್ದೀರಾ ಎಂದು ಪ್ರಶ್ನಿಸಿದರು. ಈ ಬಗ್ಗೆ ವಿಸ್ತೃತ ಚರ್ಚೆ ಮಾಡಿ, ರೂಪುರೇಷೆ ತಯಾರಿಸಬೇಕು. ಅಕ್ರಮ ಗಣಿಗಾರಿಕೆ ಕಡಿವಾಣಕ್ಕೆ ಕ್ರಮ ವಹಿಸಬೇಕು ಎಂದರು. ಶೌಚಾಲಯ ಕಟ್ಟಲು ಮರಳು ತರುವವರಿಗೂ ಕಿರುಕುಳ ಕೊಡಲಾಗುತ್ತಿದೆ. ಎತ್ತಿನಗಾಡಿಯಲ್ಲಿ ಮರಳು ತರುವವರಿಗೂ ತೊಂದರೆ ಕೊಡುತ್ತಿದ್ದಾರೆ. ಅಧಿಕಾರಿಗಳು ಬಡವರಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿದ್ದಾರೆ. ಆದರೆ ಅಕ್ರಮವಾಗಿ ಮರಳು ಸಾಗಿಸುವವರಿಗೆ ಏನೂ ಮಾಡುತ್ತಿಲ್ಲ. ಗಣಿ ಅಧಿಕಾರಿಗಳು ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಎಲ್ಲಿಯೂ ಉತ್ತಮ ಗುಣಮಟ್ಟದ ಎಂ ಸ್ಯಾಂಡ್ ಸಿಗುತ್ತಿಲ್ಲ. ಇದರಿಂದ ಕಟ್ಟಡಗಳು ಬಿರುಕು ಬಿಡುತ್ತಿವೆ. ಆದರೆ ಎತ್ತಿನಗಾಡಿಯಲ್ಲಿ ಮರಳು ತಂದರೆ ಅವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದರು.
ಅಕ್ರಮ ಮರಳು ದಂಧೆ ಬಗ್ಗೆ ಎಷ್ಟು ಕೇಸ್ ಹಾಕಿದ್ದೀರಿ ಎಂದು ಕೆ.ಆರ್.ಪೇಟೆ ತಾಲ್ಲೂಕು ಗಣಿ ಅಧಿಕಾರಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು. ನದಿಯಿಂದ ಪ್ರತಿದಿನ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ. ಆದರೆ, ಈ ಕುರಿತು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿಗಳು, ಪೊಲೀಸರು ಮಂತ್ಲಿ ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಗಣಿ ಇಲಾಖೆಯಲ್ಲಿ ಅಕ್ರಮ ಎನ್ನುವುದು ಹಲವು ವರ್ಷಗಳಿಂದ ನಡೆಯುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ಅಕ್ರಮಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಮಂಡ್ಯದಲ್ಲಿ ರೇಷ್ಮೆ ಖಾತೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. ಇದಕ್ಕೂ ಮುನ್ನಾ ಶಾಸಕ ಸುರೇಶ್ ಗೌಡ ಅಧಿಕಾರಿಗಳ ವಿರುದ್ಧ ಹಫ್ತಾ ವಸೂಲಿ ಆರೋಪ ಮಾಡಿದ್ದರು. ಆದರೆ ಸಭೆಯಲ್ಲಿ ಪಾಲ್ಗೊಂಡಿದ್ದ ನಾರಾಯಣಗೌಡ ಮಾತ್ರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಏನೂ ಮಾತನಾಡಲಿಲ್ಲ.
ಇದನ್ನೂ ಓದಿ: ಕೆಆರ್ಎಸ್ ಸುತ್ತಮುತ್ತ ಕಲ್ಲುಗಣಿಗಾರಿಕೆ: ಹೈಕೋರ್ಟ್ನಲ್ಲಿ ಲೈಸೆನ್ಸ್ ಅಮಾನತು ಪ್ರಶ್ನಿಸಿದ 17 ಕ್ವಾರಿ ಮಾಲೀಕರು ಇದನ್ನೂ ಓದಿ: ಅಧಿಕೃತ ಗಣಿಗಾರಿಕೆಯಿಂದಲೇ ತೊಂದರೆ: ಕ್ರಷರ್ ನಿಲ್ಲಿಸುವಂತೆ ಒತ್ತಾಯ, ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ -ಪರಿಸ್ಥಿತಿ ಉದ್ವಿಗ್ನ